Monday, August 30, 2010

ಮೋಹನ್ ರ ಮೀಡಿಯಾ ಮಿರ್ಚಿ

ಮೀಡಿಯಾ ಮಿರ್ಚಿ:’ಕಟಕಟೆ ಹತ್ತಲು ಬಿಡಿ ನನ್ನ’…
ಜಿ.ಎನ್.ಮೋಹನ್

ನೀವ್ಯಾಕೆ ಕೋರ್ಟ್ ವರದಿ ಮಾಡುವ ಬಗ್ಗೆ ಕಾರ್ಯಾಗಾರ ಮಾಡಬಾರದು ಅಂತ ಪ್ರಶ್ನೆ ಮುಂದಿಟ್ಟವರು ಸುನಿಲ್ ದತ್ ಯಾದವ್ ಹಾಗೂ ಆರ್. ನಿತಿನ್. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಓದಿದ ಅಷ್ಟೂ ವರ್ಷಗಳೂ ಮೆಡಲ್ ಗಳನ್ನು ಬಾಚಿ ತಂದ ಈ ಇಬ್ಬರೂ ನನ್ನ ಪರಿಚಯವಾದ ತಕ್ಷಣ ಮೊದಲು ಕೇಳಿದ ಪ್ರಶ್ನೆ ಇದು.

ಯಾಕೆ ಅಂದೆ? ಇಬ್ಬರೂ ಒಂದರ ಮೇಲೊಂದರಂತೆ ಉದಾಹರಣೆಯನ್ನು ಮುಂದಿಡುತ್ತಾ ಹೋದರು. ನಿತಿನ್ ನೆನಪಿಸಿದ್ದು ‘ಡೆಕ್ಕನ್ ಹೆರಾಲ್ಡ್’ ಅರ್ಕಾವತಿ ಲೇ ಔಟ್ ಬಗ್ಗೆ ಕೊಟ್ಟ ವರದಿ, ಹಾಗೂ ಲೇಖನವನ್ನ.

“ಅರ್ಕಾವತಿ ಲೇ ಔಟ್ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವರದಿ, ಕೋರ್ಟ್ ನೀಡಿದ ತೀರ್ಪಿಗೆ ಸಂಪೂರ್ಣ ವಿರೋಧವಾಗಿತ್ತು. ಅದು ಅರಿವಾಗಿ ಮತ್ತೆ ಅದನ್ನು ರಿಪೇರಿ ಮಾಡಿದ ವರದಿ ಬಂತು. ಕೊನೆಗೆ ಹಿರಿಯ ಅಡ್ವೋಕೇಟ್ ನಾಗಾನಂದ ಅವರು ಒಂದು ಲೇಖನ ಬರೆದಾಗಲೇ ನಿಜಕ್ಕೂ ಬಂದ ತೀರ್ಪು ಏನು ಅಂತ ಅರ್ಥವಾಗಿದ್ದು” ಎಂದರು .



ಕೋರ್ಟ್ ನಂತೆಯೇ ನಿಯಮ, ಕಾನೂನು ಅಂತ ಬಂದ ಕಡೆಯೆಲ್ಲಾ ಪತ್ರಕರ್ತರು ಹಿಂಜರಿಯುವುದೇಕೆ? ಎಂಬುದು ಇವರ ಪ್ರಶ್ನೆಯಾಗಿತ್ತು . ಹೀಗೆ ಅವರು ಹೇಳುತ್ತಾ ಇದ್ದ ದಿನ ವಿಧಾನಸಭೆಯಲ್ಲಿ ಗದ್ದಲ ವಿಪರೀತಕ್ಕೆ ಹೋಗಿತ್ತು. ಮೊದಲೇ ಹೇಳಿ ಕೇಳಿ ಬಳ್ಳಾರಿ ಗಣಿ ಪ್ರಕರಣ. ಹಾಗಾಗಿ ಬಿಸಿ ಬಿಸಿ ಮಾತು. ಸಿದ್ದರಾಮಯ್ಯ ನೇತೃತ್ವದಲ್ಲಿ ವಿರೋಧ ಪಕ್ಷ ನಿಯಮ 60 ರ ಅಡಿ ಚರ್ಚಿಸಬೇಕೆಂದು ಪಟ್ಟು ಹಿಡಿದಿತ್ತು. ಆಡಳಿತ ಪಕ್ಷ ಒಕ್ಕೊರಲಿನಿಂದ ಅದು ಸಾಧ್ಯವೇ ಇಲ್ಲ 69 ರ ನಿಯಮದಡಿ ಚರ್ಚಿಸಬೇಕು ಅಂತ ಪಟ್ಟು ಹಿಡಿದಿತ್ತು. ಸದನದಲ್ಲಿ ಕಾವಿನ ವಾತಾವರಣ. ಯಾರೂ ಪಟ್ಟು ಸಡಿಲಿಸುತ್ತಿಲ್ಲ.

ಆ ಕ್ಷಣದ ಸುದ್ದಿಯನ್ನು ನೋಡುಗರಿಗೆ ರವಾನಿಸಿ ಬಿಡುವ ಅವಸರದಲ್ಲಿದ್ದ ಟಿವಿ ಚಾನೆಲ್‌ಗಳು ಮೇಲಿಂದ ಮೇಲೆ ಬ್ರೇಕಿಂಗ್ ನ್ಯೂಸ್‌ಗೆ ಇಳಿದವು. ಬ್ರೇಕಿಂಗ್ ಮತ್ತು ನ್ಯೂಸ್ ಎರಡರಲ್ಲೂ 60/69 ರ ನಿಯಮ ನಮೂದಿಸಲಾಗಿತ್ತು. ಆದರೆ ಇಡೀ ದಿನ ಕಾದರೂ ಆ ನಿಯಮ ಏನು ಎಂಬ ವಿವರವೇ ಇಲ್ಲ.

ಎಲ್ಲಾ ಚಾನಲ್‌ಗಳು ಆ ಕ್ಷಣಡ ಅವಸರಕ್ಕೆ ಅರೆ ಬೆಂದ ಸುದ್ದಿ ಒದಗಿಸಿದರೂ ಪ್ರೈಂ ಬುಲೆಟಿನ್‌ನಲ್ಲಿ ಮಾತ್ರ ಯಾವುದೇ ಕೊರತೆ ಇಲ್ಲದಂತೆ ಸಾಕಷ್ಟು ಮುತುವರ್ಜಿವಹಿಸಿ, ಬೇಕಾದ ಮಾಹಿತಿಯನ್ನು ಅಚ್ಚುಕಟ್ಟಾಗಿ ನೀಡುತ್ತಾರೆ. ಆದರೆ ಆ ಪ್ರೈಂ ಬುಲೆಟಿನ್‌ನಲ್ಲೂ ಈ 60/69 ರ ನಿಯಮ ಏನು ಎಂಬುದು ಇರಲಿಲ್ಲ. ಉತ್ತರ ಸ್ಪಷ್ಟ -ಯಾವ ಪತ್ರಕರ್ತರಿಗೂ ಈ 60 / 69ರ ನಿಯಮ ಏನು? ಏಕೆ ಆ ನಿಯಮಗಳಡಿಯೇ ಚರ್ಚೆ ಆಗಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಅದರಿಂದ ಆಗುವ ಲಾಭ ಏನು, ನಷ್ಟ ಏನು ಉಹುಂ ಏನೊಂದು ಇರಲಿಲ್ಲ. ಹಾಗಂತ ಈ ನಿಯಮ ಬಲ್ಲ ಪತ್ರಕರ್ತರು ಇಲ್ಲವೇ ಇಲ್ಲಾ ಅಂತಲ್ಲ. ಆದರೆ ಒಂದೋ ಸುದ್ದಿಮನೆ ನಡೆಸುವವರಿಗೆ ಈ ಕಣ್ಣೋಟ ಇರಲಾರದು. ಇಲ್ಲಾ ಈ ಮಾಹಿತಿ ಇರುವ ಪತ್ರಕರ್ತರನ್ನು ಮೂಲೆಗೆ ಒತ್ತರಿಸಿರಬೇಕು. ಅದೂ ಅಲ್ಲವಾದರೆ ಆ ಮೀಡಿಯಾ ಆಫೀಸಿಗೆ ಅದು ಧೀರ್ಘ ಆಕಳಿಕೆಯ ಸಮಯ.

ಇದೇ ಕುತೂಹಲ ನನಗೆ ಮಾರನೆಯ ದಿನವೂ ಇತ್ತು. ಟಿವಿ ಚಾನಲ್ ನಂತರ ಪತ್ರಿಕೆಗಳು ಹೇಗೆ ಇದನ್ನು ಕವರ್ ಮಾಡಿದೆ ಎಂಬುದರ ಬಗ್ಗೆ. ಟೈಮ್ಸ್ ಆಫ್ ಇಂಡಿಯಾ ಗ್ರೂಪಿನ ಯಾವುದೇ ಪತ್ರಿಕೆಗಳನ್ನು ತೆಗೆದುಕೊಳ್ಳಿ ಅವರಿಗೆ ಓದುಗರ ಪಲ್ಸ್ ಚೆನ್ನಾಗಿ ಗೊತ್ತು. ಯಾವ ಮಾಹಿತಿ ಇಡಿಯಾಗಿ ಕೊಡಬೇಕು, ಯಾವ ಮಾಹಿತಿ ಹಿಡಿಯಲ್ಲಿ ಕೊಡಬೇಕು ಅಂತ. ಟೈಮ್ಸ್ ಹಾಗೂ ವಿಜಯಕರ್ನಾಟಕ ಇಬ್ಬರೂ ಈ ನಿಯಮಗಳು ಏನು ಅನ್ನುವುದನ್ನು ಸ್ಪಷ್ಟವಾಗಿ ಪ್ರಕಟಿಸಿತ್ತು.

ಆಗ ತಾನೇ ‘ಪ್ರಜಾವಾಣಿ’ಯ ಮೂರನೇ ಮಹಡಿಗೆ ದಾಖಲಾಗಿದ್ದೆ. ನ್ಯೂಸ್ ರೂಂನ ಗಿಜಗಿಜ ಲೋಕಕ್ಕೆ ಇನ್ನೂ ಹೊಂದಿಕೊಳ್ಳುತ್ತಿದ್ದ ಸಮಯ. ಆಗ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಬಿ ಎಂ ಕೃಷ್ಣ ಸ್ವಾಮಿ ನನ್ನನ್ನು ರಿಪೋರ್ಟರ್ ಆಗಿ ವರ್ಗಾಯಿಸಿದರು.

ಚಹಾ, ಕಾಫಿ, ಬಿಸ್ಕತ್ತು, ಚೌಚೌ ಬಾತ್ ಗಳ ಲೋಕಕ್ಕೆ ಇಳಿಯುವ ಮುನ್ನವೇ ಮುಖ್ಯ ವರದಿಗಾರರಾಗಿದ್ದ ಶ್ರೀಧರ್ ಆಚಾರ್ ನೀವು ಕೋರ್ಟ್ ರಿಪೋರ್ಟ್ ಮಾಡಿದರೆ ಹೇಗೆ ಅಂದರು. ಹೇಗೆ ವರದಿ ಮಾಡಬೇಕು ಎಂಬುದು ಸುತಾರಾಂ ಗೊತ್ತಿರಲಿಲ್ಲ. ಕಮ್ಯುನಿಕೇಷನ್ ಓದುವಾಗ ಮೀಡಿಯಾ ಲಾಸ್ ಕ್ಲಾಸ್ ಬಂದರೆ, ‘ಶಾಲೆಗೆ ಚಕ್ಕರ್, ಊಟಕ್ಕೆ ಹಾಜರ್, ಲೆಕ್ಕದಿ ಬರಿ ಸೊನ್ನೆ..’ ಎನ್ನುವ ಸ್ಥಿತಿ . ಮೀಡಿಯಾದಲ್ಲಿ ಪಾಠ ಮಾಡುತ್ತಿದ್ದವರಿಗೂ, ಪಾಠ ಕೇಳುತ್ತಿದ್ದವರೂ ಇಬ್ಬರೂ ಒಂದೇ ತರ. ಒಡೆದ ದೋಣಿಯಲ್ಲಿ ಪಯಣಿಸುತ್ತಿದ್ದವರೇ.

ಹಾಗಾಗಿ ಕೋರ್ಟ್ ರಿಪೋರ್ಟಿಂಗ್ ಅಂದ ತಕ್ಷಣ ಕಕ್ಕಾಬಿಕ್ಕಿಯಾದೆ. ಆ ಕಡತಗಳು, ಆ ದಪ್ಪ ದಪ್ಪ ಪುಸ್ತಕಗಳು, ಆ ನಿಯಮ ಈ ನಿಯಮ ನನ್ನನ್ನು ಮಿಕ್ಸಿಗೆ ಹಾಕಿ ರುಬ್ಬಲು ಸಿದ್ಧವಾಗುತ್ತಿದ್ದಾಗಲೇ ಗುಂಡಪ್ಪ ಕಣ್ಣಿಗೆ ಬಿದ್ದದ್ದು . ಗುಂಡಪ್ಪ ಅಂತ ಯಾವ ಕೋರ್ಟಿನ ಮುಂದೆಯಾದರೂ ಉಚ್ಚರಿಸಿ, ಅದು ಖಂಡಿತಾ ಪ್ರಜಾವಾಣಿ ಅಡ್ರೆಸ್ ನೀಡುತ್ತದೆ. ಹಾಗಿತ್ತು ಗುಂಡಪ್ಪ ಅವರ ವರಸೆ. ಒಂದು ರೀತಿಯಲ್ಲಿ ಕೋರ್ಟಿನಲ್ಲೂ ಸುದ್ದಿ ಇರುತ್ತೆ ಅಂತ ಕನ್ನಡ ಜರ್ನಲಿಸಂಗೆ ತೋರಿಸಿಕೊಟ್ಟವರೇ ಈ ಗುಂಡಪ್ಪ. ಅದುವರೆಗೂ ಕಸ್ತೂರಿ ಹಾಗೂ ಕೆ ಪಿ ರಾವ್ ಎಂಬ ಲಾಯರ್ ಗಳು ಪತ್ರಿಕಾ ಕಚೇರಿಗಳಿಗೆ ಕೋರ್ಟಿನ ಘಾಟಿನ ಕೇಸುಗಳನ್ನು ನೀಡುತ್ತಿದ್ದರು.

ಗುಂಡಪ್ಪ ಪತ್ರಿಕೆಗೊಬ್ಬ ಕೋರ್ಟ್ ರಿಪೋರ್ಟರ್ ಬೇಕು ಎನ್ನುವುದನ್ನ ಮನದಟ್ಟು ಮಾಡಿ ಕೊಟ್ಟುಬಿಟ್ಟರು. ಸಾಲುಸಾಲಾಗಿ ಕೋರ್ಟ್ ರಿಪೋರ್ಟರ್ ಗಳ ಪಡೆಯೇ ಎದ್ದು ನಿಂತಿತ್ತು. ಪಿ ರಾಜೇಂದ್ರ, ಸುರೇಶ್, ರಾಮು ಪಾಟೀಲ್, ಅನಿಲ್ ಶಾಸ್ತ್ರಿ , ಎಂ ಕೆ ಮಧುಸೂದನ್, ಸುಭಾಷ್, ಅರವಿಂದ ಶೆಟ್ಟಿ, ವಸಂತ, ಪ್ರದೀಪ್, ರಮೇಶ್, ಪುದುವೆಟ್ಟು, ಸುಚೇತನಾ ನಾಯಕ್ ಇನ್ನಷ್ಟು..ಮತ್ತಷ್ಟು.. ರಿಪೋರ್ಟರ್ ಗಳು ಕೋರ್ಟ್ ಗಳ ಕಡತಗಳಿಗೆ ಕೈ ಹಾಕಿದರು. ಕೇಸಿರದಿದ್ದರೂ ದಿನವೂ ಕಟಕಟೆ ಹತ್ತುವವರು ಇವರು. ‘ಕಟಕಟೆ ಹತ್ತಲು ಬಿಡಿ ನನ್ನ..’ ಎಂದ ಚರಬಂಡರಾಜು ಕವಿತೆಯ ಸಾಲುಗಳು ನೆನಪಾದವು.

ನಾನು ಕೋರ್ಟ್‌ನತ್ತ ಮೊದಲ ಹೆಜ್ಜೆ ಇಟ್ಟಾಗ ಜೊತೆಗಿದ್ದದ್ದು ನನಗೆ ಕ್ರೈಂ ರಿಪೋರ್ಟಿಂಗ್‌ನಲ್ಲೂ ಸಾಥಿಯಾಗಿದ್ದ ‘ಡೆಕ್ಕನ್ ಹೆರಾಲ್ಡ್‌’ನ ಕಂಚನ್‌ ಕೌರ್. ಕೋರ್ಟ್‌ನ ಹೊರ ಕಾಂಪೌಂಡ್‌ನಲ್ಲಿ ಒಬ್ಬೊಬ್ಬರೇ ಜಮಾಯಿಸುತ್ತಿದ್ದೆವು. ಎಲ್ಲಾ ಪೇಪರ್‌ನವರು ಬಂದಾಯ್ತು ಅಂತಾದಾಗ ಕೋರ್ಟ್‌ನ ಒಂದೊಂದು ಕೋಣೆಯ ಬಾಗಿಲು ಬಡಿಯುತ್ತಾ ಹೋಗುತ್ತಿದ್ದೆವು. ಕಡತಗಳು, ಆದಿನ ಆದ ವಿಚಾರಣೆಗಳು, ಕೊಟ್ಟ ತೀರ್ಪುಗಳು, ಸೆನ್ಸೇಷನಲ್ ಕ್ರೈಂಗಳು, ಇಂಟರೆಸ್ಟಿಂಗ್ ಕೇಸ್‌ಗಳು ಹೀಗೆ ಒಂದೊಂದು ಕಡತದ ಮೇಲೂ ನಮ್ಮ ಕೈ ಇರುತ್ತಿತ್ತು. ಕೋರ್ಟ್ ರಿಪೋರ್ಟಿಂಗ್‌ನಲ್ಲಿ ಮಾತ್ರ ಒಂದು ರೀತಿ ಕಾಮ್ರೇಡ್ ಗಿರಿ ಇತ್ತು.

ಗೊತ್ತಿಲ್ಲದ ಕಬ್ಬಿಣದ ಕಡಲೆಯನ್ನು ಹತ್ತು ಪತ್ರಿಕೆಗಳವರು ಅಗಿದರೂ ಅದು ಸರಿಯಿದೆಯೇ ಎಂಬ ಕೊರತೆ ಕಾಡುತ್ತಿತ್ತು. ಇದರ ಜೊತೆಗೆ ನಾಳೆ ನಮ್ಮ ವರದಿ ಪ್ರಿಂಟಾಗಿ ಅದು ನೆಟ್ಟಗಿಲ್ಲದೆ, ಕೋರ್ಟ್‌ನ ಕಡತಗಳಲ್ಲಿ ನಾವೂ ಒಂದು ಕಡತವಾಗಿಬಿಟ್ಟರೆ ಎಂಬ ಭಯ. ಆದರೆ ಈ ಮಧ್ಯೆಯೇ ಗುಂಡಪ್ಪನಂತಹವರು ಇದ್ದರು. ಅವರಿದ್ದೆಡೆಗೆ ಕೋರ್ಟಿನ ಕಡತಗಳೇ ಚಲಿಸಿ ಬರುತ್ತಿತ್ತು. ಅದನ್ನು ಕಣ್ಣಾರೆ ಕಂಡು, ಅವರ ಬಳಿ ಕುಳಿತು,ಕೋರ್ಟ್ ರಿಪೋರ್ಟಿಂಗ್‌ನ ಅ ಆ ಇ ಈ ಕಲಿಯತೊಡಗಿದೆ.

ಒಂದು ಘಟನೆ ಇಲ್ಲಿ ಹೇಳಬೇಕೇನೋ. ಹೀಗೆ ರಿಪೋರ್ಟಿಂಗ್‌ಗಾಗಿ ಕೋರ್ಟ್‌ಗೆ ಹೋಗಿ ಅಂಗಳದಲ್ಲಿ ಎಲ್ಲರಿಗೂ ಕಾಯುತ್ತಿದ್ದೆ. ದೊಡ್ಡ ಕಾರಿನಿಂದ ಇಳಿದ ವ್ಯಕ್ತಿ ನನ್ನತ್ತ ಬಂದರು. ಇದು ನಾಳೆ ಪ್ರಜಾವಾಣಿಯಲ್ಲಿ ಬರಬೇಕು ಗೊತ್ತಾ ಅಂದರು. ಆಗ ತಾನೆ ಕ್ಯಾಂಪಸ್‌ನಿಂದ ಎದ್ದು ಬಂದವರು ನಾವು ’ಪ್ರೆಸ್ ನೋಟ್ ಆದರೆ ಆಫೀಸಿಗೆ ಕಳುಹಿಸಿಕೊಡಿ’ ಎಂದೆ. ಆತ ಸರಿಯಾದ ಒಂದು ಲುಕ್ ಕೊಟ್ಟವನೇ ನಾಳೆ ಇದೇ ಸಮಯದ ಹೊತ್ತಿಗೆ ನಿನ್ನ ವಿಚಾರಿಸಿಕೊಳ್ಳುತ್ತೇನೆ ಅಂತ ಕಾರ್ ಹತ್ತಿದ. ‘ಬಂದ್ದೆಲ್ಲಲ್ಲಾ ಬರಲಿ, ಆ ಗೋವಿಂದನ ದಯೆಯೊಂದಿರಲಿ’ ಅಂತ ಸುಮ್ಮನಾದೆ.

ಮಾರನೆಯ ದಿನ ಮೈಮುರಿಯುತ್ತಾ ಎದ್ದವನಿಗೆ ಫೋನ್ ಒಂದೇ ಸಮ ಚೀರುವ ಶಬ್ದ ಕೇಳಿತು. ಫೋನ್ ಎತ್ತಿದರೆ ಕಂಚನ್ ಕೌರ್. ಇದೇನಪ್ಪಾ ಈ ಬೆಳಗಲ್ಲಿ ಅಂತ ಫೋನ್ ಎತ್ತಿಕೊಂಡವನೇ ಏನು ಅಂದೆ ಜಯರಾಜ್ ಕೊಲೆಯಾಗಿ ಹೋಗಿದ್ದಾರೆ. ಲಾಲ್‌ಬಾಗ್ ಗೇಟ್ ಬಳಿ ಬೇಗ ಬಾ ಅಂತ ಮಾಹಿತಿ ಕೊಟ್ಟು ಫೋನ್ ಇಟ್ಟಳು. ನಾನು ಛಕ್ಕನೆ ಆ ಜಾಗಕ್ಕೆ ಹೋಗಿ ಬಿದ್ದೆ ಜಯರಾಜ್ ಮಾತ್ರವಲ್ಲ ಇನ್ನೂ ಒಂದು ಹೆಣ ಇತ್ತು ಯಾರದು ಅಂತ ಹತ್ತಿರ ಹೋದೆ. ಒಂದು ಕ್ಷಣ ತಲ್ಲಣಿಸಿದೆ. ಆತ ಅದೇ ಹಿಂದಿನ ದಿನ ನನ್ನನ್ನು ನೋಡಿಕೊಳ್ಳುವುದಾಗಿ ಧಮಕಿ ನೀಡಿದ್ದ ಅದೇ ಲಾಯರ್!

ಕೋರ್ಟ್‌ನಲ್ಲಿ ಒಂದೆರಡಲ್ಲ, ಟಿಆರ್ ಪಿ ಯನ್ನು ಸರ್ರನೆ ಆಕಾಶಕ್ಕೇರಿಸುವ ಸುದ್ದಿಗಳಿವೆ ಅಂತ ನನಗೆ ಗೊತ್ತಾದದ್ದು ಸಿ.ಎಚ್ ಹನುಮಂತರಾಯ ಅವರಿಂದ ’ವಕೀಲರ ವಗೈರೆಗಳು’ ಓದಿದ ನನಗೆ ಅವರು ಹ್ಯಾಂಡಲ್ ಮಾಡಿದ ಪ್ರಕರಣಗಳೆಲ್ಲವೂ ಒಂದು ರೀತಿ ಬಾಯಿಪಾಠ ಆಗಿಹೋಗಿದ್ದವು.

ನನಗೇನು? ಬಹುಷಃ ಆ ಕಾಲದ ಪ್ರತಿಯೊಬ್ಬ ಕನ್ನಡ ಓದುಗನ ಮನದಲ್ಲೂ ಈ ಸೆನ್ಸೇಷನಲ್ ಪ್ರಕರಣಗಳು ನಾಲಿಗೆಯ ಮೇಲೇ ಇರುತ್ತಿತ್ತು. ಇವರ ಜೊತೆ ಕೋ.ಚನ್ನಬಸಪ್ಪ ಅವರು ಬರೆದ ಅನುಭವ ಪುಸ್ತಕಗಳು, ‘ಪ್ರಜಾಮತ’ದಲ್ಲಿದ್ದ ಎಚ್.ಪಿ.ಫಿಲೋಮಿನಾ ಬರೆಯುತ್ತಿದ್ದ ಲೇಖನಗಳು ಎಲ್ಲವೂ ಒಂದು ರೀತಿ ಕೋರ್ಟ್‌ನಲ್ಲೂ ನ್ಯೂಸ್ ಇದೆ ಎನ್ನುವುದನ್ನು ಸಾರಿ ಹೇಳಿತ್ತು .

ಹಾಗಾಗಿಯೇ ನಾನು ಈಟಿವಿಗೆ ವರದಿಗಾರರನ್ನು ಆಯ್ಕೆ ಮಾಡಿಕೊಳ್ಳಲು ಮೊದಲ ಬಾರಿ ಕಣಕ್ಕಿಳಿದಾಗಲೇ ಒಬ್ಬರಲ್ಲ ನಾಲ್ವರಾದರೂ ಕೋರ್ಟ್ ರಿಪೋರ್ಟರ್‌ಗಳು ಬೇಕು ಅಂತ ನಿರ್ಧರಿಸಿಬಿಟ್ಟಿದ್ದೆ. ಹಾಗಾಗಿ ಅಪ್ಲಿಕೆಂಟ್‌ಗಳಲ್ಲಿ ಯಾರಾದರೂ ಲಾ ಓದಿದವರು ಸಿಗುತ್ತಾರಾ ಅಂತ ದುರ್ಬೀನು ಹಾಕಿ ಹುಡುಕುತ್ತಿದ್ದೆ. ಅಂತೂ ಸಿಕ್ಕಿದರು. ಸಾಕಷ್ಟು ತರಬೇತಿಯೂ ನೀಡಿದ್ದಾಯ್ತು. ಆದರೆ ಪುಸ್ತಕದ ಬದನೇಕಾಯಿ ಕೆಲಸಕ್ಕೆ ಬರುವುದಿಲ್ಲ ಅಂತ ಜರ್ನಲಿಸಂ ಓದಿ ಬಂದವರನ್ನು ನೋಡಿ ಗೊತ್ತಾಗಿತ್ತು. ಈಗ ಲಾ ಓದಿ ಬಂದವರನ್ನು ನೋಡಿದಾಗ ಇನ್ನೊಮ್ಮೆ ಸಾಬೀತಾಯಿತು.

ಹೀಗಾಗಲು ಇನ್ನೊಂದು ಕಾರಣವೂ ಇತ್ತು. ನಾನು ಕೆಲಸ ಮಾಡಿದ ಜೊತೆಗಾರರ ಪೈಕಿ ನಾನು ಕಂಡ ಅತ್ಯಂತ ಬೆಸ್ಟ್ ಕ್ರೈಂ ರಿಪೋರ್ಟರ್ ಸೋಮಶೇಖರ ಕವಚೂರು.

ದಾವಣಗೆರೆಯ ‘ನಗರವಾಣಿ’ ಯ ಬಿ ಎನ್ ಮಲ್ಲೇಶ್ ಗರಡಿಯಲ್ಲಿ ಪಳಗಿದ ಸೋಮಶೇಖರ್ ಜಿಗಿದದ್ದು ಸಂಯುಕ್ತ ಕರ್ನಾಟಕಕ್ಕೆ ಅಲ್ಲಿಂದ ಈಟಿವಿಗೆ. ಸೋಮಶೇಖರ್ ಮುಂದೆ ಎರಡು ರೀತಿಯ ಸವಾಲಿತ್ತು. ಕೋರ್ಟ್‌ನಲ್ಲಿ ಸೆನ್ಸೇಷನಲ್ ಎನ್ನುವ ಸುದ್ದಿಯನ್ನು ಆಚೆಗೆ ಎಳೆದುಹಾಕಬೇಕು ಆದರೆ ಅಷ್ಟೇ ಅಲ್ಲ ಈಗ ಅದಕ್ಕೆ ಬೇಕಾದ ವಿಶುವಲ್ಸ್‌ಗಳನ್ನು ಕೊಡಬೇಕು. ಆತನ ನಾಲಿಗೆಯ ಮೇಲೆ ಕೇಸ್ ಸಂಖ್ಯೆ, ನಿಯಮಾವಳಿ ಎಲ್ಲಾ ಇರುತ್ತಿತ್ತು.

ತೆಲಗಿ ಮಂಪರು ಪರೀಕ್ಷೆಯ ಸಿಡಿಯನ್ನು ಹೊರಕ್ಕೆಳೆದು ತಂದಾಗ ಸುದ್ದಿ ಜಗತ್ತು ತಲ್ಲಣಿಸಿ ಕುಳಿತಿತ್ತು. ಹೈಕೋರ್ಟ್ ಪೀಠದ ಸುದ್ದಿ ಬ್ರೇಕ್ ಆಗಿದ್ದು ಸೋಮಶೇಖರ್‌ನಿಂದ, ಗ್ರಾಮೀಣ ಕೃಪಾಂಕದ ಸುದ್ದಿ ಹೊರಬಿದ್ದದ್ದು ಆತನಿಂದ. ಅಷ್ಟೇ ಏಕೆ ಕುಮಾರಸ್ವಾಮಿ ಯಡಿಯೂರಪ್ಪ ಕೈ ಜೋಡಿಸಿ ಹೊಸ ರಾಜಕೀಯಕ್ಕೆ ಡಿದ್ದಾರೆ ಎನ್ನುವ ಸುದ್ದಿ ಸ್ಪೋಟವಾಗಿದ್ದು ಈತನಿಂದ. ಈ ಎಲ್ಲಾ ಸುದ್ದಿಯನ್ನು ನೋಡಿದಾಗ ‘ಸೋಮಶೇಖರ್ ಅಖಾಡದಲ್ಲಿ ಸೌಮ್ಯರಾಣಿಯೇ?’ ಅನ್ನುವಂತಾಗಿಹೋಗಿತ್ತು.

ಮೊನ್ನೆ ದಿಢೀರನೆ ಸೋಮಶೇಖರ್ ಸಿಕ್ಕರು. ಏನು ಮಾಡ್ತಿದ್ದೀರಿ ಅಂತ ಕುಶಲೋಪರಿ ಮಾತನಾಡಿದೆ. ಎಲ್ ಎಲ್ ಬಿಗೆ ನೊಂದಾಯಿಸಿದ್ದೇನೆ ಅಂದರು. ಅರೇ! ಕಸುಬು ಕಲಿತ ಮೇಲೆ ಕಲಿಕೆ ಅಂತ ಆಶ್ಚರ್ಯ ಆಯಿತು. ಅದೇ ಸಮಯಕ್ಕೆ ಸೃಷ್ಟಿ ನಾಗೇಶ್ ಪಿ ರಾಜೇಂದ್ರ ಬರೆದ ಕೋರ್ಟ್ ವರದಿ ಮಾಡುವ ಕುರಿತ ಮಾಧ್ಯಮ ಮಾರ್ಗದರ್ಶಿಯನ್ನು, ಪ್ರಕಾಶ್ ಕಂಬತ್ತಳ್ಳಿ ಹಾ.ರಾ ಬರೆದ ‘ವಕೀಲಿ ದಿನಗಳು’ ಕೈಗಿತ್ತರು. ಹಾಗಾಗಿ ಇದೆಲ್ಲಾ ನೆನಪಾಯಿತು

ಬುಕ್ ಟಾಕ್

ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಕೆಲವೇ ಮಂದಿಯಲ್ಲಿ ಶಿವಾನಂದ ಕಳವೆ ಒಬ್ಬರು. ಈಗಾಗಲೇ ತಮ್ಮ ಬರಹದ ಬದ್ಧತೆಗಾಗಿ ರಾಜ್ಯ ಸರ್ಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಇತ್ತೀಚಿಗೆಅಡಿಕೆ ಪತ್ರಿಕೆ ಹಾಗೂ ಉದಯವಾಣಿಯಲ್ಲಿ ಬರೆದ ಅಂಕಣ ಬರಹಗಳನ್ನು ಒಂದೆಡೆ ತಂದಿದ್ದಾರೆ. ‘ಕಂಪ್ಯೂಟರ್ ಊಟ ಹಳ್ಳಿ ಮಾರಾಟ’ ನಮ್ಮ ಆಳಕ್ಕಿಳಿದು ಅಂತರಂಗವನ್ನು ಚುಚ್ಚುತ್ತದೆ. ಬೆಂಗಳೂರಿನ ಧಾತ್ರಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. .

ಕೆಂಪ್ ಮೆಣಸಿನ್ಕಾಯ್

‘ಥಟ್ ಅಂತ ಹೇಳಿ’ ಖ್ಯಾತಿಯ ನಾ ಸೋಮೇಶ್ವರ್ ಅವರಿಗೆ ಒಮ್ಮೆ ಮನೆಗೆ ಹೋಗುವಾಗ ದಾರಿ ತಪ್ಪಿತಂತೆ. ಕಾರು ನಿಲ್ಲಿಸಿ ಹಾದಿಹೋಕನೊಬ್ಬನನ್ನು ‘ಯಲಹಂಕಕ್ಕೆ ಈ ರಸ್ತೆ ಹೋಗುತ್ತಾ?’ ಅಂತ ಕೇಳಿದರಂತೆ. ಆತ ಹೋಗುತ್ತೆ ಅಂದನಂತೆ. ತಕ್ಷಣ ಸೋಮೇಶ್ವರ್ ಕಾರಿನಿಂದ ಒಂದು ಪುಸ್ತಕ ತೆಗೆದು ಕೈಗಿತ್ತರಂತೆ. ಆತ ಕಕ್ಕಾಬಿಕ್ಕಿ. ಆಗ ಸೋಮೇಶ್ವರ್- ಒಂದು ಪ್ರಶ್ನೆ ಒಂದು ಸರಿಯಾದ ಉತ್ತರ ಬಹುಮಾನವಾಗಿ ಒಂದು ಪುಸ್ತಕ ಎಂದರಂತೆ..ಇದು ಜೋಗಿ ಹುಟ್ಟುಹಾಕಿದ ಜೋಕ್

No comments: