Thursday, August 5, 2010

ಕಡಲಿಗೆಷ್ಟೊಂದು ಬಾಗಿಲು

ಕಡಲಿಗೆಷ್ಟೊಂದು ಬಾಗಿಲು

ಬಾಗಿಲು ತೆರೆವ ಮುನ್ನ

-ರೂಪ ಹಾಸನ

ಕವಿತೆ ಸದಾ ನನ್ನ ಆಪ್ತ ಆತ್ಮಸಂಗಾತಿ ಮತ್ತು ಅಂತರಂಗದ ಗುರು. ಅದಕ್ಕೆ ನನ್ನ ನೋವು, ಸಂಕಟ, ಸಂತಸ, ವಿಷಾದ, ಮೌನ, ಸಿಟ್ಟು ಎಲ್ಲವೂ ಅರ್ಥವಾಗುತ್ತದೆ. ಅದರೊಂದಿಗೆ ನನ್ನ ಪ್ರೀತಿ ಹಂಚಿಕೊಳ್ಳುತ್ತಾ, ಜಗಳವಾಡುತ್ತಾ, ಹಠಮಾಡುತ್ತಾ , ಪ್ರಶ್ನಿಸಿ ಕಾಡಿಸುತ್ತಾ, ಹುಚ್ಚು ತೋಡಿಕೊಳುತ್ತಾ ನಾನಿರುವಂತೆಯೇ ನನ್ನನ್ನು, ಸುತ್ತಲ ಪ್ರಪಂಚವನ್ನು ನನ್ನೊಳಗೆ ವಿವರಿಸಿಕೊಳ್ಳುಲು, ಪರಿಭಾವಿಸಿಕೊಳ್ಳಲು ಪ್ರಯತ್ನಿಸುತ್ತಾ ಬಂದಿದ್ದೇನೆ.

ಸೃಷ್ಟಿ ಸತ್ಯಗಳು- ವೈಚಿತ್ರ್ಯಗಳು, ಮನುಷ್ಯ ಸಹಜತೆಯನ್ನು ಒಡೆಯುವ ಲೋಕ ರಾಜಕಾರಣಗಳು, ಮುಖವಾಡದೊಳಗಿನ ಕಪಟ ಮನಸುಗಳು, ಸಂವೇದನೆ ಕಳೆದು ಕೊಂಡ ಜೀವಗಳು, ಸದ್ದಿಲ್ಲದೇ ಪಲ್ಲಟಗೊಳುವ ಮೌಲ್ಯಗಳು, ನಂಬಿಕೆಯಾಚೆಗಿನ ಸತ್ಯಗಳು ನನ್ನೊಳಗಿಳಿದು ಕಾಡುವಾಗ, ಮಾನವೀಯ ಸಾಧ್ಯತೆಯ, ಅಂತಕರಣದ ಸೆಲೆಯ ಹುಡುಕಾಟದಲ್ಲಿ ನನಗೆ ನನ್ನ ಕವಿತೆ ಸಂತೈಕೆಯಾಗಿ, ಸಮಾಧಾನವಾಗಿ, ಬಿಡುಗಡೆಯಾಗಿ, ಸಹಜ-ಮುಕ್ತ ದಾರಿಯಾಗಿ ಕಂಡಿದೆ.

ಕವಿತೆಯೆಂದರೆ, ದಂತಗೋಪುರದಲ್ಲಿ ಕುಳಿತು ಭ್ರಮಾಲೋಕದಲ್ಲಿ ವಿಹರಿಸುತ್ತಾ, ನನಗೂ ಹೊರ ಪ್ರಪಂಚಕ್ಕೂ ಸಂಬಂಧವಿಲ್ಲವೆಂಬ ನಾರಾಕರಣೆಯಿದ ಪದಗಳನ್ನು ಕಟ್ಟುವ ಆಟ ಅಲ್ಲವೆಂದು, ಭಾವತೀವ್ರತೆಯಲ್ಲಿ ತಾನಾಗಿಯೇ ಅನಿವಾರ್ಯವಾಗಿ ಹುಟ್ಟುವ ಪ್ರಾಮಾಣಿಕ ಅಭಿವ್ಯಕ್ತಿಯೆಂದು ನಂಬಿದ್ದೇನೆ. ಅದಕ್ಕೆ ನಯವಾದ ಹೊರ ಕವಚವನ್ನು ತೊಡಿಸುವ ಕುಸುರಿಯನ್ನಷ್ಟೇ ನಾನು ಬುದ್ಧಿಪೂರ್ವಕವಾಗಿ ಮಾಡುತ್ತಾ ಬಂದಿದ್ದೇನೆ. ಮಿಕ್ಕಂತೆ ಸಹಜ ಪ್ರಸವದ ಅಂತಹ ಅನೂಹ್ಯ ಕ್ಷಣಗಳಿಗಾಗಿ ತಾಳ್ಮೆಯಿಂದ ಕಾದಿದ್ದೇನೆ.

ನನ್ನ ಅಂತರಂಗದ ಗುರುವಾಗಿ ಕವಿತೆ, ಹೊರಗಿನ ಕೃತಕತೆಗೆ ತಲೆಬಾಗದೇ ನನ್ನೊಳಗಿನ ನೈಜತೆಗೆ ಮುಖಾಮುಖಿಯಾಗುವುದನ್ನು ಕಲಿಸಿದೆ. ಅದು ನನ್ನೊಳಗೆ ನೋವನ್ನೆದುರಿಸುವ ಆತ್ಮವಿಶ್ವಾಸವನ್ನೂ, ಜೀವನ ಪ್ರೀತಿಯನ್ನೂ, ಮನುಷ್ಯ ಪ್ರೀತಿಯನ್ನೂ ಸದಾ ಎಚ್ಚರಿಸುತ್ತಲೇ ಬಂದಿದೆ. ಜೊತೆಗೇ ಹೊರಗಿನ ತಲ್ಲಣಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ, ಪೂರ್ವಾಗ್ರಹಗಳಿಲ್ಲದೇ ಅರಿಯುವ, ಈ ನನ್ನ ಅಲ್ಪ ಅರಿವಿನಾಚೆಗೂ ಇರುವ ಬೆರಗಿಗೆ, ಶಕ್ತಿಗೆ, ಅನೂಹ್ಯ ಸೃಷ್ಟಿ ಸತ್ಯಗಳಿಗೆ ತಲೆಬಾಗುವ ವಿನಯವನ್ನೂ ಕವಿತೆ ನನಗೆ ಕಲಿಸಿದೆ.

ಈ ನನ್ನ ಕವಿತೆಗಳು ನಿಮ್ಮವೂ ಕೂಡ ಎಂದು ನಿಮಗನ್ನಿಸಿದರೆ, ಕವಿತೆ ಪ್ರಕಟಗೊಂಡಿದ್ದು ಸಾರ್ಥಕ ಎಂದು ಭಾವಿಸುತ್ತೇನೆ. ಎಂದಿನದೇ ಪ್ರೀತಿಯಿಂದ ಈ ನನ್ನ ಕವಿತೆಗಳನ್ನೂ ಸ್ವೀಕರಿಸುವಿರೆಂದು ನಂಬಿದ್ದೇನೆ.

(ಸಂಕಲನಕ್ಕೆ ಕವಯತ್ರಿಯ ಮಾತು)

No comments: