Saturday, August 28, 2010

ರಂಗಗೀತೆಗಳ ಪುಸ್ತಕ ಮತ್ತು ಸಿಡಿ

ಸೋಮವಾರ, ಮಾರ್ಚ್ 15, 2010, 16:18[IST]* ಪ್ರೊ|ಲಿಂಗದೇವರು ಹಳೆಮನೆ, ಮೈಸೂರು

ವೃತ್ತಿರಂಗಭೂಮಿಯ ದೊಡ್ಡ ಆಕರ್ಷಣೆಗಳಲ್ಲಿ ರಂಗಗೀತೆಗೆ ಅಗ್ರಸ್ಥಾನ. ನಟ, ನಟಿಯರ ಅಭಿನಯ ಸಾಮರ್ಥ್ಯವನ್ನು ಪ್ರೇಕ್ಷಕರು ಅಳೆಯುವಾಗ ಅವರು ಹಾಡುತ್ತಿದ್ದ ಗೀತೆಗಳನ್ನೂ ಗಮನಕ್ಕೆ ತೆಗೆದುಕೊಳ್ಳುತ್ತಿದ್ದರು. ಆದ್ದರಿಂದಲೇ ವೃತ್ತಿರಂಗಭೂಮಿಯ ನಟ, ನಟಿಯರಿಗೆ ಶರೀರ ಮತ್ತು ಶಾರೀರ ಎರಡನ್ನೂ ಒಟ್ಟೊಟ್ಟಿಗೇ ಸಮರ್ಥವಾಗಿ ಕಾಪಾಡಿಕೊಂಡು ಬರುವ ಅನಿವಾರ್ಯತೆ ಇತ್ತು. ಇಂದು ನಾವು ಗೌರವದಿಂದ ನೆನಪಿಸಿಕೊಳ್ಳುವ ಕೊಟ್ಟೂರಪ್ಪನವರು, ಗುಬ್ಬಿ ವೀರಣ್ಣನವರು, ಸಿ.ಬಿ. ಮಲ್ಲಪ್ಪನವರು, ಜಿ. ನಾಗೇಶರಾಯರು, ಗಂಗಾಧರರಾಯರು, ಹೊನ್ನಪ್ಪ ಭಾಗವತರ್, ಮಳವಳ್ಳಿ ಸುಂದರಮ್ಮ ಮುಂತಾದವರು ಅಭಿನಯ ಮತ್ತು ಗೀತಗಾಯನ ಇವೆರಡನ್ನೂ ಸಂಮೋಹಕವಾಗಿ ಮೇಳೈಸಿದುದರಿಂದ ವೃತ್ತಿ ರಂಗಭೂಮಿಗೊಂದು ವಿಶೇಷ ಆಕರ್ಷಣೆ ಒದಗಿ ಬಂದಿದೆ.

ಇಂದು ವೃತ್ತಿ ರಂಗಭೂಮಿ ಕಣ್ಮರೆಯಾಗಿ ಅದರ ಸ್ಥಾನದಲ್ಲಿ ಹವ್ಯಾಸಿ ರಂಗಭೂಮಿ ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದೆ. ವೃತ್ತಿ ರಂಗಭೂಮಿಯ ರಂಗಸಂಗೀತಕ್ಕೂ ಹವ್ಯಾಸಿ ರಂಗಭೂಮಿಯ ರಂಗಸಂಗೀತಕ್ಕೂ ಬಹುದೊಡ್ಡ ವ್ಯತ್ಯಾಸ ಕಂಡುಬರುತ್ತಿದೆ. ವೃತ್ತಿರಂಗಭೂಮಿ ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ ಮತ್ತು ಪಾಶ್ಚಾತ್ಯ ಸಂಗೀತಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಅತ್ಯಂತ ಸಮರ್ಥವಾಗಿ ಬಳಸಿಕೊಂಡು ಬಂದಿದೆ. ಹಾರ್ಮೋನಿಯಂ, ತಬಲಾ, ಕೊಳಲು ಮುಂತಾದ ಶಾಸ್ತ್ರೀಯ ವಾದ್ಯಪರಿಕರಗಳನ್ನು ಬಳಸಿಕೊಂಡು ಅವರು ಸಂಯೋಜಿಸುತ್ತಿದ್ದ ಆ ರಾಗಗಳು ನಿಜವಾಗಿಯೂ ‘ಗಾಂಧರ್ವ’ ಸಂಗೀತದ ಭಾಗಗಳೇ ಆಗಿರುತ್ತಿದ್ದವು.

ಅಂಥ ವೃತ್ತಿರಂಗಭೂಮಿಯ ಸಂಗೀತ ಕೂಡಾ ಹೆಚ್ಚು ಕಡಿಮೆ ವೃತ್ತಿ ರಂಗಭೂಮಿಯ ಪ್ರದರ್ಶನಗಳ ಜೊತೆಜೊತೆಗೇ ನಮ್ಮಿಂದ ಕಣ್ಮರೆಯಾಗುತ್ತಿದೆ. ಅಂಥ ಒಂದು ಅದ್ಭುತ ಪ್ರದರ್ಶಕ ರಂಗಸಂಗೀತ ನಶಿಸದೆ ಮುಂದಿನವರಿಗೂ ದೊರಕುವಂತಾಗಬೇಕು. ಇತ್ತೀಚಿನ ದಿನಗಳಲ್ಲಿ ಈ ರಂಗಸಂಗೀತದ ಬಗ್ಗೆ ಆಸಕ್ತಿ ಇರುವ ರಸಿಕರು, ಸಂಘ ಸಂಸ್ಥೆಗಳು ಸಾಧ್ಯವಾದಷ್ಟು ಅವುಗಳನ್ನು ಧ್ವನಿ ಮುದ್ರಿಸಿಯೋ ಇಲ್ಲ ಪುಸ್ತಕದ ರೂಪದಲ್ಲಿ ಪ್ರಕಟಿಸಿಯೋ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಂಥವರ ಪ್ರಯತ್ನಗಳನ್ನು ನಾವು ಕೃತಜ್ಞತಾಪೂರ್ವಕವಾಗಿ ಸ್ವಾಗತಿಸಬೇಕಾಗಿದೆ.

ಎಚ್.ಎಸ್. ಗೋವಿಂದಗೌಡರು ಅಂಥ ರಂಗಸಂಗೀತ ರಸಿಕರಲ್ಲಿ ಒಬ್ಬರು. ಅವರು ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಕೆಲಸ ಮಾಡಿ ನಿವೃತ್ತರಾದವರು. ಚಿಕ್ಕಂದಿನಿಂದಲೂ ಅವರಿಗೆ ವೃತ್ತಿರಂಗಭೂಮಿಯ ಬಗ್ಗೆ, ಮುಖ್ಯವಾಗಿ ಅಲ್ಲಿಯ ರಂಗ ಸಂಗೀತದ ಬಗ್ಗೆ ಬಹಳ ದೊಡ್ಡ ಆಸಕ್ತಿ. ಅವರ ಇಬ್ಬರು ಚಿಕ್ಕಪ್ಪಂದಿರಿಗೆ ನಾಟಕದಲ್ಲಿ ಆಸಕ್ತಿ. ಅವರು ಬಾಲಕ ಗೋವಿಂದಗೌಡರ ನಾಟಕದ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಆ ಪ್ರೋತ್ಸಾಹ ಗೋವಿಂದಗೌಡರನ್ನು ಜೀವನ ಪರ್ಯಂತ ರಂಗಭೂಮಿಯ ಕಡೆಗೆ ಸೂಜಿಗಲ್ಲಿನಂತೆ ಆಕರ್ಷಿಸಿತು. ತಾವು ವಾಣಿಜ್ಯ ಅಧಿಕಾರಿಯಾಗಿದ್ದಾಗ ಅವರು ರಂಗಗೀತೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಬರೀ ಸಂಗ್ರಹಿಸಿದರಷ್ಟೇ ಸಾಲದು; ಅವುಗಳು ಬೇರೆಯವರಿಗೂ ದೊರಕುವಂತಾಗಬೇಕು ಎಂಬ ಆಸೆಯಿಂದ ಅವುಗಳನ್ನು ಪ್ರಕಟಿಸಲು ಹಾಗೂ ಧ್ವನಿ ಮುದ್ರಿಸಲು ಮುಂದಾದರು.

ಸುಮಾರು ಆರೇಳು ವರ್ಷಗಳ ಹಿಂದೆ ಅವರು ಸುಮಾರು ಒಂದು ಸಾವಿರದ ಏಳುನೂರರಷ್ಟು ರಂಗಗೀತೆಗಳನ್ನು ಒಂದೆಡೆ ಸಂಕಲಿಸಿ ಪ್ರಕಟಿಸಿದರು. ಅಲ್ಲದೆ ಅವುಗಳಲ್ಲಿ ಆಯ್ದ ಗೀತೆಗಳನ್ನು ಧ್ವನಿ ಮುದ್ರಿಸಿ ಹದಿನೈದು ಧ್ವನಿ ಮುದ್ರಿಕೆಗಳನ್ನು ಮಾರುಕಟ್ಟೆಗೆ ತಂದರು. ಆಗ ರಂಗಭೂಮಿಯ ಕಲಾವಿದರನ್ನೇ ಆಮಂತ್ರಿಸಿ ಅವರಿಂದಲೇ ಆ ಹಾಡುಗಳನ್ನು ಹಾಡಿಸಿದ್ದು ಆ ಧ್ವನಿ ಮುದ್ರಿಕೆಗಳ ಹೆಗ್ಗಳಿಕೆ. ಬಹುಶಃ ನನಗೆ ಗೊತ್ತಿರುವ ಹಾಗೆ ಅಂದಿನ ದಿನಗಳಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಂಗ ಗೀತೆಗಳು ಮುದ್ರಣದಲ್ಲಿ ಹಾಗೂ ಮುದ್ರಿಕೆಯಲ್ಲಿ ಹೊರಬಂದಿದ್ದು ಅದೇ ಮೊದಲು. ಗೌಡರು ತಾವು ಖರ್ಚುಮಾಡಿದ ಹಣವನ್ನು ವಾಪಸ್ ಪಡೆದರೋ ಇಲ್ಲವೋ ತಿಳಿಯದು. ಆದರೆ ಅವರಿಗೆ ಒಂದು ಸಾರ್ಥಕ ಕೆಲಸ ಮಾಡಿದ ತೃಪ್ತಿ ಉಂಟಾಗಿತ್ತು.

ಈಗ ಮತ್ತೆ ಅವರು ಅಂಥದೇ ಮಹತ್ತರವಾದ ಕೆಲಸಕ್ಕೆ ಕೈಹಾಕಿದ್ದಾರೆ. ನಮ್ಮ ಮಧ್ಯೆ ಇರುವ ವೃತ್ತಿ ರಂಗಭೂಮಿಯ ಅತ್ಯಂತ ಹಿರಿಯ ಸಂಗೀತ ಸಂಯೋಜಕರಾದ ವಿದ್ವಾನ್ ಆರ್. ಪರಮಶಿವನ್ ಅವರಿಂದ ಹಾಡುಗಳನ್ನು ಬರೆಯಿಸಿ ಅವುಗಳನ್ನು ಅಚ್ಚು ಹಾಕಿಸುವುದರ ಜೊತೆಗೆ ಅವುಗಳಲ್ಲಿ ಕೆಲವನ್ನು ಆಯ್ದು ಎಂಟು ಸಿ.ಡಿ. ರೂಪದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆರ್. ಪರಮಶಿವನ್ ವೃತ್ತಿರಂಗಭೂಮಿಯ ಅತ್ಯಂತ ಪ್ರತಿಭಾವಂತ ರಂಗಸಂಗೀತ ನಿರ್ದೇಶಕರು ಮತ್ತು ಹಾಡುಗಾರರು. ಎಪ್ಪತ್ತೊಂಬತ್ತು ವರ್ಷದ ಆರ್. ಪರಮಶಿವನ್ ತಮ್ಮ ನಾಲ್ಕನೇ ವಯಸ್ಸಿಗೇ ರಂಗಭೂಮಿ ಪ್ರವೇಶ ಮಾಡಿದವರು. ಅಂದರೆ 75 ವರ್ಷಗಳ ಕಾಲ ಸತತವಾಗಿ ಕನ್ನಡ ವೃತ್ತಿರಂಗದ ಮೇಲೆ ಕಾಣಿಸಿಕೊಂಡವರು. ಇಡೀ ವೃತ್ತಿರಂಗಭೂಮಿಯ ರಂಗಸಂಗೀತದ ಅವಿಭಾಜ್ಯ ಅಂಗವಾಗಿ ಇದ್ದವರು.

ಅಂಥವರನ್ನು ಮುಂದುಮಾಡಿಕೊಂಡು, ಅವರ ನೆನಪಿನ ಮೂಸೆಯಿಂದ ಒಂದು ಸಾವಿರದ ಐದುನೂರು ರಂಗ ಗೀತೆಗಳನ್ನು ಬರೆಯಿಸಿ ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಮುಂದಾಗಿದ್ದಾರೆ ಎಚ್.ಎಸ್. ಗೋವಿಂದಗೌಡರು. ಅಲ್ಲದೆ ಎಂಟುನೂರ ಎಪ್ಪತ್ತೈದು ರಂಗ ಗೀತೆಗಳಿಗೆ ಆರ್. ಪರಮಶಿವನ್ ಅವರಿಂದ ಸಂಗೀತ ಸಂಯೋಜಿಸಿ, ಈಗಾಗಲೇ ವೃತ್ತಿರಂಗಭೂಮಿಯ ಹಾಡನ್ನು ಹಾಡಲು ತರಬೇತಿ ಪಡೆದಿರುವ ಗಾಯಕರನ್ನು ಸೇರಿಸಿ, ಹಾಡಿಸಿ, ಎಂಟು ಸಿ.ಡಿ. ಗಳನ್ನೂ ಬಿಡುಗಡೆ ಮಾಡುತ್ತಿದ್ದಾರೆ. ವೃತ್ತಿ ರಂಗಭೂಮಿಗೆ ಇದೊಂದು ಬಹುದೊಡ್ಡ ಬಂಪರ್.

ಎಚ್.ಎಸ್. ಗೋವಿಂದಗೌಡರು ಮತ್ತು ಆರ್. ಪರಮಶಿವನ್ ಜೋಡಿ ಶ್ರಮವಹಿಸಿ ಒಂದು ಕಾಲದ ಸಂಗೀತ ವೈಭವವನ್ನು ಮುಂದಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ. ಇವರಿಬ್ಬರ ಪ್ರಯತ್ನಕ್ಕೆ ಕನ್ನಡಿಗರು ಮನ್ನಣೆ ನೀಡಬೇಕು. ತಾವು ನಂಬಿದ ಕಲೆಯ ಉದ್ಧಾರಕ್ಕೆ, ಪೋಷಣೆಗೆ ಮತ್ತು ಬಳಕೆಗೆ ಗೋವಿಂದಗೌಡರು ಸದಾ ಚಿಂತಿಸುತ್ತಿರುತ್ತಾರೆ. ಅವರು ಸುದ್ದಿ ಮಾಡುವ ವ್ಯಕ್ತಿ ಅಲ್ಲ. ತಮ್ಮ ಸಾಧನೆಯ ಬಗ್ಗೆ ಪ್ರಚಾರ ಮಾಡಿಕೊಳ್ಳುವವರೂ ಅಲ್ಲ. ತಮ್ಮಷ್ಟಕ್ಕೆ ತಾವು ನಂಬಿದ ಕೆಲಸವನ್ನು ಸದ್ದಿಲ್ಲದೆ ಪೂರೈಸುವುದಷ್ಟೇ ಅವರಿಗೆ ಗೊತ್ತು. ಒಂದು ನಾಟಕ ಬರೆದೋ, ಒಂದು ಧ್ವನಿ ಸುರುಳಿ ಹೊರತಂದೋ ಭಾರಿ ಸುದ್ದಿ ಮಾಡಿದ ವ್ಯಕ್ತಿಗಳು ನಮ್ಮ ಮಧ್ಯೆ ಇದ್ದಾರೆ. ಆದರೆ ಗೋವಿಂದಗೌಡರು ರಂಗಗೀತೆಯಂಥ ಬೃಹತ್ ಪುಸ್ತಕ ಹಾಗೂ ಹದಿನೈದು ಧ್ವನಿ ಮುದ್ರಿಕೆಗಳನ್ನು ಹರತಂದೂ ಅಜ್ಞಾತರಾಗಿಯೇ ಉಳಿಯುತ್ತಾರೆ. ಅದು ಗೋವಿಂದಗೌಡರ ವ್ಯಕ್ತಿತ್ವ.

ಅವರ ಈಗಿನ ಪ್ರಯತ್ನವೂ ಯಶಸ್ವಿಯಾಗಲಿ. ವೃತ್ತಿ ರಂಗಭೂಮಿಯ ರಂಗಸಂಗೀತದ ಉಳಿವಿಗೆ ಶ್ರಮಿಸುತ್ತಿರುವ ಎಚ್.ಎಸ್. ಗೋವಿಂದಗೌಡರ ಕೊಡುಗೆಯನ್ನು ಎಲ್ಲರೂ ಗುರುತಿಸುವಂತಾಗಲಿ.

[ರಂಗಗೀತೆಗಳು ಭಾಗ-1 ಮತ್ತು ಭಾಗ-2; ಸಂಗ್ರಹಕಾರರು: ಆರ್. ಪರಮಶಿವನ್ ಮತ್ತು ಎಚ್.ಎಸ್. ಗೋವಿಂದಗೌಡ; ಹನ್ಯಾಳು ಪ್ರಕಾಶನ, ನಂ.749, 11ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, 1ನೇ ಹಂತ, ವಿಜಯನಗರ, ಮೈಸೂರು-570017, ದೂರವಾಣಿ: 98458 61887, ಬೆಲೆ ಭಾಗ-1: ರೂ.150; ಭಾಗ-2: ರೂ.125]


[ರಂಗಸಂಗೀತ ಕ್ಷೇತ್ರದಲ್ಲಿ ಇವತ್ತು ನಮಗೆ ಕಾಣಿಸುವ ಅತ್ಯಂತ ಹಿರಿಯ ಕಲಾವಿದ ಆರ್ ಪರಮಶಿವನ್ ಅವರು. ಅವರು ಈ ವಾರ ಅಮೆರಿಕಾ ಪ್ರವಾಸ ಹೊರಟಿದ್ದಾರೆ. ಅವರನ್ನು ಖುದ್ದಾಗಿ ಕಾಣಬಯಸುವವರು ಕೆಳಕಂಡ ವಿಳಾಸವನ್ನು ಗುರುತು ಹಾಕಿಕೊಳ್ಳುವುದು- ಸಂಪಾದಕ.]

No comments: