Wednesday, August 4, 2010

ಗಾನ ಮಾಂತ್ರಿಕ ಕಿಶೋರ್ ಕುಮಾರ್

ಕಿಶೋರ್ ಕುಮಾರ್! – ಒಬ್ಬ ನಟ, ಹಾಸ್ಯನಟ, ಕತೆ-ಚಿತ್ರಕತೆಗಾರ, ನಿರ್ಮಾಪಕ, ನಿರ್ದೇಶಕ, ಸಂಕಲನಗಾರ, ಹಾಡುಗಾರ, ಲಿರಿಸಿಸ್ಟ್, ಸಂಗೀತ ನಿರ್ದೇಶಕ, ಇತ್ಯಾದಿ, ಇತ್ಯಾದಿ. ಈ ಚಿತ್ರರಂಗದ ಬ್ರಹ್ಮ ಸಿನಿಮಾ ಕ್ಷೇತ್ರದಲ್ಲಿ ಕೈಯಾಡಿಸದ ದಿಪಾರ್ಟ್‌ಮೆಂಟೇ ಇಲ್ಲ ಎನ್ನಬಹುದು. ಒಬ್ಬ ಹಾಸ್ಯನಟನಾಗಿ, ಹುಚ್ಚು ಹುಚ್ಚಾಗಿ ‘ಯೋಡೆಲ್ಲಿಂಗ್’ ಶೈಲಿಯಲ್ಲಿ ಹಾಡಿ ಕುಣಿಯುವ ಈತ ಅತ್ಯಂತ ಸೀರಿಯಸ್ ಸಿನೆಮಾಗಳನ್ನೂ ಮಾಡಿ ಸೈ ಎನಿಸಿಕೊಂಡಿದ್ದಾನೆ. ಆತನ ಹುಚ್ಚು ಕುಣಿದಾಟದ ಹಾಡುಗಳಷ್ಟೇ ಆತನ ಹೃದಯಸ್ಪರ್ಶಿ ದುಃಖಗೀತೆಗಳೂ ಜನಪ್ರಿಯವಾಗಿವೆ.

ಮಧ್ಯಪ್ರದೇಶದ ಖಾಂಡ್ವದಲ್ಲಿ ಜನಿಸಿದ, ಬೆಂಗಾಲಿ ಮನೆತನದ, ಅಭಾಸ್ ಕುಮಾರ್ ಗಂಗೂಲಿ ಎಂಬ ನಿಜ ನಾಮಧೇಯದ ಈ ಕಿಶೋರ್ ಕುಮಾರನಿಗೆ ಆಗಸ್ಟ್ ೪ ರಂದು ಜನುಮದಿನ. ಅಕ್ಟೋಬರ್ ೧೩, ೧೯೮೭ ಕ್ಕೆ ಹೃದಯಾಘಾತದಿಂದ ಮರಣಹೊಂದಿದ ಈತ ಇಂದು ನಮ್ಮೊಡನೆ ಇದ್ದಿದ್ದರೆ ೮೧ ತುಂಬುವ ದಿನ. ಪ್ರಪಂಚದಾದ್ಯಂತ ಆತನ ಜನ್ಮದಿನದಂದು ಆತನಿಗೆ ಶ್ರದ್ಧಾಂಜಲಿ ಅರ್ಪಣೆಯಾಗುತ್ತದೆ. ಆತನ ಅಭಿಮಾನಿಗಳೇ ಕಟ್ಟಿ ಬೆಳೆಸಿದ ವೆಬ್ ಸೈಟ್ www.yoodleeyoo.com ನಲ್ಲಿ ದಿನವಿಡೀ ಕಾರ್ಯಕ್ರಮ. ಜಗತ್ತಿನಾದ್ಯಂತ ಆತನ ಅಭಿಮಾನಿಗಳು ದಿನವಿಡೀ ಆತನ ಸಿನೆಮಾ, ಸಂಗೀತ, ಹಾಡುಗಳೊಂದಿಗೆ ಮೌನವಾಗಿ ವೇದನೆಯೊಂದಿಗೆ ದಿನಕಳೆಯುತ್ತಾರೆ. ಆತನ ಲಕ್ಷಾಂತರ ಅಭಿಮಾನಿಗಳಿಗೆ ಆತನ ಅಗಲಿಕೆ ಎಂದೆಂದಿಗೂ ತುಂಬಲಾರದ ನಷ್ಟ.

ಆಗಿನ ಕಾಲದ ಜನಪ್ರಿಯ ನಟ ಅಶೋಕ್ ಕುಮಾರ್‌ನ ಕಿರಿಯ ಸಹೋದರನಾದ ಈತನಿಗೆ ಬಾಲ್ಯದಿಂದಲೂ ಸಂಗೀತದಲ್ಲಿ ಒಲವು. ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಾಸವನ್ನು ಮಾಡೆದೇ ಇದ್ದರೂ ಬರೇ ಹುಟ್ಟು ಪ್ರತಿಭೆಯಿಂದ, ಸ್ವ-ಪ್ರಯತ್ನದಿಂದ ಅದ್ಭುತ ಹಾಡುಗಾರನಾಗಿ ಬೆಳೆದು ‘ತನ್ನ ಆರಾಧ್ಯದೈವ ಹಾಡುಗಾರ ಕೆ.ಎಲ್.ಸೈಗಲ್‌ನನ್ನು ಕಾಣಬೇಕು, ಆತನಂತೆಯೇ ಹಾಡುಗಾರನಾಗಬೇಕು’ ಎಂಬ ಹೆಬ್ಬಯಕೆಯೊಂದಿಗೆ ಮುಂಬೈಯಲ್ಲಿ ಬಂದಿಳಿದ. ಆದರೆ ಅಲ್ಲಿನ ಜನ ಅತನನ್ನು ಆತನ ಅಣ್ಣನಂತೆಯೇ ಒಬ್ಬ ನಟನನ್ನಾಗಿ ತಯಾರು ಮಾಡಲು ಹೊರಟರು. ತನಗೆ ಆಸಕ್ತಿಯಿಲ್ಲದ ನಟನೆಯಿಂದ ನುಣುಚಿಕೊಳ್ಳಲು ಮಂಗನಂತೆ, ಹುಚ್ಚನಂತೆ ಕೆಮರಾದ ಮುಂದೆ ವರ್ತಿಸಲು ತೊಡಗಿದ ಆತನ ವರ್ತನೆ ಆತನನ್ನು ೫೦-೬೦ ರ ದಶಕದ ಒಬ್ಬ ಹೆಸರಾಂತ ಹಾಸ್ಯನಟನನ್ನಾಗಿ ರೂಪಿಸಿತು.

ಮೊದಮೊದಲು ತನ್ನ ಸ್ವಂತ ಅಭಿನಯಕ್ಕೆ ಮತ್ತು ಎವರ್ಗ್ರೀನ್ ಹೀರೋ ದೇವಾನಂದ್‌ಗಾಗಿ ಹಾಡುತ್ತಾ ಜನರ ಮನಸ್ಸಿನಲ್ಲಿ ಬೇರೂರಿದ. ೧೯೬೯ ರ ‘ಆರಾಧನಾ’ ಚಿತ್ರದ ‘ಮೇರೆ ಸಪ್ನೋಂಕಿ ರಾನಿ’ ಹಾಡಿನೊಂದಿಗೆ ನಂ ೧ ಹಾಡುಗಾರನ ಪಟ್ಟಕ್ಕೇರಿದ ಈತ ಬಳಿಕ ಹಿಂದಿರುಗಿ ನೋಡಲೇ ಇಲ್ಲ. ರಾಜೇಶ್ ಖನ್ನ, ಅಮಿತಾಭ್ ಮೊದಲುಗೊಂಡು ಎಲ್ಲಾ ಹೀರೋಗಳಿಗೆ ಪ್ಲೇಬ್ಯಾಕ್ ಮಾಡತೊದಗಿದ.

ನಿಜ ಜೀವನದಲ್ಲಿ ಒಬ್ಬ ಅರೆಹುಚ್ಚನೆಂದೇ ಕರೆಯಲ್ಪಡುತ್ತಿದ್ದ ಈತನ ವ್ಯಕ್ತಿತ್ವ ತುಸು ವಿಕ್ಷಿಪ್ತವಾಗಿಯೇ ಇತ್ತು. ತನ್ನ ಆಪ್ತರೊಡನೆ ಮಾತ್ರ ಹೃದಯ ತೆರೆದು ನೈಜವಾಗಿ ವರ್ತಿಸುತ್ತಿದ್ದ ಈತನ ಸಾಮಾಜಿಕ ವರ್ತನೆ ಯಾವತ್ತೂ ವಿಚಿತ್ರವಾಗಿಯೇ ಇತ್ತು. ಒಬ್ಬ ಹುಚ್ಚ, ಜಿಪುಣ ಮತ್ತು ಮಹಾ ತುಂಟ ಎಂಬ ಚಿತ್ರಣ ಕೊಡುವಂತಹ ಹತ್ತು ಹಲವಾರು ತಮಾಷೆಯ ಘಟನೆಗಳು ಆತನ ಬಗ್ಗೆ ಸುತ್ತುತ್ತಾ ಇವೆ.

೧೯೫೭ ರಲ್ಲಿ ಮದ್ರಾಸಿನಲ್ಲಿ ಮಿಸ್ ಮೇರಿ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿತ್ತು. ಪ್ರೊಡ್ಯೂಸರ್ ಕಿಶೋರನಿಗೆ ಕೊಡಬೇಕಾದ ಸಂಭಾವನೆಯ ಅರೆವಾಶಿ ಮಾತ್ರ ಕೊಟ್ಟಿದ್ದನಂತೆ. ಇನ್ನರ್ಧವನ್ನು ಕೊಡದೇ ಇವತ್ತು-ನಾಳೆ ಎಂದು ಸತಾಯಿಸುತ್ತಿದ್ದನಂತೆ. ಅದಕ್ಕೆ, ಒಂದು ದಿನ ಶೂಟಿಂಗ್ ವೇಳೆಯಲ್ಲಿ ತನ್ನ ಅರ್ಧ ಮೀಸೆ ಮತ್ತು ಅರ್ಧ ತಲೆ ಬೋಳಿಸಿ ಕೆಮರಾದೆದುರು ಹಾಜರಾಗಿ ‘ಫಿಫ್ಟಿ ಪರ್ಸೆಂಟ್, ಫಿಫ್ಟಿ ಪರ್ಸೆಂಟ್’ ಎಂಬ ಡೈಲಾಗ್ ಹೊಡೆದು ಸೆಟ್‌ನಿಂದ ಸೀದಾ ಹೊರಕ್ಕೆ ಹೊರಟುಬಿಟ್ಟನಂತೆ.

ಅರುವತ್ತರ ದಶಕ ಕಿಶೋರನಿಗೆ ಒಬ್ಬ ಗಾಯಕ-ಹಾಸ್ಯನಟನಾಗಿ ಅತ್ಯಂತ ಬೇಡಿಕೆಯಿದ್ದ ಕಾಲ. ಆತನ ಮನೆಯ ಸುತ್ತುಮುತ್ತ ನಿರ್ಮಾಪಕರು ಕಾಲ್ ಶೀಟ್ ಹಿಡಿದು ಠಳಾಯಿಸುತ್ತಿದ್ದ ಕಾಲ. ಅವರುಗಳಿಂದ ತಪ್ಪಿಸಿಕೊಳ್ಳಲು ಆತನು ಬಹುಕೃತ ವೇಷಗಳನ್ನು ಹಾಕಿಕೊಳ್ಳಬೇಕಾಗುತ್ತಿತ್ತಂತೆ. ಒಂದು ದಿನ ಕಿಶೋರ್ ತನ್ನ ಮನೆ ‘ಗೌರಿಕುಂಜ್’ ನಿಂದ ಕಾರಿನಲ್ಲಿ ಹೊರ ಬಂದಾಕ್ಷಣ ಅಲ್ಲೇ ಹೊಂಚು ಹಾಕುತ್ತಿದ್ದ ಒಬ್ಬ ಕಾಲ್‌ಶೀಟಾಸಕ್ತ ಪ್ರೊಡ್ಯೂಸರ್ ಆತನನ್ನು ತನ್ನ ಕಾರಿನಲ್ಲಿ ಹಿಂಬಾಲಿಸಿದನಂತೆ. ಎಲ್ಲೋ ಒಂದುಕಡೆ ಕಿಶೋರ್‌ನನ್ನು ಅಡ್ಡಹಾಕಿ ಒಂದು ಸಿನೆಮಾಕ್ಕೆ ಸೈನ್ ಮಾಡಬೇಕು ಎಂದು ಕೇಳಿಕೊಂಡನಂತೆ. ಆಗ ಕಿಶೋರ್ ತಾನು ಕಿಶೋರ್ ಕುಮಾರ್‌ನಂತೆ ಕಾಣುತ್ತೇನಾದರೂ ತಾನು ಕಿಶೋರ್ ಕುಮಾರ್ ಅಲ್ಲವೇ ಅಲ್ಲ. ತಾನೊಬ್ಬ ಕ್ಲೋತ್ ಮರ್ಚೆಂಟ್ ವೆರಿ ಸಾರಿ ತಾನೇನೂ ಮಾಡಲಾರೆ ಅಂತ ನಾಟಕ ಮಾಡಿದನಂತೆ. ನಿಜಸ್ಥಿತಿ ತಿಳಿದಿದ್ದರೂ ಕಕ್ಕಾಬಿಕ್ಕಿಯಾದ ಪ್ರೊಡ್ಯೂಸರ್ ಏನೂ ಹೇಳಲಾರದೆ ಹೊರಟುಹೋದನಂತೆ.

ಆತನೇ ಹೋರೋ ಆಗಿ ನಟಿಸಿದ್ದ ‘ಹಾಫ್ ಟಿಕೆಟ್’ ಸಿನೆಮಾದ ಹಾಡುಗಳ ದ್ವನಿಮುದ್ರಣದ ಸಮಯ. ಲತಾ ಮಂಗೇಶ್ಕರ್ ಬರುವುದು ತಡವಾಗಿತ್ತು. ಕಾದು ಕಾದು ಸಾಕಾದ ಮ್ಯೂಸಿಕ್ ಡೈರೆಕ್ಟರ್ ಸಲೀಲ್ ಚೌಧರಿಗೆ ಕಿಶೋರ್ ಈ ಡುಯೆಟ್ ಹಾಡಿನ ಗಂಡು-ಹೆಣ್ಣು ಸ್ವರಗಳೆರಡರಲ್ಲೂ ತಾನೇ ಹಾಡುತ್ತೇನೆ ಎಂಬ ಸಲಹೆ ಕೊಟ್ಟು ಹಾಗೆಯೇ ಹಾಡಿ ತೋರಿಸಿದನಂತೆ. ‘ಆಕೇ ಸೀಧೀ ಲಗೀ. . .’ ಎಂಬ ಈ ಸೋಲೋ-ಡುಯೆಟ್ ಹಾಡಿಗೆ ಬಳಿಕ ಹೆಣ್ಣು ವೇಶವನ್ನೂ ಹಾಕಿ ಕುಣಿದು ಚಿತ್ರೀಕರಿಸಿಕೊಂಡನಂತೆ. ಇನ್ನೊಂದು ಸಿನೆಮಾದಲ್ಲಿ ಅರ್ಧನಾರೀಶ್ವರನಂತೆ ಅರ್ಧ ಗಂಡು ಅರ್ಧ ಹೆಣ್ಣು ವೇಶ ಧರಿಸಿ ಬರೇ ಸೈಡ್ ಪೋಜ಼್ ಮಾತ್ರ ತೋರಿಸುತ್ತಾ ಅತ್ಯಂತ ವಿಶೇಷ ರೀತಿಯಲ್ಲಿ ನರ್ತಿಸಿ ಗಂಡು-ಹೆಣ್ಣು- ಎರಡನ್ನೂ ಪ್ರಸ್ತುತ ಪಡಿಸಿದ ಅದ್ಭುತವನ್ನು ನೋಡಿಯೇ ಅನಂದಿಸಬೇಕು.

ತುರ್ತು ಪರಿಸ್ಥಿತಿಯಕಾಲ. ಸಂಜಯಗಾಂಧಿ ಮುಂಬಯಿಯ ಕಾಂಗ್ರೆಸ್ ರಾಲಿಗಾಗಿ ಹಾಡುವಂತೆ ಕಿಶೋರ್‌ನಿಗೆ ಮೆಸೇಜ್ ಕಳಿಸಿದನಂತೆ. ಅದನ್ನು ತಿರಸ್ಕರಿಸಿದ ಕಿಶೋರ್‌ನನ್ನು ಸಂಜಯ್ ಆಲ್ ಇಂಡಿಯಾ ರೇಡಿಯೋದಿಂದ ವರ್ಷಕ್ಕೂ ಮೀರಿ ನಿಷೇಧಿಸಿದನಂತೆ. ಪಟ್ಟು ಬಿಡದ ಇವರಿಬ್ಬರ ನಡುವಿನ ಸಮರವನ್ನು ಇತರರು ಹೇಗೋ ಮಾಡಿ ನಿಲ್ಲಿಸಿದರಂತೆ. ಆ ಸಮಯದಲ್ಲೂ ಆತನ ಜನಪ್ರಿಯತೆ ಕಿಂಚಿತ್ತೂ ಇಳಿದಿರಲಿಲ್ಲ.

ಕಿಶೋರ್‌ನಷ್ಟು ಇನ್‌ಕಂ ಟಾಕ್ಸ್ ಅಫೀಸರರಿಗೆ ಕಾಲೆಳೆದು ಪೀಡೆ ಕೊಟ್ಟು ಸತಾಯಿಸಿದ ವ್ಯಕ್ತಿ ಬೇರೊಬ್ಬ ಇರಲಿಕ್ಕಿಲ್ಲ. ಸಂಜಯ ಗಾಂಧಿಯ ಹೇಳಿಕೆಯ ಮೇರೆಗೆಯೇ ಆತನ ಮನೆಗೆ ಟಾಕ್ಸ್ ರೈಡ್ ಮಾಡಿದ ಅಧಿಕಾರಿಗಳು ‘ದುಡ್ಡನ್ನು ಎಲ್ಲಿಟ್ಟಿದ್ದೀಯಾ’ ಎಂದು ಕೇಳಿದ್ದಕ್ಕೆ ‘ಅಗೋ, ಅಲ್ಲಿ, ಆ ತೆಂಗಿನ ಮರದ ತುದಿಯಲ್ಲಿ, ಹತ್ತಿ ಹೋಗಿ ತೆಗೆದುಕೋ’ ಎಂತಲೋ ಅಥವಾ ‘ಇಗೋ ಇಲ್ಲಿ, ಈ ಜಾಗದಲ್ಲಿ, ಭೂಮಿತಾಯಿಯ ಮಡಿಲಲ್ಲಿ, ಅಗೆದು ತೆಗೆದುಕೋ’ ಅಂತಲೋ ಹೇಳಿ ಸತಾಯಿಸುತ್ತಿದ್ದನಂತೆ. ಮತ್ತು, ಸಮಯ ಸಿಕ್ಕಾಗಲೆಲ್ಲಾ ಆತ ತೆರಿಗೆ ಅಧಿಕಾರಿಗಳನ್ನು ಲೇವಡಿ ಮಾಡುತ್ತಲೇ ಇರುತ್ತಿದ್ದ. ತೆರಿಗೆ ವಿಷಯಕ್ಕೆ ಆತನ ಅರೆಸ್ಟ್ ಕೂಡಾ ಆಗಿತ್ತು. ಇನ್‌ಕಂ ಟಾಕ್ಸ್ ಅಧಿಕಾರಿಗಳನ್ನು ಲೇವಡಿ ಮಾಡುವಂತಹ ‘ಜಯಗೋವಿಂದಂ ಜಯಗೋಪಾಲಂ’ ಒಂದು ಹಾಡನ್ನೇ ಸೃಷ್ಟಿ ಮಾಡಿದ್ದ. ‘ಆಶೀರ್ವಾದಂ ಅಶೋಕ್ ಕುಮಾರಂ, ಪ್ರೇಮ್ ಪೂಜಾರಿ ದೇವಾನಂದಂ, ಎಂದೆಲ್ಲಾ ಹಲವಾರು ಪ್ರಸಿದ್ಧ ಚಿತ್ರ ತಾರೆಯರ ಹೆಸರುಳ್ಳ ಆ ಹಾಡಿನಲ್ಲಿ ಕೊನೆಗೆ ‘ಸಬ್ಕೇ ಪೀಚೇ ಇನ್‌ಕಂ ಟಾಕ್ಸಂ’ ಎಂದು ಅವರ ಕಾಲೆಳೆಯುವ ಲೈನ್ ಬರುತ್ತದೆ. ಅಷ್ಟು ಹೇಳಿ ‘ಏನೇ ಆದರೂ ತನ್ನ ಮೀಸೆಗೆ ಮಣ್ಣೇ ಆಗುವುದಿಲ್ಲ’ ಎಂಬಂತೆ ಕಟ್ಟ ಕಡೆಗೆ ‘ಭಮ್ ಭಮ್ ನಾಚೇ ಕಿಶೋರ್ ಕುಮಾರಂ; ಭಮ್ ಭಮ್ ಮಕ್ರ್ ಭಮ್ ಭಮ್ ಮಕ್ರ್. . .’ ಎಂದು ಅಪ್ಪಟ ಕಿಶೋರ್ ಸ್ಟೈಲಿನಲ್ಲಿ ಅವರನ್ನು ಮೂದಲಿಸುತ್ತಾನೆ.

ಎಂಭತ್ತರ ದಶಕದಲ್ಲಿ ಬಪ್ಪಿ ಲಹಿರಿಯ ಸಂಗೀತ ನಿರ್ದೇಶನದ ಆತನ ಹಲವು ಗೀತೆಗಳು ಜನಪ್ರಿಯವಾಗಿದ್ದವು. ರಿಹರ್ಸಲ್ ಟೈಮಿನಲ್ಲಿ ಎಂದೂ ಸರಿಯಾಗಿ ಹಾಡದ ಕಿಶೋರ್ ಬಪ್ಪಿಗೆ ಸಾಕಷ್ಟು ಟೆನ್ಷನ್ ಕೊಡುತ್ತಿದ್ದನಂತೆ. ‘ಚಾಚಾ, ಇನ್ನಷ್ಟು ಸ್ವಲ್ಪ ಭಾವನೆ ಕೊಟ್ಟು ಹಾಡಿ’ ಎಂದು ಕೇಳಿಕೊಳ್ಳುವ ಬಪ್ಪಿಗೆ, ‘ನೋಡಪ್ಪಾ, ನಿನ್ನ ಪ್ರೊಡ್ಯೂಸರ್ ಕೊಡುವ ದುಡ್ಡಿಗೆ ಇಷ್ಟು ಇಮೋಶನ್ ಸಾಕು; ಇನ್ನೂ ಜಾಸ್ತಿ ಬೇಕೆಂದರೆ ಇನ್ನೂ ಸ್ವಲ್ಪ ಜಾಸ್ತಿ ಸಂಭಾವನೆ ಕೊಡಲು ಹೇಳು’ ಎಂದು ಹೇಳಿ ಟೆನ್ಷನ್ ಕೊಡುತ್ತಿದ್ದ ಕಿಶೋರ್ ಫೈನಲ್ ರೆಕಾರ್ಡಿಂಗ್‌ನಲ್ಲಿ ಮಾತ್ರ ಅದ್ಭುತವಾಗಿ ಹಾಡಿ ಖುಶಿ ನೀಡುತ್ತಿದ್ದನಂತೆ.

ದುಡ್ಡು ಖರ್ಚು ಮಾಡಿ ಅತ್ಯಂತ ಆಸ್ಥೆಯಿಂದ ಒಂದು ಸಿನೆಮಾ ಮಾಡಿ ಅದರ ಮಾರಾಟದ ಸಂದರ್ಭ ಬಂದಾಗ ‘ಅಯ್ಯೋ, ಆ ಸಿನೆಮವಾ, ಅದು ಮಹಾ ಬೋರ್, ಒಂದು ದಿನವೂ ಓಡಲಿಕ್ಕಿಲ್ಲ, ದಯವಿಟ್ಟು ಅದನ್ನು ಕೊಳ್ಳಬೇಡಿ, ದಿವಾಳಿ ಹೋದೀರಿ’ ಎಂದು ಫೋನ್ ಮಾಡಿ ವಿಚಾರಿಸುವ ಡಿಸ್ಟ್ರಿಬ್ಯೂಟರರಿಗೆ ಹೇಳುತ್ತಿದ್ದನಂತೆ, ಈ ಪರಮ ವಿಕ್ಷಿಪ್ತ!!

ಆಲ್ಫ್ರೆಡ್ ಹಿಚ್‌ಕಾಕ್‌ನ ಅಭಿಮಾನಿಯಾದ ಕಿಶೋರ್‌ನ ಬಳಿ ಹೊರ್ರರ್ ಚಿತ್ರಗಳ ವೀಡಿಯೋಗಳ ಅದ್ಭುತ ಕಲೆಕ್ಷನ್ ಇತ್ತು. ಭಯಾನಕ ಚಿತ್ರಗಳನ್ನು ರಾತ್ರಿ ಕೂತು ನೋಡಿ ಅನಂದಿಸುತ್ತಿದ್ದನಂತೆ. ಮನುಷ್ಯರ ನೈಜ ವ್ಯಕ್ತಿತ್ವ ಅಲ್ಲಿ ವ್ಯಕ್ತವಾಗುತ್ತದೆ. ನಮಗೆ ಕಾಣುವದು ನೈಜವಲ್ಲ, ಬರೇ ನಾಟಕ ಎಂಬ ಸಮಜಾಯಿಷಿ ನೀಡುತ್ತಿದ್ದನಂತೆ. ತನ್ನ ಮನೆಯ ಅಂಗಳದಲ್ಲಿರುವ iರಗಳಿಗೆ ಮನುಷ್ಯರಂತೆ ಜನಾರ್ಧನ್, ರಘುನಂದನ್, ಗಂಗಾಧರ್, ಇತ್ಯಾದಿ ಹೆಸರುಗಳನ್ನಿಟ್ಟಿದ್ದ ಆತ ಅವುಗಳೊಡನೆ ಸಂಭಾಷಿಸುತ್ತಿದ್ದನಂತೆ. ಆತನನ್ನು ಇಂಟರ್ವ್ಯೂ ಮಾಡಲು ಬಂದ ಒಬ್ಬ ಹುಡುಗಿಗೆ ಆ ಮರಗಳನ್ನು ಅವುಗಳ ಹೆಸರಿನೊಂದಿಗೆ ಪರಿಚಯ ಮಾಡಿಸಿದ್ದು ಭಾರೀ ದೊಡ್ಡ ಸುದ್ದಿಯಾಗಿತ್ತು. ಇನ್ನೊಮ್ಮೆ ಇಂಟೀರಿಯರ್ ಡೆಕೋರೇಶನ್ ಮಾಡಲು ಬಂದಿದ್ದ ಒಬ್ಬ ಸೂಟೆqಟ್-ಬೂಟೆಡ್ ಆಸಾಮಿಗೆ ತನಗೆ ಮನೆಯ ಡ್ರಾಯಿಂಗ್ ರೂಮಿನಲ್ಲಿ ಒಂದು ಕೊಳ, ಕೆಲವು ಬೋಟ್‌ಗಳು, ಮದ್ಯದಲ್ಲಿ ಟೀ-ಟೇಬಲ್, ಗೋಡೆಯಲ್ಲಿ ಜೀವಂತ ಕಾಗೆಗಳು, ಸೀಲಿಂಗ್‌ನಿಂದ ನೇತಾಡುವ ಮಂಗಗಳು, ಇತ್ಯಾದಿ ಬೇಕು ಎಂದಿದ್ದನಂತೆ.

ಆತನ ಮನೆಯ ಶೋಕೇಸಿನಲ್ಲಿ ಹಿತ್ತಿಲಿನಲ್ಲಿ ಅಗೆಯುವಾಗ ಸಿಕ್ಕಿದ ಒಂದು ಮನುಷ್ಯನ ಬುರುಡೆ ಇತ್ತು. ಅದರಲ್ಲಿ ಕಣ್ಣುಗಳ ಬದಲು ಎರಡು ಕೆಂಪು ಬಲ್ಬುಗಳನ್ನು ಅಳವಡಿಸಿದ್ದ. ಆ ಬುರುಡೆಯನ್ನು ತನ್ನ ಮುಖಕ್ಕೆ ತಾಗಿಸಿ ಹಿಡಿದುಕೊಂಡು ‘ಇಲ್ಲಸ್ತ್ಟ್ರೇಟೆಡ್ ವೀಕ್ಲಿ’ ಯ ಮುಖಮುಟದಲ್ಲಿ ‘ದ ಕ್ರಾಂಕಿ ಜೀನಿಯಸ್’ ಎಂಬ ತಲೆಬರಹದೊಂದಿಗೆ ಕಾಣಿಸಿಕೊಂಡಿದ್ದ. ಸಂಪಾದಕ ಪ್ರೀತಿಶ್ ನಂದಿಯೊಡನೆ ‘ನಮ್ಮೆಲ್ಲರ ಭವಿಷ್ಯ ಈ ತಲೆಬುರುಡೆಯೇ, ಒಂದು ದಿನ ನಾವೆಲ್ಲರೂ ಇದೇ ಆಗುವುದು’ ಎಂದು ಶೂನ್ಯವಾದಿಯಂತೆ ಡೈಲಾಗ್ ಹೊಡೆದಿದ್ದು ಪ್ರಕಟವಾಗಿತ್ತು.

ಇಂತಹ ಹಲವಾರು ದಂತಕತೆಗಳು ಕಿಶೋರ್ ಕುಮಾರ್‌ನ ಸುತ್ತ ರೌಂಡ್ ಹೊಡೆಯುತ್ತಲೇ ಇವೆ. ಆತನ ಅಭಿಮಾನಿಗಳಿಗೆ ಅವನ್ನು ಕೇಳಿದಷ್ಟೂ ಖುಶಿ. ಆತನನ್ನು ಹುಚ್ಚ, ವಿಕ್ಷಿಪ್ತ, ಮರುಳ ಎಂದೆಲ್ಲ ಕರೆದರೆ ಅವರಿಗೆ ಹೆಮ್ಮೆಯೇ!! ಏನೂ ಬೇಜಾರಿಲ್ಲ ಸಾರ್. ಅವರುಗಳು ಆತನನ್ನು ಸ್ವೀಕರಿಸಿದ್ದು ಹಾಗೆಯೇ. ಕಲೆ, ಜೀನಿಯಸ್ ಮತ್ತು ವಿಕ್ಷಿಪ್ತತೆ. . . . ಎಲ್ಲವೂ ಒಂದು ರೀತಿಯಲ್ಲಿ ಇಂಟರ್‌ಕನೆಕ್ಟೆಡ್ಡೇ ಅಲ್ಲವೇ?

ಅಗಸ್ಟ್ ೪- ಆತನ ಬರ್ತ್‌ಡೇ.

ಕಿಶೋರೋಗ್ರಫಿ:

ಹೆಸರು: ಅಭಾಸ್ ಕುಮಾರ್ ಗಂಗೂಲಿ (ಕಿಶೋರ್ ಕುಮಾರ್)

ಜನನ: ಆಗಸ್ಟ್ ೪, ೧೯೨೯ (ಖಂಡ್ವ, ಮದ್ಯಪ್ರದೇಶ್)

ಮರಣ: ಅಕ್ಟೋಬರ್ ೧೩, ೧೯೮೭

ನಟಿಸಿದ ಸಿನೆಮಾ: ೯೨

ನಿರ್ಮಿಸಿ ನಿರ್ದೇಷಿಸಿದ ಸಿನೆಮಾ: ೧೦

ಫ಼ಿಲ್ಮ್ ಫ಼ೇರ್ ಅವಾರ್ಡ್: ೮ (೨೭ ಬಾರಿ ನಾಮಿನೇಟೆಡ್)

ಸಂಗೀತ ನೀಡಿದ ಸಿನೆಮಾ: ೧೦ (ಜುಮ್ರೂ, ದೂರ್ ಗಗನ್ ಕಿ ಛಾವ್ ಮೆ, ದೂರ್ ಕಾ ರಾಹಿ, ಚಲ್ತಿ ಕ ನಾಮ್ ಜಿಂದಗಿ, ಇತ್ಯಾದಿ)

ಹಾಡುಗಳು: ಸುಮಾರು ೨೭೦೦

ಕನ್ನಡ ಹಾಡು: ೧ (ಕುಳ್ಳ ಏಜೆಂಟ್ ೦೦೦; ದಲ್ಲಿ ದ್ವಾರಕೀಶ್ ಮೇಲೆ ಚಿತ್ರಿತ ‘ಆಡೂ ಆಟ ಆಡೂ’)

ವೆಬ್ ತಾಣ: www.yoodleeyoo.com

No comments: