Saturday, August 21, 2010

ಮೀಡಿಯಾ ಮಿರ್ಚಿ: ಬರೆದೆ ನೀನು ನನ್ನ ಹೆಸರ ನಿನ್ನ ಬಾಳ ಪುಟದಲಿ…

Posted in G N Mohan, media mirchi by Media Mind on June 23, 2010
-ಜಿ ಎನ್ ಮೋಹನ್

ಮಾನ್ಯ ಡಿ ಜಿ ಸಾಹೇಬರಿಗೆ



ಅಖಿಲ ಭಾರತ ಮೂಗರ್ಜಿ ಬರಹಗಾರರ ಸಂಘದಿಂದ ಅನಂತಾನಂತ ನಮಸ್ಕಾರಗಳು. ‘ವಿಜಯ ಕರ್ನಾಟಕ’ ಸರ್ಕಾರದ ವಿರುದ್ಧ ಬರೆಯುತ್ತಿದೆ ಎಂಬ ಮೂಗರ್ಜಿ ನಿಮಗೆ ಬಂದದ್ದು ಸರಿಯಷ್ಟೇ. ನೀವು ತುಂಬಾ ಮುತುವರ್ಜಿಯಿಂದ ಅದನ್ನು ತನಿಖೆಗೆ ಕಳಿಸಿಕೊಟ್ಟದ್ದು ಕೇಳಿ ಹಾಲು ಕುಡಿದಷ್ಟು ಸಂತೋಷವಾಯಿತು. ಇತ್ತೀಚಿಗೆ ತಾನೇ ‘ಪ್ರಜಾವಾಣಿ’ಯ ರಾಹುಲ್ ಬೆಳಗಲಿ ಹಾಗೂ ಪದ್ಮರಾಜ ದಂಡಾವತೆ ಅವರಿಗೂ ಇದೆ ರೀತಿ ನಿಮ್ಮ ಪ್ರತಿನಿಧಿಗಳಾದ ಶಿವಮೊಗ್ಗ ಪೊಲೀಸರು ನೋಟೀಸ್ ಕಳಿಸಿದ್ದರು. ಆಗ ನಮಗೆ ಅಷ್ಟೇನೂ ಸಂತೋಷವಾಗಿರಲಿಲ್ಲ. ಯಾಕೆಂದರೆ ಅದು ಮೂಗರ್ಜಿಯನ್ನು ಆಧರಿಸಿ ಕಳಿಸಿದ್ದಲ್ಲ. ಹಾಗಾಗಿ ಮೂಗರ್ಜಿ ಸಂಘದ ನಮಗೆ ಸಂತೋಷವಾಗುವುದಾದರೂ ಹೇಗೆ? ಇಷ್ಟು ದಿನ ಮೂಗರ್ಜಿ ಎಂದರೆ ಸಾಕು ಎಗರಿ ಬೀಳುತ್ತಿದ್ದ, ಮೂಲೆಗೆ ಸರಿಸುತ್ತಿದ್ದ, ಅಸಹ್ಯ ಎನ್ನುವಂತೆ ನೋಡುತ್ತಿದ್ದ ಕಾಲವನ್ನು ನೀವು ಬದಲು ಮಾಡಿದ್ದೀರಿ.

ಹಿಂದೆ ಮಲ್ಯ ಸಾಹೇಬರು ಹೊಸ ಪಕ್ಷ ಕಟ್ಟಿದಾಗ ‘ಏಳಿ ಎದ್ದೇಳಿ, ಬದಲಾವಣೆಯ ಕಾಲ ಬಂದಿದೆ’ ಅಂತ ಕರೆ ನೀಡಿದ್ದರು. ಆಗ ಮೂಗರ್ಜಿ ಬರಹಗಾರರಾದ ನಾವು ಎದ್ದು ಕುಳಿತೆವು. ಎದ್ದು ಕುಳಿತು, ಎದ್ದು ಕುಳಿತು ಮಾಡಿದ್ದಷ್ಟೇ ಬಂತು. ಆದರೆ ಬದಲಾವಣೆಯ ಕಾಲ ಬರಲೇ ಇಲ್ಲ. ಏಕೆಂದರೆ ಮೂಗರ್ಜಿಗೆ ಇದ್ದ ಮಾನ ಮರ್ಯಾದೆ ಎಲ್ಲಿತ್ತೋ ಅಲ್ಲೇ ಇತ್ತು. ಆದರೆ ನೀವು ಮಲ್ಯರಂತೆ ಕರೆ ಕೊಡಲಿಲ್ಲ. ನೀವು ಸದ್ದಿಲ್ಲದಂತೆ ಒಂದು ಬದಲಾವಣೆಯನ್ನೇ ಮಾಡಿಬಿಟ್ಟಿರಿ. ಮೌನ ಕ್ರಾಂತಿ ಅಂದರೆ ಏನು ಅಂತ ಇಷ್ಟು ದಿನ ತಲೆ ಕೆರೆದುಕೊಳ್ಳುತ್ತಿದ್ದೆವು. ಆದರೆ ಈ ದಿನ ಖಂಡಿತಾ ಗೊತ್ತಾಯಿತು. ‘ಮೂಗರ್ಜಿ ಹಿಡಿದು ಮಟಾಷ್ ಮಾಡು’ ಅಂತ.

ಸಾರ್, ‘ಕರುಣಾಳು ಬಾ ಬೆಳಕೇ, ಮಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ಎಂದು ಯಾರು ಬರೆದರೋ ಗೊತ್ತಿಲ್ಲ ಆದರೆ ನಮ್ಮ ಪರಿಸ್ಥಿತಿಯಂತೂ ಖಂಡಿತಾ ಹಾಗೇ ಆಗಿ ಹೋಗಿತ್ತು. ಮೂಗರ್ಜಿ ಬರೆದೂ ಬರೆದೂ ಬೆರಳು ನೊಂದರೂ ಹೇಳುವವರಿಲ್ಲ, ಕೇಳುವವರಿಲ್ಲ. ಒಂದು ರೀತಿ ಅಂಧಕಾರದಲ್ಲಿಯೇ ಇದ್ದೆವು. ಅಂತಹ ಸಮಯದಲ್ಲಿ ನೀವು ಕರುಣಾಳುವಿನಂತೆ ಬಂದಿರಿ, ಕೈ ಹಿಡಿದು ನಡೆಸಲು ಮುಂದಾದಿರಿ. ಒಂದು ನಿಮಿಷ ತಾಳಿ ಸಾರ್ ‘ಕರುಣಾಳು ಬಾ ಬೆಳಕೇ ಮಸುಕಿದೀ ಮಬ್ಬಿನಲಿ..’ ಕವಿತೆಯನ್ನು ಯಾರೋ ವೈಯೆನ್ಕೆ ಎನ್ನುವ ಮಹಾಶಯರು ‘ಕರುಣಾಳು ಬಾ ಬೆಳಕೇ, ಮಸುಕಿದೀ ಪಬ್ಬಿನಲಿ, ಕೈ ಹಿಡಿದು ಕುಡಿಸೆನ್ನನು’ ಎಂದು ಬಾರ್ ನ ವೇಟರ್ ಗಳನ್ನು ಕರೆಯಲು ಬಳಸುತ್ತಿದ್ದರಂತೆ. ಇದು ಸರಿಯಲ್ಲ. ಈ ಬಗ್ಗೆ ನಮ್ಮದೊಂದು ಮೂಗರ್ಜಿ ಇದೆ. ಒಪ್ಪಿಸಿಕೊಳ್ಳಿ. ಪೋಲೀಸ್ ಪೇದೆಯನ್ನ ವೈಯೆನ್ಕೆ ಇದ್ದ ಕಡೆಗೇ ಕಳಿಸಿ ಸಾರ್.

ಮೊನ್ನೆ ಏನಾಯ್ತು ಗೊತ್ತಾ? ಅಂಕಿತ ಪ್ರಕಾಶನ ಅಂತ ಗಾಂಧಿ ಬಜಾರ್ ನಲ್ಲಿ ಒಂದು ಪುಸ್ತಕದ ಅಂಗಡಿ ಇದೆ, ಅವ್ರು ಜೋಗಿ ಅನ್ನೋ ಮಹಾತ್ಮನ ಮೂರು ಪುಸ್ತಕಾನ ಪ್ರಿಂಟ್ ಮಾಡ್ತೀವಿ ಅಂತ ಹೊರಟಿದ್ರು. ಅಂತ ಹೇಳಿ ಎರಡು ಸ್ಕ್ರಿಪ್ಟ್ ಕೈಗಿಟ್ಟು ಜೋಗಿ ಅನ್ನೋ ಮನುಷ್ಯ ಮಾಯಾ ಸಾರ್. ಮೂರು ಪುಸ್ತಕ ಬಿಡುಗಡೆ ಮಾಡ್ತೀವಿ ಅಂತ ಇನ್ವಿಟೇಶನ್ ಕಳಿಸಿ ಎರಡು ಪುಸ್ತಕ ಹೆಂಗೆ ಬಿಡುಗಡೆ ಮಾಡ್ತಾರೆ. ಇಡೀ ಬೆಂಗಳೂರು ಹುಡುಕಿದರೂ ಸಾಹೇಬರು ಪತ್ತೆ ಇಲ್ಲ. ಭಾನುವಾರ ಬಿಡುಗಡೆ ಆಗ್ಬೇಕು ಅಂದ್ರೆ ಶನಿವಾರ ಮಧ್ಯಾಹ್ನ ಇನ್ನೊಂದು ಸ್ಕ್ರಿಪ್ಟ್ ಕೊಟ್ಟಿದ್ದಾರೆ. ಇದು ನ್ಯಾಯಾನಾ ಸಾರ್, ತಗೊಳ್ಳಿ ಸಾರ್ ಆ ಬಗ್ಗೆನೂ ಒಂದು ಮೂಗರ್ಜಿ. ಆದ್ರೆ ಒಂದು ಪ್ರಾಬ್ಲಂ. ಅವರನ್ನ ಎಲ್ಲಿ ಅಂತ ಹುಡುಕ್ತೀರಾ? ಅವ್ರು ಸುವರ್ಣ ಚಾನಲ್ ನೋರಿಗೇ ಸಿಗಲ್ಲ, ಸೀರಿಯಲ್ ನವರಿಗೂ ಸಿಗಲ್ಲ, ಫಿಲಂ ಮಾಡೋರಿಗೂ ಬೇಕಾದಾಗ ಸಿಗಲ್ಲ, ಪಾರ್ಟೀಗೂ ಕರೆಕ್ಟ್ ಟೈಂ ಗೆ ಬರಲ್ಲ ಇನ್ನು ನಿಮಗೆ ಹೇಗೆ ಸಿಗ್ತಾರೆ..??

ಇದೆ ಪತ್ರಕರ್ತರಿಗೆ ಸಂಬಂಧಿಸಿದಂತೆ ಇನ್ನೊಂದು ವಿಷಯವನ್ನ ನಮ್ಮ ಮೂಗರ್ಜಿ ಸಂಘ ಪತ್ತೆ ಹಚ್ಚಿದೆ. ಪ್ರೆಸ್ ಕ್ಲಬ್ ನವರು ಪುಸ್ತಕ ಬರೆದುಕೊಡಿ ಅಂತ ಕೇಳಿದ್ರು, ಜೋಗಿ ಬರ್ಕೊಡ್ತೀನಿ ಅಂದ್ರು. ‘ರವಿ ಕಾಣದ್ದು’ ಅನ್ನೋ ಪುಸ್ತಕ. ಕಿ ರಂ ನಾಗರಾಜ್ ಅವ್ರು ಪುಸ್ತಕ ಬಿಡುಗಡೆ ಮಾಡಿ ಅದರ ಬಗ್ಗೆ ಮಾತಾಡೋಣ ಅಂತ ಪುಸ್ತಕ ಓಪನ್ ಮಾಡ್ತಾರಂತೆ ಅಲ್ಲಿದ್ದದ್ದು ಬರೀ ಬಿಳೀ ಹಾಳೆ ಮಾತ್ರ. ಪುಸ್ತಾಕಾನೆ ಪ್ರಿಂಟ್ ಆಗಿಲ್ಲ, ಬಿಡುಗಡೆ ಆಗಿಹೋಯ್ತು. ಇದು ಸರೀನಾ ಸಾರ್. ಇಂತದರ ಬಗ್ಗೆ ಬರದ್ರೆ ಮೂಗರ್ಜಿ ಅಂತ ಅವಮಾನ ಮಾಡ್ತಾರೆ. ಇನ್ನೊಂದು ಗುಟ್ಟೂ ಸಾರ್ ಅವರೂ ‘ವಿಜಯ ಕರ್ನಾಟಕ’ಕ್ಕೆ ಬರೀತಾರೆ. ಅಂದ್ರೆ ಅವರೂ ಸರ್ಕಾರಕ್ಕೆ ವಿರುದ್ಧ ಆಲ್ವಾ. ಬಿಡಬೇಡಿ ಸಾರ್.

ಸಾರ್, ಮೊನ್ನೆ ಏನಾಯ್ತು ಗೊತ್ತಾ. ನಮ್ಮ ಪ್ರಕಾಶ್ ರೈ, ಬಿ ಸುರೇಶ ಒಂದು ಫಿಲಂ ತೆಗೆದಿದ್ದಾರೆ. ‘ನಾನೂ.. ನನ್ನ ಕನಸೂ..’ ಅಂತ ಅದರ ಬಗ್ಗೆನೂ ಒಂದು ಮೂಗರ್ಜಿ ನೀವು ಒಪ್ಪಿಸಿಕೊಳ್ಳಬೇಕು. ಆ ಫಿಲಂನಲ್ಲಿ ಹೀರೋಯಿನ್ ಬಂದು ಅವರಪ್ಪನ ಹತ್ತಿರ ನಾನು ಲವ್ ಮಾಡ್ತಿದ್ದೀನಿ, ನನ್ನ ಮದ್ವೆ ಮಾಡ್ಸಿ ಅಂತ ಕೇಳಿಕೊಳ್ತಾಳೆ. ಆ ಅಪ್ಪ ಅಂದ್ರೆ.. ಪ್ರಕಾಶ್ ರೈ ಗೆ ಅದು ಇಷ್ಟ ಆಗಲ್ಲ.. ‘ಗುರ್’ ಅಂದ್ಬಿಡ್ತಾನೆ. ಅವಾಗ ನಮ್ಮ ಪಾಟೀಲ, ಅದೇ ತಿಪಟೂರು ಹುಡುಗ ಅಚ್ಯುತ ಕುಮಾರ ತಲೆ ಹಾಕಿ ‘ಲವ್ ಮಾಡ್ತಾ ಇರೋ ವಿಷ್ಯ ಬಂದು ನಿಮಗೆ ಹೇಳ್ದೀರಾ, ಯಡಿಯೂರಪ್ಪನವರಿಗಾ ಹೇಳ್ತಾರೆ’ ಅಂದುಬಿಟ್ಟ. ಇದು ಸರೀನಾ. ಇದೂ ಸರ್ಕಾರಕ್ಕೆ ವಿರುದ್ಧ ಆಲ್ವಾ? ಪೇಪರ್ ನಲ್ಲಿ ಸರ್ಕಾರದ ವಿರುದ್ಧ ಬರದ್ರೆ ತಪ್ಪು, ಫಿಲಂನಲ್ಲಿ ಆದ್ರೆ ಓ ಕೆ ಅಂತ ಇರಬಾರದು. ’ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ’ ಯಾಕಿರಬೇಕು. ಅದಕ್ಕೊಸ್ಕರವೇ ಎರಡು ಕಣ್ಣಿಗೂ ಸುಣ್ಣ ಹಚ್ಹ್ಚ್ಬಿಬಿಡಿ ಅಂತ ಬರೆದಿರೋ ಈ ಅರ್ಜಿ ಒಪ್ಪಿಸಿಕೊಳ್ಳಿ.

ಇನ್ನೊಂದು ಅರ್ಜಿ ಇದೆ. ಪ್ರಜಾವಾಣಿ ಸಹಾ ಸರ್ಕಾರಕ್ಕೆ ವಿರುದ್ಧವೇ ಅನ್ನೋದು ನಮ್ಮ ಸಂಶೋಧನೆ. .’ವಿಜಯ ಕರ್ನಾಟಕ’ದಲ್ಲಿ ಸರ್ಕಾರದ ವಿರುದ್ಧ ಬರೀತಾರೆ ಅಂತ ತಾನೇ ನಾವು ಮೂಗರ್ಜಿ ಬರೆದದ್ದು. ಆದ್ರೆ ‘ಪ್ರಜಾವಾಣಿ’ ನಲ್ಲಿ ನ್ಯೂಸ್ ಅಷ್ಟೇನೂ ಆಂಟಿ ಹಾಕಲ್ಲ ಬಿಡಿ. ಆದ್ರೆ ಮೊನ್ನೆ ಸಿ ಎಂ ಆಫೀಸ್ ನಲ್ಲಿ ಮೀಡಿಯಾ ನೋಡಿಕೊಳ್ಳುತ್ತಾರಲ್ಲಾ ಅವ್ರು ಹೇಳ್ತಿದ್ರು ಕಾರ್ಟೂನ್ ನಲ್ಲಿ ಸರ್ಕಾರಾನಾ ಝಾಡಿಸಿಬಿಡ್ತಾರೆ ಅಂತ. ಪಿ ಮಹಮದ್ ‘ಚಿನಕುರುಳಿ’ ಮೇಲೆ ಒಂದು ಕಣ್ಣಿರಲಿ ಸಾರ್. ಅವರು ನಮ್ಮ ಯಡಿಯೂರಪ್ಪನವರಿಗೆ ಒಂದು ಸಲ ಕಾರ್ಟೂನ್ ನಲ್ಲಿ ಸೀರೆ ಉಡಿಸಿಬಿಟ್ಟಿದ್ರಂತೆ. ಇದು ಸರೀನಾ ಸಾರ್?. ಜನಾರ್ಧನ ರೆಡ್ಡಿ ಗುರ್ ಅಂತಾ ಇರುವಾಗ ಹೀಗೆ ಸೀರೆ ಉಡುಸಿದ್ರೆ ಡೇಂಜರ್ ಅಲ್ಲವಾ? ಅದಕ್ಕೆ ಈ ಮೂಗರ್ಜಿ ಕೊಡ್ತಾ ಇದೀವಿ. ಎಲ್ಲಾ ಪೇಪರ್ ನಲ್ಲೂ ಸಿಕ್ಕಾಪಟ್ಟೆ ಚಿತ್ರ ಬರೆಯೋರು ಇದಾರೆ. ಎಲ್ಲರೂ ಸೀರೆ ಉಡುಸ್ತಾ ಕೂತುಬಿಟ್ರೆ ಸರ್ಕಾರದ ಕಥೆ ಹೇಳಿ. ಎಲ್ಲರ ಆಫೀಸ್ ಗೂ ನಿಮ್ಮ ಪಿ ಸಿ ನ ಕಳಿಸಿ ಸಾರ್. ರಿಪೋರ್ಟ್ ಸಬ್ಮಿಟ್ ಮಾಡೋವರ್ಗೂ ಬಿಡಬೇಡಿ ಸಾರ್.

ಸಾರ್, ಈಗ ಕೊಡ್ತಾ ಇರೋ ಮೂಗರ್ಜಿ ಇಂಗ್ಲಿಷ್ ಪೇಪರ್ ಬಗ್ಗೆ ಬಿ ಎಸ್ ಯಡಿಯೂರಪ್ಪ ಅಂತ ಹೆಸರು ಇಟ್ಕೊಂಡಿದಾರೆ ಲಕ್ಷಣವಾಗಿ. ಆದ್ರೆ ಇಂಗ್ಲಿಷ್ ಪೇಪರ್ ನವರಿಗೆ ಕನ್ನಡ ಚೀಫ್ ಮಿನಿಸ್ಟರ್ ಕಂಡ್ರೆ ಅಷ್ಟಕ್ಕಷ್ಟೇ. ಅದಕ್ಕೆ ಯಡ್ಡಿ, ಯಡ್ಡಿ ಅಂತ ಬರೀತಾರೆ. ಇದೂ ಸರ್ಕಾರದ ವಿರುದ್ಧ. ಅವರ ಮೇಲೂ ಕ್ರಮಾ ತಗೊಳ್ಳಿ. ಏನೋ ಸ್ವಲ್ಪ ಟೈಂ ಸರಿ ಇಲ್ಲ ಅಂತ ಯಡಿಯೂರಪ್ಪ ಅನ್ನೋದರ ಬದಲು ಯಡ್ಯೂರಪ್ಪ ಅಂತ ಹೆಸರು ಬದಲು ಮಾಡ್ಕೊಂಡ್ರು. ಆಮೇಲೆ ನನ್ನ ಹೆಸರು ಶಾಸ್ತ್ರಕ್ಕೆ ಯಡ್ಯೂರಪ್ಪ ಆದ್ರೆ ನೀವು ಬರಿಯೋವಾಗ ಯಡಿಯೂರಪ್ಪ ಅಂತಾನೇ ಬರೀರಿ ಅಂತ ಸಿ ಎಂ ಸಾಹೇಬರು ರಿಕ್ವೆಸ್ಟ್ ಮಾಡಿಕೊಂಡಿದ್ರು ಆದ್ರೆ ಇಲ್ಲೀವರ್ಗೂ ಚಾನಲ್ಗಳು, ಪೇಪರ್ನವರು ಅದಕ್ಕೆ ‘ಡೋಂಟ್ ಕೇರ್’. ಇದೂ ಸರ್ಕಾರದ ವಿರುದ್ಧ ಆಲ್ವಾ ಸಾರ್

ಮೊನ್ನೆ ಬ್ರಾಹ್ಮಣರ ಕಾಫೀ ಬಾರಲ್ಲಿ ಎರಡು ಇಡ್ಲಿ ತರಿಸ್ಕೊಂಡು ಪಕ್ಕದಲ್ಲಿರೋ ಕೇಶವ ಶಿಲ್ಪದಲ್ಲಿ ತಿಂದರಂತೆ ಸಾರ್. ಅವರು ದುಡ್ಡು, ಅವರ ಇಡ್ಲಿ..ಈ ಪೇಪರ್ ನವರಿಗೆ ಏನಾಗಬೇಕು. ಬ್ರಾಹ್ಮಣರ ಕಾಫೀ ಬಾರ್ ನಲ್ಲಿ ತಿಂದಿದ್ದು ಲಿಂಗಾಯತರಿಗೆ ಮಾಡಿದ ಅವಮಾನ ಅನ್ನೋ ಹಾಗೇ ಅಂಬೇಡ್ಕರ್ ರೋಡ್ ನಲ್ಲಿರೋ ಕೆನಡಾ ಪ್ರಭಾದಲ್ಲಿ ಮಾತಾಡಿಕೊಂಡರು ಸಾರ್. ಅವರ ಬಗ್ಗೆನೂ ಮೂಗರ್ಜಿ ಇದೆ. ಅವರೂ ಸರ್ಕಾರಕ್ಕೆ ವಿರುದ್ಧ ಸಾರ್. ಅವರನ್ನ ಹೆಂಗೆ ಸುಮ್ನೆ ಬಿಡ್ತೀರಾ…

ಮೊನ್ನೆ ಇನ್ನೊಂದು ಕಥೆ ಆಯ್ತು..ಮಣಿಯಾಣಿ ಅಂತ ಇದ್ದಾರೆ. ಅವರು ಮಗು ಸಮೇತ ಈ ಟಿ ವಿ ಆಫೀಸ್ ಗಾಡೀಲಿ ಜೋಗಿ ಪ್ರೋಗ್ರಾಮ್ ಗೇ ಬಂದಿದ್ರು. ಅದಕ್ಕೆ ಕ್ಯಾಮೆರಾ ಸೆಕ್ಷನ್ ನಿಂದ ಅಬ್ಜೆಕ್ಷನ್ ಬಂದಿದೆ. ಮಣಿಯಾಣಿ ಬೇಕಾದ್ರೆ ಗಾಡಿಯಲ್ಲಿ ಬರಬಹುದು. ಆದ್ರೆ ಆ ಪಾಪು ಹೆಂಗೆ ಬಂತು ಅಂತ. ಯಾರೋ ನಮ್ಮ ಮೂಗರ್ಜಿ ಸಂಘಕ್ಕೇ ಮೂಗರ್ಜಿ ಬರೆದಿದ್ದಾರೆ, ‘ಹಾಸನಕ್ಕೇ ಆಲೂಗಡ್ಡೆನಾ?’ ‘ಸೂರ್ಯಂಗೇ ಟಾರ್ಚಾ’ ಅಂದ್ರೆ ಇದೇ ನೋಡಿ ಸಾರ್.. ಏನಪ್ಪಾ ಅಂದ್ರೆ ಮಣಿಯಾಣಿ ಹಾಗೆ ಹೋಗಿದ್ದು ಸರ್ಕಾರಕ್ಕೆ ವಿರುದ್ಧ ಅಂತೆ ಸಾರ್. ಹೇಗೆ ಅಂತ ನಮಗೂ ಗೊತ್ತಾಗಿಲ್ಲ. ನಿಮ್ಮ ಕಿವಿಗೆ ದಾಟಿಸಿಬಿಟ್ರೆ ಸೇಫಲ್ವಾ ಅಂತ ನಿಮ್ಮ ಮಡಿಲಿಗೆ ಈ ಮೂಕರ್ಜಿ ಹಾಕಿದ್ದೀವಿ ಸಾರ್. ಅದನ್ನ ಹಾಲಲ್ಲಾದರೂ ಅದ್ದಿ, ನೀರಲ್ಲಾದರೂ ಅದ್ದಿ.

ಎಂ ಎನ್ ಚಂದ್ರೇಗೌಡ ಅಂತ ಒಬ್ಬರಿದ್ದಾರೆ. ಅವರು ಫಾರಿನ್ ಗೆ ಹೋಗಿ ಬಂದಿರೋದು, ಊಟಿಗೆ ಹೋಗಿದ್ದು, ವಂಡರ್ ಲಾಗೆ ಹೋಗಿ ಒದ್ದೆ ಆಗಿದ್ದು ಎಲ್ಲಾ ಅವರ ಬ್ಲಾಗ್ ನಲ್ಲಿ ಬರೀತಾರೆ ಸಾರ್. ಅದು ಸರ್ಕಾರದ ವಿರುದ್ಧ ಆಲ್ವಾ ಸಾರ್. ಸರ್ಕಾರಕ್ಕೆ ಸಾಕಷ್ಟು ಪ್ರಾಬ್ಲಂ ಇದೆ. ಮಲಗಿದರೆ ನಿದ್ದೆ ಬರ್ತಾ ಇಲ್ಲ. ಅಂತದ್ರಲ್ಲಿ ಆರಾಮವಾಗಿ ರೆಸಾರ್ಟು, ವಂಡರ್ ಲಾ ಅಂತ ಸುತ್ತೋದು ನಿಷಿದ್ಧ ಅಲ್ವ, ಸರ್ಕಾರದ ವಿರುದ್ಧ ಇದಾರೆ ಅನ್ನೋದಕ್ಕೆ ಇದಕ್ಕಿಂತ ಪ್ರೂಫ್ ಬೇಕಾ. ತಗೊಳ್ಳಿ ಆ ಬಗ್ಗೆ ಒಂದು ಮೂಗರ್ಜಿ.

ಹೈದ್ರಾಬಾದ್ನಲ್ಲಿ ಈ ಟಿ ವಿ ನಲ್ಲಿ ಒಬ್ಬ ಇದ್ದಾನೆ. ಕಲ್ಲೇಶಪ್ಪ ಅಂತ. ಏಕಪಾತ್ರಾಭಿನಯ ಮಾಡು ಅಂತ ಅವನ್ನ ಕರದ್ರೆ ಕೃಷ್ಣದೇವರಾಯನ ಬಗ್ಗೆ ಮಾಡಿದ ಸಾರ್. ಇದು ಮಿಶ್ಚೀಫ್ ಆಲ್ವಾ. ಸಿ ಎಂ ನ ಮುಂದೆ ಬಳ್ಳಾರಿ ಜ್ಞಾಪಿಸಿ ಬೇಜಾರು ಮಾಡಿದ ಹಾಗೇ ಆಲ್ವಾ ಸಾರ್. ಈ ಬಗ್ಗೆ ಅವರ ಡೆಸ್ಕ್ ನಿಂದಾನೇ ಮೂಗರ್ಜಿ ಬಂದಿದೆ ಸಾರ್. ಬಡಿದುಹಾಕಿ ಸರ್ ಅವನ್ನ. T V 9 ಸಹಾ ಸರ್ಕಾರದ ವಿರುದ್ಧ ಸಾರ್. ಯಾಕಂದ್ರೆ ಆ 9 ನೋಡಿ ಸಾರ್. ಅದು ಒಂದು ಥರಾ ಬಾಗಿಕೊಂಡಿದೆ ಆಲ್ವಾ ಸಾರ್. ಅವ್ರು ಸರ್ಕಾರ ಸಹಾ ಅಂಗೆ, ಎಲ್ಲರ ಮುಂದೆ ಬಾಗುತ್ತೆ ಅಂತ ಲೇವಡಿ ಮಾಡೋದಿಕ್ಕೆ ಆ 9 ಇಟ್ಕೊಂಡಿದ್ದಾರೆ ಸಾರ್ ಅವರು ಸರ್ಕಾರದ ಪರಾ ಇದ್ದಿದ್ರೆ 1, 7 ಅಂತ ಯಾವುದಾದರೂ ನೆಟ್ಟಗಿರೋ ನಂಬರ್ ಇಡುತ್ತಾ ಇದ್ದರು. ಆದ್ರೆ. ಈಗ ಸರ್ಕಾರ ವಿರೋಧಿ ಆಗಿದಾರೆ ಸಾರ್ ಬಿಡಬೇಡಿ ತಗೊಲ್ಲಿ ಮೂಗರ್ಜಿ..

‘ಮೀಡಿಯಾ ಮಿರ್ಚಿ’ ಅಂತ ಒಂದಿದೆ ಸಾರ್. ಜನ ಖರ್ಚಿಗಿಲ್ಲದೆ ಇದ್ರೂ ಮಿರ್ಚಿ ಬೇಕು ಅಂತಾರೆ ಸಾರ್. ಹತ್ತಿರ ಬನ್ನಿ ಸಾರ್. ಅವರ ಬಗ್ಗೆ ಬಂದಿರೋ ಮೂಕರ್ಜಿ ಸಿಕ್ಕಾಪಟ್ಟೆ ಸಾರ್. ಎಂ ಜಿ ರೋಡು, ಅಂಬೇಡ್ಕರ್ ರೋಡು, ಗೋವಿಂದಪ್ಪ ರೋಡೂ, ಎಲ್ರೂ ಬರದವ್ರೇ ಸಾರ್. ಮಿರ್ಚಿ ಅನ್ನೋದೇ ಸರ್ಕಾರ ವಿರೋಧಿ ಸಾರ್. ಕ್ಯಾಬಿನೆಟ್ ನಲ್ಲೇ ಎಷ್ಟೊಂದು ಜನ ಮಿರ್ಚಿ ಹಿಡಕೊಂಡು ನಿಂತಿದ್ದಾರೆ ಸಾರ್. ತಗೊಳ್ಳಿ ಸಾರ್ ಅರ್ಜಿ- ಮೂಗರ್ಜಿ..ಮುಗಿಸ್ಬಿಡಿ ಸಾರ್ ಮಿರ್ಚಿ. ತರಿಸಲಾ ಸಾರ್ ಜೊತೆಗೆ ಮಂಡಕ್ಕಿ ಮತ್ತೆ ಕೂತುಕೊಳ್ಳೋಕೆ ಒಂದು ಕುರ್ಚಿ…

ಇಂತಿ,

ಮೂಗರ್ಜಿ ಬಂಧು

ಬುಕ್ ಟಾಕ್

ಹೈದರಾಬಾದ್ ಕರ್ನಾಟಕದ ಬಗ್ಗೆ ಒಂದು ಸ್ಪಷ್ಟ ನೋಟ ಸಿಗಬೇಕೆಂದರೆ ‘ಮಾಧ್ಯಮ ಮಾರ್ಗದ ಮಿಂಚು’ ಓದಬೇಕು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಬರೆದ ಪತ್ರಿಕಾ ಲೇಖನಗಳ ಸಂಕಲನ ಇದು. ಕ್ರಾಂತಿ, ವಿಜಯ ಕರ್ನಾಟಕ, ಸುವರ್ಣ, ಸಮಯ ಚಾನಲ್ ಹೀಗೆ ಎರಡೂ ಮಾಧ್ಯಮದಲ್ಲಿ ಕೆಲಸ ಮಾಡಿರುವ ಮಹಿಪಾಲರೆಡ್ಡಿ ಈ ಕೃತಿಯಲ್ಲಿ ಹೈದರಾಬಾದ್ ಕರ್ನಾಟಕದ ವಿಮೋಚನೆ, ಅಲ್ಲಿನ ರಂಗಭೂಮಿ, ನಾಗಾವಿ, ಗುಲ್ಬರ್ಗಾದಲ್ಲಿನ ಗುಜರಾತ್, ಹಂಪಿಯ ವಿದ್ಯಾರಣ್ಯ, ನಾಲವಾರ ಮಠ, ಶಿಕ್ಷಣ ಎಲ್ಲದರ ಬಗ್ಗೆ ನೋಟ ಹರಿಸಿದ್ದಾರೆ. ಹೈದರಾಬಾದ್ ಕರ್ನಾಟಕದ ಬಗ್ಗೆ ಬಂದ ಪುಸ್ತಕಗಳು ತೀರಾ ಕಡಿಮೆ. ಮಹಿಪಾಲರೆಡ್ಡಿ ಅವರ ಈ ಕೃತಿ ಒಂದಷ್ಟು ಚರ್ಚೆಗೆ ಗ್ರಾಸವಾಗುವ ವಿಷಯಗಳನ್ನು ಮಂಡಿಸಿದೆ. ಸೇಡಂ ನ ರಾಷ್ಟ್ರಕೂಟ ಪುಸ್ತಕ ಮನೆ ಈ ಕೃತಿ ಪ್ರಕಟಿಸಿದೆ.

ಕೆಂಪ್ ಮೆಣಸಿನ್ಕಾಯ್

ಮಲ್ಯರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಇದು ‘ಮಲ್ಯಾಧಾರಿತ ಮತದಾನ’ ಅಂತ ಪತ್ರಕರ್ತರೂ ನಿಟ್ಟುಸಿರು ಬಿಟ್ಟಿದ್ದಾರೆ. ಏಕೆಂದರೆ ಮಲ್ಯರ ಬ್ರಾಂಡ್ ಗಳು ಇಲ್ಲದೆ ಪ್ರೆಸ್ ಕ್ಲಬ್ ಇಲ್ಲ.

No comments: