Thursday, August 5, 2010

ಬೆಡ್ ರೂಮಿಂದ ಈಚೆಗ ಬರದ ಭೈರಪ್ಪನವರ ‘ಕವಲು’:ಚೇತನಾ ಬರಹ

ಚೇತನಾ ತೀರ್ಥಹಳ್ಳಿ



ಎಸ್.ಎಲ್.ಭೈರಪ್ಪ

ಬಳೆ ಇಲ್ಲದ, ಸರವಿಲ್ಲದ, ಹಣೆಗಿಲ್ಲದ, ಕ್ರಿಶ್ಚಿಯನ್ನರ ಥರವೋ ಮುಸಲ್ಮಾನರ ಥರವೋ ವಿಧವೆಯ ಥರವೋ ಕಾಣುವ ಹೆಂಗಸರೆಲ್ಲ ಸೂತಕದವರು. ಅವರು ಕೊನೆಪಕ್ಷ ಕಾಮವನ್ನು ಪ್ರಚೋದಿಸಲಿಕ್ಕೂ ನಾಲಾಯಖ್ಖಾದವರು. ಅವರು ಹೆಚ್ಚೂಕಡಿಮೆ ಹೆಂಗಸು ಜಾತಿಗಿಂತ ಹೊರಗೆ. ಅವರೆಲ್ಲ ಸ್ತ್ರೀವಾದಿಗಳು. ಶೋಷಣೆಯ ಪುಕಾರುಗಳನ್ನು ಸುಖಾಸುಮ್ಮನೆ ಹಬ್ಬಿಸಿ ಗಂಡಸಿನ ಬದುಕನ್ನು ಮೂರಾಬಟ್ಟೆ ಮಾಡಲೆಂದೇ ಹುಟ್ಟಿಕೊಂಡವರು. ನಿಮಗ್ಗೊತ್ತಾ? ಅವರು ಗಂಡನ್ನ,ಗಂಡಸರನ್ನ ಏಕವಚನದಲ್ಲೆ ಕರೀತಾರೆ! ಇದು ಸಂಸ್ಕೃತಿಗೆ ಹೊಂದುತ್ತದೆಯೇ? ಇವತ್ತಿನ
ಭಾರತದ ಸಂಸಾರಗಳು ಇಂಥ ಮಹಿಳಾವಾದಿ ಹೆಂಗಸರಿಂದಲೇ 'ಪುಡಿಪುಡಿ' ಆಗಿಹೋಗ್ತಿದೆ....

ಇಂಥದೊಂದು ಪರಮಸಂಕಟದಿಂದ ಭೈರಪ್ಪನವರು ಬರೆದ ಕಾದಂಬರಿಯ ಹೆಸರು 'ಕವಲು'. ಪುಟ ತೆರೆದ ಶುರುವಲ್ಲೇ ಅವರ ಫರ್ಮಾನು ಇದೆ, 'ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು' ಅಂತ. ಅಂದಮೇಲೆ ಇಡಿ ಕಾದಂಬರಿಯನ್ನು ಇವತ್ತಿಗೆ ಹೊಂದಿಸ್ಕೊಂಡೇ ಓದಬೇಕಾಗ್ತದೆ. ಹೆಂಗಸರು ಎಷ್ಟೆಲ್ಲ ಅನ್ಯಾಯ ಮಾಡ್ತಾರಲ್ಲವೆ? ಅದರಲ್ಲೂ ಬಳೆ-ಸರ ಹಾಕದ, ಕುಂಕುಮವಿಡದ, ಓದು-ಬರೆದು ಮಾಡಿಕೊಂಡಿರುವವರಂತೂ ಹಾದರಗಿತ್ತಿಯರೇ! ಓದು ಬರಹದ ಮಾತು ಬಂದಾಗಲೇ ಹೇಳಿಬಿಡಬೇಕು... 'ಓದಿಕೊಂಡ ಗಂಡಸರು ಹೆಂಗಸಂತಾಗ್ತಾರೆ ಮತ್ತು ಓದಿಕೊಂಡ ಹೆಂಗಸರು ಗಂಡಸಂತಾಗ್ತಾರೆ'. ಇದು ಭೈರಪ್ಪನವರ ಹೊಸ ಸಂಶೋಧನೆ. ಅದಕ್ಕೇ ಅಪಘಾತದಿಂದ ಮಾನಸಿಕ ಸ್ವಾಸ್ಥ್ಯ ಕಳಕೊಳ್ಳುವ ಮಗಳು ವತ್ಸಲೆ ಬಗ್ಗೆ 'ಓದು ಬರಹ ಕಲಿಸೋದೇನೂ ಬ್ಯಾಡ. ಮನೆ ಕೆಲ್ಸ ಹೇಳ್ಕೊಡ್ತೀನಿ ಒಂದೊಂದೇ' ಅನ್ನುವ ಮಾತು ಹೊರಡುವುದು. ವೈಯಕ್ತಿಕವಾಗಿ ನನಗೆ, ಭೈರಪ್ಪನವರಲ್ಲಿರುವ ವೈರುಧ್ಯದ ಬಗ್ಗೆ ಅಚ್ಚರಿಯಾಗುತ್ತೆ. ವತ್ಸಲೆಯ ಅಮ್ಮ ಜಯಂತಿ ಇಂಜಿನಿಯರ್ರು. ಓದಿಯೂ ಹೆಂಗಸಾಗಿ ಉಳಿದಿದ್ದವಳು. ಉದ್ದ ಜಡೆ, ಅದರ ತುಂಬ ಹೂವ... ಇಳೆ ಮತ್ತು ಮಂಗಳೆ ವಿಷಯದಲ್ಲಿ ಕಾರಿಕೊಳ್ಳುವಾಗ ಅವರು ಓದಿದವರು ಅನ್ನುವ ಫ್ಯಾಕ್ಟ್ ಅನ್ನು ಆಕ್ಷೇಪಣೆಯ ಹಾಗೆ ತೋರಿಸಿರೋದ್ಯಾಕೆ!? ಅವರು 'ನಾರೀಮಣಿಯರ' ಥರ ಅಲಂಕರಿಸಿಕೊಳ್ಳೋಲ್ಲವೆಂದೇ? ಮತ್ತೊಂದು ವಿಷಯ, ಹಣೆಗಿಣೆಗೆ ಇಡದೆ ಅಲಂಕರಿಸಿಕೊಳ್ಳದ ಮಾತ್ರಕ್ಕೆ ಆಕೆಯನ್ನು ವಿಜಾತೀಯಳಂತೆ ಕಳಾಹೀನವಾಗಿ ಕಾಣುತ್ತಾಳೆ ಎಂದು ಪಾತ್ರಗಳ ಬಾಯಿಂದ ಹೇಳಿಸಿದ್ದಾರೆ, ಆಕ್ಷೇಪಣೆಯ ಧಾಟಿಯಲ್ಲಿ. ಇತರ ಜಾತಿಯ ಹೆಣ್ಣುಮಕ್ಕಳ ಬಗ್ಗೆ ಈ ತಾತ್ಸಾರ ಯಾಕೋ ಕಾಣೆ! ಅವರನ್ನು ಏನೆಂದು ಬಿಂಬಿಸಲು ಹೊರಟಿದ್ದಾರೆ?

ಭೈರಪ್ಪ ಅದ್ಭುತ ಕಾದಂಬರಿಕಾರರು, ಎರಡು ಮಾತಿಲ್ಲ. ಅದರಿಂದಲೇ ಈ ಇಡೀ ಕಾದಂಬರಿಯಲ್ಲಿ ಅವರ ವಿಚಾರವನ್ನು ಪ್ರತ್ಯೇಕಿಸದ ಹಾಗೆ 'ಅದು ಪಾತ್ರದ ಮನಸ್ಥಿತಿ'ಯಷ್ಟೆ ಎಂಬ ಸಮಜಾಯಿಷಿಗೆ ಅವಕಾಶವಿಟ್ಟುಕೊಂಡು ಅದನ್ನ ಹೆಣೆದಿದ್ದಾರೆ. ಇಳಾ ಮತ್ತು ಮಂಗಳೆಯ ಪಾತ್ರಗಳ ಹಿಕಮತ್ತುಗಳು ಕೋಪ ತರಿಸುವುದು ನಿಜ. ಆ ಕಾರಣ ಮುಂದಿಟ್ಟುಕೊಂಡು ಹೆಂಡತಿಯ ಕೆರಿಯರ್ ಹಕ್ಕನ್ನು ನಿರಾಕರಿಸುವ ವಿನಯಚಂದ್ರನ ಬಗೆಗಾಗಲೀ ಕಟ್ಟುಬೀಳದೆ ದೇಹಬಾಧೆ ತೀರಿದರೆ ತೀರಲಿ ಅನ್ನುವ ಮನಸ್ಥಿತಿಯಿಂದ ನೌಕರಳನ್ನು ಹಾಸಿಗೆಗೆಳೆಯುವ ಜಯಕುಮಾರನ ಬಗೆಗಾಗಲೀ, ನನ್ನ ಹೆಂಡತೀನ ನಾನು ಗೌರವಿಸ್ತೀನಿ, ಪ್ರೀತಿಸ್ತೀನಿ, ಅವಳಿಗೇ ಡೈವೋರ್ಸ್ ಕೊಡು ಅಂತಾಳೆ ಅಂತ ಬಯ್ಕೊಳ್ಳುವ ಮಂತ್ರಿಯ ಬಗೆಗಾಗಲೀ ಅನುಕಂಪ ತಾಳಿದರೆ ಅದರಷ್ಟು ಅಸಹ್ಯ ಯಾವುದೂ ಇರುವುದಿಲ್ಲ. ಆದರೆ, ಆ ಎಲ್ಲ ಗಂಡಸರ ಬಗೆಗೆ ಅನುಕಂಪ ತರಿಸುವ ಮತ್ತು 'ಸಮಕಾಲೀನ ಭಾರತದ ಮಹಿಳಾವಾದಿಗಳ' ಬಗ್ಗೆ ತಾತ್ಸಾರ ಮೂಡಿಸುವ ಕೆಲಸವನ್ನು ಭೈರಪ್ಪನವರ ಬರಹ ಸಮರ್ಥವಾಗಿ ಮಾಡುತ್ತದೆ! 'ಕವಲು ದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುವ' ಕೃತಿ ಅನ್ನುತ್ತಾ ಭಾರತದ ಹೆಣ್ಣುಮಕ್ಕಳ ಮಾನ ಹರಾಜಿಟ್ಟಿದ್ದು ಸಾಲದೇ ಅಮೆರಿಕೆಯ ಟ್ರೇಸಿ ಮತ್ತು ಲಿಂಡ್ಸೆಯರನ್ನೂ ಬೀದಿಗೆಳೆದಿದ್ದಾರೆ. ಮಹಿಳಾವಾದವನ್ನು ಜರಿಯುವ ಭರದಲ್ಲಿ ಹೆಣ್ಣಿನ ಕಡೆಯವರು ವರದಕ್ಷಿಣೆಯ ವಾಗ್ದಾನ ಮಾಡಿದ್ದನ್ನೇ ತಪ್ಪು (ಕೇಶವನ ಮಗಳ ಮದುವೆ ಸಂಗತಿ) ಎಂದು ಹೇಳುವಾಗಲಂತೂ ವಾಕರಿಕೆ ಬರುತ್ತದೆ. ಅಷ್ಟು ದುಡ್ಡನ್ನು ನಾಚಿಕೆಬಿಟ್ಟು ಕೇಳುವ ವರನ ಬಗ್ಗೆ ಏನೂ ಆಡಬಾರದೆ? ಇದು ಏನನ್ನು ಹೇಳುತ್ತದೆ? 'ಕರೆವೆಣ್ಣನ್ನು ಕರೆಸ್ಕೊಂಡು ಜೈಲು ಸೇರಿದವರ ಸಾಕ್ಷಿ ಪೋಲಿಸರು ಒಪ್ತಾರೆಯೇ?' ಎನ್ನುವಂಥ ಅತ್ತಿಗೆಯ ಮಾತು ಕೂಡ ಜಯಕುಮಾರನ ಬಗ್ಗೆ ಅನುಕಂಪ ಹುಟ್ಟಿಸುವ ಧಾಟಿಯಲ್ಲಿ, ಆಕೆಯ ಬಗ್ಗೆ ತಿರಸ್ಕಾರ ಬರುವ ರೀತಿಯಲ್ಲಿ ರಚಿಸಿರುವುದರ ಉದ್ದೇಶವಾದರೂ ಏನು?

ಹೆಣ್ಣುಮಕ್ಕಳು ತಮ್ಮ ಸಮುದಾಯಕ್ಕಾಗಿ ಹಿಂದೆಂದೂ ಇಲ್ಲದ ಒಗ್ಗಟ್ಟಿನಲ್ಲಿ ದನಿ ಎತ್ತುತ್ತಿರುವುದು ದಬ್ಬಾಳಿಕೆ ಮನೋಭಾವದ ಗಂಡಸರ ಅಹಮ್ಮಿಗೆ ಎಷ್ಟರಮಟ್ಟಿಗೆ ಘಾಸಿ ಕೊಟ್ಟಿದೆ ಅನ್ನುವುದನ್ನು 'ಕವಲು' ಸಮರ್ಥವಾಗಿ ತಿಳಿಸಿಕೊಡುತ್ತದೆ. ಇಲ್ಲಿನ ಪ್ರತಿಯೊಬ್ಬ ಸ್ತ್ರೀವಾದಿಯ ಚಿತ್ರ ಕೆತ್ತುವಾಗಲೂ ತನ್ನ ಅಹಮ್ಮಿಗಾದ ಪೆಟ್ಟಿನ ಸೇಡು ತೀರಿಸಿಕೊಳ್ಳುವ ವಿಕೃತಿ ದಟ್ಟವಾಗಿ ಕಾಣುತ್ತದೆ. ರಾಷ್ಟ್ರಮಟ್ಟದ ಚಳವಳಿಗಾರ್ತಿ ಸರಾಫಳನ್ನು ಲೆಸ್ಬಿಯನ್ನಾಗಿ ತೋರಿಸುವ ಮೂಲಕ ತಮ್ಮ ವಿಕೃತ ಚಿಂತನೆಯ ಪೀಕ್ ಗೆ ಹೋಗಿದ್ದಾರೆ ಅನ್ನಬಹುದು. ಇಷ್ಟಕ್ಕೂ ಲೆಸ್ಬಿಯನ್ನಾದರೆ ಏನಾಯ್ತು? 'ಆಕೆಗೆ ಕಳಕಳಿ ಇರೋದು ಮುಖ್ಯ' ಅಂತ ಸಮರ್ಥಿಸಿಕೊಳ್ಳುವ ಜನಸಂಖ್ಯೆ ಕಡಿಮೆ ಇರೋದ್ರಿಂದ ಈ ಪಾಯಿಂಟ್ ಸಮರ್ಪಕವಾಗಿ ಓದುಗರ ತುಟಿಯಂಚಲ್ಲಿ ವ್ಯಂಗ್ಯದ ಕೊಂಕು ಮೂಡಿಸುತ್ತೆ.

ಹೆಣ್ಣನ್ನು ಲೈಂಗಿಕ ಅಭೀಪ್ಸೆಯ ದಾಸಿಯನ್ನಾಗಿ ಚಿತ್ರಿಸಿರುವ ಕಾದಂಬರಿಕಾರರ ರೀತಿ ಅಸಹ್ಯವನ್ನಲ್ಲದೆ ಮತ್ತೇನನ್ನೂ ಮೂಡಿಸುವುದಿಲ್ಲ. ಮತ್ತಿದನ್ನು ‘ಭಾರತೀಯ ಸಮಾಜದಲ್ಲಿ...' ಇತ್ಯಾದಿ ಮುತ್ತುದುರಿಸಿ ಮತ್ತಷ್ಟು ಅಸಹ್ಯ ತರಿಸಿದ್ದಾರೆ. ಈ ಸ್ಟೇಟ್ಮೆಂಟ್ ಇಲ್ಲದೆ ಹೋಗಿದ್ದರೆ ಇಷ್ಟೆಲ್ಲ ಮನಸಿಗೆ ಕಸಿವಿಸಿಯಾಗ್ತಿರಲಿಲ್ಲವೇನೋ?

ಭೈರಪ್ಪನವರನ್ನೇ ನೇರವಾಗಿ ಕೇಳಬಹುದಾದರೆ, ಮಹಿಳಾವಾದ ಅಂದರೆ ಏನಂದ್ಕೊಂಡಿದೀರಿ ತಾವು? ಇಡೀ ಕಾದಂಬರಿಯಲ್ಲಿ ಸಮಾಜ ಮುಖಿಯಾಗಿರುವ ಅಥವಾ ಚಳುವಳಿಯಲ್ಲಿ ತೊಡಗಿರುವ ಯಾವೊಬ್ಬ ಹೆಣ್ಣೂ ನಿಮ್ಮ ಕಣ್ಣಿಗೆ ಒಳ್ಳೆಯವಳಾಗಿ ಯಾಕೆ ಕಾಣದೆಹೋದಳು? ಫೆಮಿನಿಸ್ಟ್‌ಗಳ ಸ್ನೇಹ ಮಾಡಬಹುದು ಹೊರತು ಮದುವೆಯಾಗಬಾರದು ಅನ್ನುವ ನಿಮ್ಮ ಪ್ರಭಾಕರನ ಸ್ಟೇಟ್‌ಮೆಂಟೇ ಪುರುಷನ ಅಹಂಕಾರದ ಧೋರಣೆಯನ್ನ ಬಿಂಬಿಸುತ್ತೆ ಅಲ್ವೆ? ಜನರಲೈಸ್ ಮಾಡುತ್ತಿಲ್ಲ. 'ನಿಮ್ಮ ಮನಸ್ಥಿತಿಯನ್ನ' ಎಂದಾದರೂ ಓದಿಕೊಳ್ಳಬಹುದು. ಹೋಗಲಿ, ಈ ಕೃತಿ, ಇವತ್ತಿನ ತಲೆಮಾರಿನ ಓದುಗರಿಗೂ ಸೇರುವಂಥದು. ಅವರಿಗಾಗಿ ಯಾವ ಹೊಸತನ್ನು ನೀಡಿದ್ದೀರಿ ಕವಲಿನ ಮೂಲಕ ಎಂದು ಕೇಳಬಹುದೇ? ಮತ್ತದೆ ಅದೇ ಉದ್ಯೋಗಸ್ಥ ಮಹಿಳೆ ಕದ್ದು ಬಸಿರಾಗುವುದು, ಅದರ ಸುತ್ತ ಹೆಣೆದುಕೊಳ್ಳುವ ತೊಳಲಾಟ, ದೂರ ಸರಿಯುತ್ತ ಹತ್ತಿರಾಗುವ ತಿರುವುಗಳು.... ಕೊನೆಗೆ, ಯಾರೋ ಒಬ್ಬರಿಗೆ ಹೂ ಮುಡಿಸಿ (ಅಕ್ಷರಶಃ ಹೂವಿಟ್ಟು!) 'ಸಾಂಸ್ಕೃತಿಕ ಮೌಲ್ಯವನ್ನ ಎತ್ತಿಹಿಡಿಯೋದು'! ಕವಲಿನಲ್ಲಿರುವ ಹೊಸತೆಂದರೆ, ಕಾದಂಬರಿಯ ತುಂಬೆಲ್ಲ ಹಾದರದ ವಾಸನೆಯೇ ತುಂಬಿರುವುದು. ಅವರಿವರು ನಮ್ಮ ಸಂಸ್ಕೃತಿಯ ಬಗ್ಗೆ ಸಲ್ಲದ್ದು ಬರೆದು ಯುವಜನರಲ್ಲಿ ತಪ್ಪು ಅಭಿಪ್ರಾಯ ಬಿತ್ತುತ್ತಿದ್ದಾರೆ ಎಂದು ಹೇಳುವ ನಿಮಗೆ ನೀವೂ ಅದನ್ನೇ ಮಾಡುತ್ತಿದ್ದೀರಿ ಎಂದು ಅನಿಸದೆ ಹೋಗಿದ್ದು ವಿಪರ್ಯಾಸ.

ಲೈಂಗಿಕ ಸ್ವಾತಂತ್ರ್ಯವನ್ನು ಗೌರವಿಸುವ ಹೆಣ್ಣು ಪರಮ ಅನೈತಿಕ, ನೀಚಳು ಮತ್ತು ಬೇರೆಹೆಮಳೆಂಬ ನಿಮ್ಮ ಅಕ್ಷರ ಬಿಂಬ ಈ ಹೊತ್ತೂ ಮೈ ನಡುಗಿಸುತ್ತಿದೆ.

ಭೈರಪ್ಪ ಅವರೇ, ನೀವೊಬ್ಬ ಯಶಸ್ವೀ ಕಾದಂಬರಿಕಾರರಿರಬಹುದು. ಆದರೆ, ಬಟ್ಟೆಯಲ್ಲಿ, ಅಲಂಕಾರದಲ್ಲಿ, ಯೋನಿ ಪಾವಿತ್ರ್ಯೀಕರಣದ ಮಾನದಂಡದಲ್ಲಿ, ಅವಳ ದನಿಯ ಅಬ್ಬರದಲ್ಲಿ ಅವಳ ಅಸ್ತಿತ್ವವನ್ನು ಪ್ರಶ್ನಿಸುತ್ತಾ ತುಚ್ಛೀಕರಿಸುತ್ತಾ ಬರೆಯುವಿರಾದರೆ, ಸಾಮಾನ್ಯ ಓದುಗಳಾದ ನನ್ನ ವಿರೋಧವೂ ನಿಮಗಿದೆ. ಬಟ್ಟೆ ಯಾವುದೇ ತೊಟ್ಟು, ಹಣೆಬೊಟ್ಟು ಕಳಚಿಟ್ಟರೂ ತುಡಿಯಬಲ್ಲ ಅಂತಃಕರಣ ಹೆಣ್ಣು ಜಾತಿಯದು. ಇಷ್ಟು ನಿಮಗೆ ಯಾವತ್ತು ಅರಿವಾಗ್ತದೆಯೋ ಅವತ್ತು ಬೆಡ್ ರೂಮಿನಾಚೆಗೂ ಲೋಕ ಇರುವುದನ್ನು ಕಾಣುವಿರಿ. ಮತ್ತು ಆ ಲೋಕದಲ್ಲಿ ಹೆಣ್ಣು ದಿನದಿನವೂ ಸಾಯುತ್ತಿರುವುದನ್ನು. ಇಷ್ಟೆಲ್ಲ ಓದು-ಬರಹ ಕಲಿತ ಗಂಡಸರು ಹೆಂಗಸರಾಗುತ್ತಾ ನಡೆದಿದ್ದರೂ ಭಾರತದಲ್ಲಿ ಅತ್ಯಾಚಾರ, ಹೆಣ್ಣುಭ್ರೂಣ ಹತ್ಯೆ ಮತ್ತು ವರದಕ್ಷಿಣೆ ಸಾವುಗಳ ಸಂಖ್ಯೆ ತನ್ನ 'ಎತ್ತರ' ಕಾಯ್ದುಕೊಂಡಿರುವುದನ್ನೂ... ಹಾಗಂತ ಈ ಸಮಸ್ಯೆಗಳನ್ನೇ 'ಭಾರತೀಯ ಸಮಾಜದ ಸಮಕಾಲೀನ ಜೀವನ' ಅನ್ನುವ ದಾರ್ಷ್ಟ್ಯಕ್ಕೆ ನಾನು ಬಾಯಿಹಾಕಲಾರೆ. ಹಿರಿಯರಾದ ತಮ್ಮಲ್ಲೂ ಇದೇ ಅರಿಕೆ.

( ಲೇಖಕಿಯ ಓ ನನ್ನ ಚೇತನಾ ಬ್ಲಾಗ್ ನಿಂದ)

No comments: