Friday, August 20, 2010

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಆ ಘಟನೆ ಹೃದಯ ತಲ್ಲಣಗೊಳಿಸಿತ್ತು…

ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಆ ಘಟನೆ ಹೃದಯ ತಲ್ಲಣಗೊಳಿಸಿತ್ತು…

19 Aug 2010 1 Comment

by avadhi in ಎಚ್.ಎಸ್.ವೆಂಕಟೇಶ ಮೂರ್ತಿ

ಅಳಿಯಲಾರದ ನೆನಹು-೨೫

ಎಚ್ ಎಸ್ ವೆಂಕಟೇಶಮೂರ್ತಿ

೧೯೮೮. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ಪುರಸ್ಕಾರ ನನಗೆ ಬಂದ ವರ್ಷ. ಬೆಳಗಾಬೆಳಿಗ್ಗೆ ನನ್ನ ಬನಶಂಕರಿ ಮನೆಗೆ ಧಾವಿಸಿ ಬಂದವರು ಸಿ.ಅಶ್ವತ್ಥ್. ಏನು ಸ್ವಾಮೀ..? ಇನ್ನೂ ಮಲಗಿದ್ದೀರಿ? ನಿಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ದೊರೆತಿದೆ…ಎಂದು ಹೊರಗಿನಿಂದಲೇ ಗಟ್ಟಿಯಾಗಿ ಅವರು ಕೂಗು ಹಾಕಿದ್ದು. ಕೆಲವೇ ನಿಮಿಷದಲ್ಲಿ ನರಹಳ್ಳಿ ಬಂದರು.

ದೂರವಾಣಿಯ ಮೂಲಕ ಸ್ನೇಹಿತರು, ಬಂಧುಗಳು, ಆಪ್ತರು ಒಂದೇ ಸಮ ಕರೆಮಾಡುತ್ತಾ ಅಭಿನಂದನೆ ಹೇಳತೊಡಗಿದರು. ಅದೇ ಸಂಜೆ ನನ್ನ ಬಹುಕಾಲದ ಗೆಳೆಯ ಶಂಕರ್ ಒಂದು ಔತಣಕೂಟ ಏರ್ಪಡಿಸಿದ. ಅದಕ್ಕೆ ಹಿರಿಯರಾದ ಪುತಿನ, ಕೆ.ಎಸ್.ನ ,ಜಿ.ಎಸ್.ಎಸ್ ಇಂದ ಹಿಡಿದು ನನಗೆ ಪ್ರಿಯರಾದ ಎಲ್ಲ ಲೇಖಕ ಮಿತ್ರರೂ, ಹಿತೈಷಿಗಳೂ ಆಗಮಿಸಿದ್ದರು.

ಈ ಉತ್ಸುಕತೆ ಉತ್ಸವ ನನಗೆ ಸಂತೋಷ ನೀಡಬೇಕಲ್ಲವೇ? ಆದರೆ ನನಗೆ ಇದೆಲ್ಲಾ ಆಳದಲ್ಲಿ ಮನಸ್ಸಿಗೆ ಒಂದು ಬಗೆಯ ದಿಗಿಲನ್ನೂ ಆತಂಕವನ್ನೂ ನೀಡಿತೆನ್ನುವುದು ವಾಸ್ತವ ಸತ್ಯ. ವಿಪರೀತ ಸಂತೋಷ ಯಾವಾಗಲೂ ನನ್ನಲ್ಲಿ ವಿಪರೀತ ದುಃಖದ ಸಾಧ್ಯತೆಯನ್ನು ಉದ್ರೇಕಿಸುತ್ತದೆ. ಇದೊಂದು ವಿಲಕ್ಷಣತೆ ಎಂದೇ ನೀವು ಬೇಕಾದರೆ ಕರೆಯಿರಿ.

ಬೇರೆಯವರಿಗೂ ಹೀಗೇ ಆಗುತ್ತದೆಯೋ ಏನೋ ನನಗೆ ತಿಳಿಯದು. ದಿನ ದಿನಕ್ಕೆ ಆಳವಾದ ವಿಷಾದದ ಭೂಮಿಕೆಗೆ ನಾನು ಆ ದಿನಗಳಲ್ಲಿ ಇಳಿಯುತ್ತಾ ಹೋದದ್ದು ಮಾತ್ರ ಸತ್ಯ.

ಪುರಸ್ಕಾರ ಸ್ವೀಕಾರಕ್ಕೆ ನಾನು ದೆಹಲಿಗೆ ಹೋಗಬೇಕಾಗಿತ್ತು. ನೀನು ಹೋಗಲೇ ಬೇಕು…ನಾನು ಬೇಕಾದರೆ ನಿನ್ನ ಜೊತೆಗೆ ಬರುತ್ತೇನೆ ಎಂದ ಶಂಕರ್. ನೀವು ಪ್ರಶಸ್ತಿ ಸ್ವೀಕರಿಸೋದು ನಾನೂ ನೋಡಬೇಕು. ನಾನೂ ದೆಹಲಿಗೆ ಬರುತ್ತೇನೆ ಎಂದಳು ರಾಜಲಕ್ಷ್ಮಿ. ಕೊನೆಗೆ ನಾವು ಮೂವರೂ ಟ್ರೈನಿಗೆ ಬುಕ್ ಮಾಡಿಸಿ ದೆಹಲಿಗೆ ಹೊರಟೆವು.

ದೆಹಲಿಯಲ್ಲಿ ಇರುವ ನನ್ನ ಅತ್ಯಂತ ಪ್ರಿಯ ವಿದ್ಯಾರ್ಥಿಮಿತ್ರ ವೆಂಕಟಾಚಲಹೆಗಡೆ ನಮ್ಮನ್ನು ಸ್ವಾಗತಿಸಲು ರೈಲ್ವೇ ನಿಲ್ದಾಣಕ್ಕೇ ಬಂದಿದ್ದರು. ನಾವು ದೆಹಲಿ ಕರ್ನಾಟಕ ಸಂಘದ ಗೆಸ್ಟ್ ಹೌಸಿನಲ್ಲಿ ಉಳಿದುಕೊಳ್ಳುವ ಏರ್ಪಾಡಾಗಿತ್ತು. ನಮ್ಮನ್ನು ಗೆಸ್ಟ್ ಹೌಸಿಗೆ ತಲಪಿಸಿ ಹೆಗಡೆ ಜೆ.ಎನ್.ಯೂ.ದಲ್ಲಿದ್ದ ತಮ್ಮ ಮನೆಗೆ ಹೋದರು. ಶಂಕರ್ ತನ್ನ ಆಫೀಸ್ ಕೆಲಸಕ್ಕೆ ಹೋದ.

ಅವನು ತನ್ನ ಆಫೀಸ್ ಗೆಸ್ಟ್ ಹೌಸಿನಲ್ಲೇ ಉಳಿಯುವ ನಿರ್ಧಾರ ಮಾಡಿದ್ದ. ಮಾರನೇ ದಿನ ಪ್ರಶಸ್ತಿ ಸ್ವೀಕಾರ ಕಾರ್ಯಕ್ರಮ. ಹೆಗಡೆ ನಾವು ಉಳಿದಿದ್ದ ವಸತಿಗೆ ಬಂದು ಕಾರ್ಯಕ್ರಮಕ್ಕೆ ನಮ್ಮನ್ನು ಕರೆದುಕೊಂಡು ಹೋದರು.

ನಾನು ಪ್ರಶಸ್ತಿ ಸ್ವೀಕಾರಕ್ಕೆ ಬಂದಿದ್ದರಿಂದ ಕರ್ನಾಟಕ ಸಂಘದವರು ಒಂದು ವಾರ ತಮ್ಮಲ್ಲಿ ಅತಿಥಿಯಾಗಿ ಉಳಿದುಕೊಳ್ಳಲು ನನ್ನನ್ನು ಕೋರಿದರು. ಒಂದು ಅಭಿನಂದನ ಸಮಾರಂಭವನ್ನೂ ಅವರು ಏರ್ಪಡಿಸಿದ್ದರು. ಇದೆಲ್ಲಾ ಆದ ಮೇಲೆ ಹೆಗಡೆ ನಾನೂ ಮತ್ತು ರಾಜಲಕ್ಷ್ಮಿ ಆಗ್ರಾಕ್ಕೆ ಹೋಗಿಬರುವ ಏರ್ಪಾಡುಮಾಡಿದರು. ಬೃಂದಾವನ , ಜಯಪುರಕ್ಕೆಲ್ಲಾ ಅವರು ನಮ್ಮ ಜೊತೆಗೇ ಬಂದಿದ್ದರು.

ನಾನು ಹಿಂದೆಯೇ ಒಮ್ಮೆ ಹೇಳಿದ್ದೆನಲ್ಲಾ? ನನ್ನ ವಿದ್ಯಾರ್ಥಿಗಳಿಗೆ ನನ್ನ ಮೇಲೆ ಇದ್ದುದಕ್ಕಿಂತ ಹೆಚ್ಚು ಅಭಿಮಾನ ನನ್ನ ಶ್ರೀಮತಿಯ ಮೇಲೆ. ಆಕೆ ಅಂಥ ಅಭಿಮಾನದ ಜೀವಿಯಾಗಿದ್ದಳು. ಹೀಗಾಗಿ ಹೆಗಡೆಗೆ ನನ್ನ ಪತ್ನಿ ಅಕ್ಕನೇ ಆಗಿದ್ದಳು. ಮೇಷ್ಟ್ರು ಏನೂ ಪ್ರಯೋಜನವಿಲ್ಲ.

ನಾನು ನಿಮಗೆ ದೆಹಲಿಯ ದರ್ಶನ ಮಾಡಿಸುತ್ತೇನೆ ಎಂದು ಅವರು ಅಕ್ಕನಿಗೆ ಮಾತುಕೊಟ್ಟಿದ್ದರು. ನಾವು ಆಗ್ರ , ಮತ್ತು ವಿಶೇಷವಾಗಿ ತಾಜಮಹಲ್ ನೋಡಿಕೊಂಡು ಬರಬೇಕೆಂದು ದುಂಬಾಲು ಬಿದ್ದವರೂ ಹೆಗಡೆಯೇ. ಅವರೇ ಟಿಕೆಟ್ ಕೂಡಾ ಬುಕ್ ಮಾಡಿಸಿ ಮಧ್ಯಾಹ್ನ ಗೆಸ್ಟ್ ಹೌಸಿಗೆ ಬಂದು ನಮ್ಮನ್ನು ಆಗ್ರಾ ವೀಕ್ಷಣಕ್ಕೆ ಕಳುಹಿಸಿಕೊಟ್ಟರು.

ನಾವು ಆಗ್ರಾ ತಲಪಿದಾಗ ಸಂಜೆ ಐದು ಗಂಟೆ ಸಮಯ. ಆಗ್ರಾದ ಕಿರಿದಾದ ಲೇನುಗಳಲ್ಲಿ ನಮ್ಮ ವಾಹನ ಚಲಿಸುತ್ತಾ ನಮ್ಮನ್ನು ತಾಜಮಹಲ್ ಗೇಟಿನ ಮುಂದೆ ತಂದು ನಿಲ್ಲಿಸಿತು. ನಮ್ಮ ಸಹ ಪ್ರಾವಾಸಿಗಳೊಂದಿಗೆ ನಾವೂ ಗಡಿಬಿಡಿಯಿಂದ ನಡೆಯುತ್ತಾ ತಾಜಮಹಲ್ ಎನ್ನುವ ಅದ್ಭುತವನ್ನು ನೋಡುವ ಕಾತರದಿಂದ ದೌಡಾಯಿಸಿದೆವು.

ದಾರಿಯಲ್ಲಿ ಅನೇಕ ಕ್ಯಾಮರಾಧಾರಿಗಳು ನಮ್ಮನ್ನು ಸುತ್ತುವರೆದು ಫೋಟೋ ತೆಗೆಸಿಕೊಳ್ಳಿ , ಈಗಲೇ ಪ್ರತಿಗಳನ್ನು ನಿಮಗೆ ಕೊಡುತ್ತೇವೆ. ಇಂಥ ಅವಕಾಶ ಮತ್ತೆ ನಿಮಗೆ ದೊರೆಯುವುದಿಲ್ಲ-ಇತ್ಯಾದಿ ಹಿಂದಿ ಭಾಷೆಯಲ್ಲಿ ಹೇಳುತ್ತಾ ನಮ್ಮನ್ನು ಕಾಡತೊಡಗಿದರು.

ಹೌದೂರೀ…ನಾವೂ ಕೆಲವು ಫೋಟೋ ತೆಗೆಸಿಕೊಳ್ಳೋಣ ಎಂದಳು ನನ್ನ ಪತ್ನಿ. ನಾನು ಮುಗುಳ್ನಕ್ಕು ಆಗಲಿ ಎಂದು ಕ್ಯಾಮರಾಮನ್ ಒಂದಿಗೆ ವ್ಯವಹಾರ ಕುದುರಿಸಿದೆ. ಬನ್ನಿ…ನೀವು ಗೇಟಿಂದ ಒಳಗೆ ಬರುತ್ತಿರುವಿರಿ..ಅಲ್ಲಿಂದ ಫೋಟೋ ತೆಗೆಯಲು ಶುರು ಮಾಡುತ್ತೇನೆ ಎಂದ ಕ್ಯಾಮಾರಾದವನು.

ಕ್ಯಾಮರಾದವನು ತೆಳ್ಳಗೆ ಎತ್ತರವಾಗಿದ್ದ ಬಡಕಲು ಮೈಕಟ್ಟಿನ ಹುಡುಗ. ಎಲ್ಲ ಪ್ರವಾಸ ಕೇದ್ರಗಳಲ್ಲಿ ಇರುವ ಫೋಟೋಗ್ರಾಫರ್ಗಳಂತೆ ಇವನೂ ಅನೇಕ ಭಾಷೆಗಳಲ್ಲಿ ಮಾತಾಡಬಲ್ಲವನಾಗಿದ್ದ.

ನಾನೂ ನನ್ನ ಪತ್ನಿ ಕನ್ನಡದಲ್ಲಿ ಮಾತಾಡುವುದು ನೋಡಿ…ಏನ್ಸಾರ್ ನೀವು ಬೆಂಗಳೂರಿನವರಾ…? ನಾನು ಒಂದು ವರ್ಷ ಬೆಂಗಳೂರಲ್ಲಿ ಇದ್ದೆ. ಬಸವನಗುಡಿ ಅಂತ ಇದೆಯಲ್ಲಾ ಆ ಏರಿಯಾದಲ್ಲಿ ಎಂದು ನಿಧಾನಕ್ಕೆ ನಮಗೆ ಹತ್ತಿರ ಬರಲಿಕ್ಕೆ ಶುರುಹಚ್ಚಿದ. ಕ್ಯಾಮರಾದವನು ಕನ್ನಡ ಮಾತಾಡುವುದನ್ನು ನೋಡಿ ರಾಜಲಕ್ಷ್ಮಿ ಆನಂದತುಂದಿಲಳಾದಳೆಂದೇ ಹೇಳಬೇಕು.

ನೋಡ್ರೀ..ಎಷ್ಟು ಚೆನ್ನಾಗಿ ಕನ್ನಡ ಮಾತಾಡತಾರೆ ಇವರು..ಎಂದು ಮೊದಲೇ ಕೆಂಪಾಗಿದ್ದ ಮುಖವನ್ನು ಇನ್ನಷ್ಟು ಕೆಂಪು ಮಾಡಿಕೊಂಡಳು. ಅವಳಿಗೆ ಹೆಚ್ಚು ಸಂತೋಷವಾದಾಗ ಅಥವಾ ದುಃಖವಾದಾಗ ಅವಳ ಮುಖ ಹೆಚ್ಚು ಕೆಂಪಾಗುತ್ತಿತ್ತು. ಅಗಲವಾದ ಅವಳ ತೆಳ್ಳನೆಯ ಕಿವಿಗಳಂತೂ ಇನ್ನಷ್ಟು ಕೆಂಪಾಗಿ ತಾವು ಮುಖದಿಂದ ಬೇರೆಯೇ ಆದ ಸ್ಪೇರ್ ಪಾರ್ಟ್ಸ್ ಎಂಬ ಭ್ರಮೆ ಹುಟ್ತಿಸುತ್ತಿದ್ದವು. ಅದಕ್ಕೇ ನಾನು ಅವಳನ್ನು ಆಗಾಗ ಕೆಂಗಿವಿಚೆಲುವೆ ಎಂದು ಹಾಸ್ಯಮಾಡುತ್ತಿದ್ದೆ!

ತಾಜಮಹಲ್ ದೂರದಲ್ಲಿ ಕಾಣುತ್ತಾ ಇತ್ತು. ಆದರೆ ಅಲ್ಲಿಗೆ ಹೋಗಲೇ ನಮ್ಮ ಕ್ಯಾಮಾರಾದವನು ನಮ್ಮನ್ನು ಬಿಡುತ್ತಿಲ್ಲ. ಇಲ್ಲಿ ಕುಳಿತುಕೊಳ್ಳಿ, ಇಲ್ಲಿ ನಿಂತುಕೊಳ್ಳಿ, ಈ ಮರ ಅಂತೂ ಕ್ಯಾಮರಾದಲ್ಲಿ ತುಂಬ ಚೆನ್ನಾಗಿ ಬರುತ್ತದೆ….ಈಗ ಈ ಮುರುಕು ಗೋಡೆಗೆ ನೀವು ಒರಗಿ ನಿಲ್ಲಬೇಕು.

ರಾಜಕುಮಾರ್ ಮತ್ತು ಅವರ ಪತ್ನಿ ಬಂದಾಗ ನಾನು ಅವರನ್ನು ಇಲ್ಲಿಯೇ ನಿಲ್ಲಿಸಿ ಫೋಟೊ ತೆಗೆದಿದ್ದು…ಅದನ್ನು ಅವರು ಎನ್ಲಾರ್ಜ್ ಮಾಡಿಸಿ ಮನೆಯ ಹಾಲಲ್ಲಿ ಹಾಕಿಸಿಕೊಂಡಿದ್ದಾರಂತೆ…ಇತ್ಯಾದಿ ಏನೇನೋ ನಮ್ಮ ಕ್ಯಾಮರಾವಾಲ ಬಡಬಡಿಸತೊಡಗಿದ್ದ.

ಅದು ಎಷ್ಟರಮಟ್ಟಿಗೆ ನಿಜವೋ ನನಗಂತೂ ಅನುಮಾನ! ರಾಜಕುಮಾರ್, ವಿಷ್ಣುವರ್ಧನ, ಅಂಬರೀಷ್ ಎಲ್ಲರ ಫೋಟೋವನ್ನೂ ಇವನೊಬ್ಬನೇ ತೆಗೆದಿರುವುದು ಎಂದರೆ ನಂಬುವುದಾದರೂ ಹೇಗೆ? ನನ್ನ ನಗೆ ಅವನಿಗೆ ಅನುಮಾನ ತರಿಸಿರಬೇಕು.

ಫಾರ್ ಗಾಡ್ ಸೇಕ್ ಸಾರ್…ನಿಜವಾಗಲೂ ನಾನೇ ತೆಗೆದಿರೋದು…ನನ್ನ ಆಲ್ಬಂ ನೋಡ್ತೀರಾ…ಬೇಕಾದರೆ ತೋರಿಸ್ತೀನಿ ಎಂದು ತನ್ನ ಹೆಗಲ ಚೀಲದಿಂದ ಆಲ್ಬಂ ತೆಗೆಯುವುದಕ್ಕೆ ಶುರು ಹಚ್ಚಿದ. ನಿಜಾರಿ…ಪಾಪ ಈತ ಯಾಕೆ ಸುಳ್ಳು ಹೇಳ್ತಾರೆ? ರಾಜಕುಮಾರ್ ವಿಷ್ಣುವರ್ಧನ ಅಂಬರೀಶ್ ಎಲ್ಲರ ಫೋಟೋನೂ ಇದಾವೆ ನೋಡಿ..ಎಂದು ಪತ್ನಿ ಅವನ ಸಪೋರ್ಟಿಗೆ ನಿಂತಳು.

ಅಮ್ಮಾ ಹೊತ್ತಾಗತಾ ಇದೆ…! ನೀನೇನು ತಾಜಮಹಲ್ ನೋಡಬೇಕೋ ಬೇಡ್ವೋ? ಎಂದು ನಾನು ಸಣ್ಣಗೆ ರೇಗಿದಾಗ , ಸಾರ್…ನೀವು ಏನೋ ವರೀ ಮಾಡ್ಕಬೇಡಿ…ನಿಮಗೆ ತಾಜಮಹಲ್ ತೋರ್ಸೋದು ನನ್ನ ಜವಾಬ್ದಾರಿ…ಇಲ್ಲಿ..ಇಲ್ಲಿ ಬನ್ನಿ…ಈ…ಹಸುರು ಹಾಸಲ್ಲಿ ಕೂತ್ಕೊಳ್ಳಿ…ನಾನಿಲ್ಲಿ ಭಾರತಿ ಫೋಟೋ ತೆಗೆದದ್ದು ಹೈಕ್ಲಾಸಾಗಿ ಬಂದಿದೆ ಎಂದು ಕ್ಯಾಮರಾಮನ್ ಮತ್ತೆ ಶುರುಹಚ್ಚಿದ.

ನಾವಿನ್ನೂ ತಾಜಮಹಲ್ ಇಂದ ದೂರದಲ್ಲೇ ಇದ್ದೇವೆ. ಇಷ್ಟರ ಮಧ್ಯೆ ಏನಾಯಿತೋ ಗೊತ್ತಿಲ್ಲ. ಒಮ್ಮೆಗೇ ಕ್ಯಾಮರಾದವನು ಗಾಬರಿಗೊಂಡವನಂತೆ ಸಾರ್..ಒಂದ್ನಿಮಿಷ ..ಈ ಕ್ಯಾಮರಾ ಹಿಡ್ಕೊಳ್ಳಿ…ಟಾಯಲೆಟ್ಗೆ ಹೋಗಿ ಬಂದಬಿಡ್ತೀನಿ…ಯಾಕೋ ಹೊಟ್ಟೇ ಅಪ್ಸೆಟ್ ಆದಂಗಿದೆ ಅಂದೋನೇ ಕ್ಯಾಮರಾ ನನ್ನ ಕೈಗಿ ತುರುಕಿ ಓಡಿಯೇ ಬಿಟ್ಟ.

ಓಡುವವನು ಮತ್ತೆ ಹಿಂತಿರುಗಿ ನೋಡಿ ಯಾರಾದರೂ ಕೇಳಿದರೆ ಕ್ಯಾಮರಾ ನಂದೇ ಅನ್ನಿ ಸಾರ್..ಎಂದು ಕೂಗಿದ. ಇವನದೊಳ್ಳೇ ಫಜೀತಿಯಾಯಿತಲ್ಲ ಅಂದುಕೊಂಡು ನಾನು ಮತ್ತು ನನ್ನ ಪತ್ನಿ ಪಕ್ಕದಲ್ಲೇ ಇದ್ದ ಹಾಲುಗಲ್ಲಿನ ಬೆಂಚಿನ ಮೇಲೆ ಆಸೀನರಾದೆವು.

ಕ್ಯಾಮರಾ ನನ್ನ ತೊಡೆಯ ಮೇಲೇ ಇತ್ತು. ಸ್ವಲ್ಪ ಹೊತ್ತಲ್ಲೇ ಇಬ್ಬರು ಸೆಕ್ಯೂರಿಟಿಯವರು ನಮ್ಮಲ್ಲಿಗೆ ಅವಸರವಸರದಿಂದ ಬಂದು ಕ್ಯಾಮರಾ ನಿಮ್ಮ ಸ್ವಂತದ್ದೋ ಕೇಳಿದರು…ನಾನು ಹೌದು ಅಂದಾಗ ..ಹಾಗಾದರೆ ಸರಿ ..ಅಪರಿಚಿತರು ಯಾರಾದರೂ ಕೊಡೋ ವಸ್ತುಗಳನ್ನ ದಯವಿಟ್ಟು ಇಸ್ಕೋ ಬೇಡಿ ಎಂದು ವಾರ್ನ್ ಮಾಡಿ ಮುಂದೆ ಹೋದರು.

ಅವರು ನಡೆಯುವ ಶೈಲಿ ನೋಡಿದರೆ ಯಾವುದೋ ಗಡಿಬಿಡಿಯಲ್ಲಿ ಅವರು ಇದ್ದಂತಿತ್ತು. ಒಮ್ಮೆಗೇ ನಮಗೆ ತಾಜಮಹಲ್ ನೋಡಲಿಕ್ಕೆ ಬಂದ ಪ್ರೇಕ್ಷಕರ ನಡುವೆ…ಒಂದು… ಎರಡು…ಮೂರು…ಎಲ್ಲೆಲ್ಲೂ ಪೋಲಿಸ್ ತಲೆಗಳೇ ಕಾಣಿಸತೊಡಗಿದವು. ಎಲಾ ಶಿವನೇ! ಎಷ್ಟೊಂದು ಜನ ಪೋಲೀಸರು…ನಮಗೆ ಮೊದಲು ಇವರು ಕಾಣಲೇ ಇಲ್ಲವಲ್ಲ ಎಂದು ನಾನು ಆಶ್ಚರ್ಯದಿಂದ ಉದ್ಗಾರ ತೆಗೆದೆ. ಹತ್ತು ನಿಮಿಷವಾಯಿತು. ಹದಿನೈದು ನಿಮಿಷವಾಯಿತು. ಕ್ಯಾಮರಾದವನ ಸುದ್ದಿ ಸುಳುವಿಲ್ಲ.

ಎಲ್ಲಿ ಹಾಳಾಗಿ ಹೋದ ಈ ಮನುಷ್ಯ? ಟಾಯಲೆಟ್, ಗೇಟ್ ಬಳಿಯೇ ಇತ್ತಲ್ಲ. ಅಲ್ಲಿಗೆ ಹೋಗಿ ಬರುವುದಕ್ಕೆ ಇಷ್ಟು ಸಮಯ ಬೇಕೇ? ಅಥವಾ ಈ ಮನುಷ್ಯನದೇನಾದರೂ ಬ್ರಹ್ಮಶೌಚವೋ ಹೇಗೆ? ನಿಮಗೆ ಗೊತ್ತಿರಬೇಕಲ್ಲ ಕಥೆ? ಬ್ರಹ್ಮ ಬೆಳಿಗ್ಗೆ ಪಾಯಖಾನೆಗೆ ಹೋಗುತಾ ಇದ್ದನಂತೆ.

ಲಂಕಾದ್ವೀಪದಲ್ಲಿ ಎಲ್ಲ ಹಾಡಿ ಕುಣಿಯುತ್ತಾ ದೊಡ್ಡ ಉತ್ಸವ ನಡಿತಾ ಇತ್ತಂತೆ. ಏನು ವಿಷಯ ಎಂದು ಬ್ರಹ್ಮ ಕೇಳಿದಾಗ ರಾವಣ ಹುಟ್ಟಿದ ಅಂತ ದಾರಿಹೋಕ ಹೇಳಿದನಂತೆ. ಸರಿ ಅಂದುಕೊಂಡು ಬ್ರಹ್ಮ ಪಾಯಖಾನೆಯಿಂದ ಹೊರಕ್ಕೆ ಬಂದು ಅದೇ ರಸ್ತೆಯಲ್ಲಿ ನಡೆದು ಬರುತ್ತಿರುವಾಗ ಲಂಕಾದ್ವೀಪದಲ್ಲಿ ಮತ್ತೆ ಗಲಾಟೆಯೋ ಗಲಾಟೆ. ಏನು ವಿಷಯ ಅಂತ ಬ್ರಹ್ಮ ಕೇಳಿದಾಗ ಇನ್ನೊಬ್ಬ ದಾರಿಹೋಕ ರಾವಣ ಸತ್ತನಂತೆ ಅಂದನಂತೆ!

ನಮ್ಮ ಫೋಟೊಗ್ರಾಫರ್ ಯಾರ ಹುಟ್ಟು ಅಥವಾ ಯಾರ ಸಾವಿಗಾಗಿ ಕಾಯುತ್ತಿದ್ದಾನೆ ಅನ್ನುವ ವಿಚಾರ ಮನಸ್ಸಲ್ಲಿ ಹಾಯ್ದಾಗ ನಿಜಕ್ಕೂ ನನ್ನ ಎದೆ ಒಮ್ಮೆ ಝಲ್ ಎಂದಿತು. ಈಚಿನ ದಿನಗಳಲ್ಲಿ ದೆಹಲಿಯಲ್ಲಿ ಭಯೋತ್ಪಾದಕರ ಚಟುವಟಿಕೆ ಜಾಸ್ತಿಯಾಗಿತ್ತೆಂಬುದೇ ನನ್ನ ಈ ದಿಗಿಲಿಗೆ ಕಾರಣ.

ಅರ್ಧ ಗಂಟೆಯಾದರೂ ಈ ಕ್ಯಾಮರಾಮನ್ ಯಾಕೆ ಬರಲಿಲ್ಲ? ಅವನು ನಿಜಕ್ಕೂ ಕ್ಯಾಮರಾಮನ್ನೇ? ಇದು ಕೇವಲಾ ಕ್ಯಾಮರಾವೇ? ಇದರಲ್ಲಿ ಬಾಂಬ್ ಗೀಂಬ್ ಅಡಗಿಸಿಟ್ಟಿಲ್ಲ ತಾನೇ? ಈ ವಿಚಾರ ಬರುತ್ತಲೇ ತೊಡೆಯ ಮೇಲಿದ್ದ ಕ್ಯಾಮರಾದಿಂದ ಟಿಕ್ ಟಿಕ್ ಎಂಬ ಸಣ್ಣ ಸದ್ದು ಬರುತ್ತಿದೆ ಅನ್ನಿಸಿ ಮುಖ ಬಿಳಿಚಿಕೊಂಡಿತು.

ನೋಡು…ಇದರೊಳಗಿಂದ ನಿನಗೆ ಟಿಕ್ ಟಿಕ್ ಸದ್ದೇನಾದರೂ ಕೇಳುತ್ತಿದೆಯಾ ಎಂದು ಕ್ಯಾಮರಾ ಹೆಂಡತಿಯ ಅಗೂಲಾದ ಕಿವಿಯಬಳಿ ಹಿಡಿದೆ. ಏನೂ ಇಲ್ಲವೇ..ಎಂದಳು ಆಕೆ ಕಣ್ಣರಳಿಸುತ್ತಾ! ಈ ಪ್ರಶ್ನೆ ನಾನು ಯಾಕೆ ಕೇಳಿದೆ ಎಂಬುದು ತಿಳಿಯದೆ ಅವಳು ಗೊಂದಲದಲ್ಲಿ ಬಿದ್ದಳು ಎಂಬುದು ಆಕೆಯ ಮುಖಭಾವದಿಂದ ಸ್ಪಷ್ಟವಾಗುವಂತಿತ್ತು.

ಯಾಕೂ ಇಲ್ಲ ಸುಮ್ಮನೆ ಕೇಳಿದೆ ಎನ್ನುತ್ತಾ ನಾನು ಕ್ಯಾಮರಾ ಮತ್ತೆ ಕಿವಿಯ ಬಳಿ ಇಟ್ಟುಕೊಂಡಾಗ ಸ್ಪಷ್ಟವಾಗಿ ಅದರಿಂದ ಗಡಿಯಾರದ ಸದ್ದಿನಂತೆ ಟಿಕ್ ಟಿಕ್ ಕೇಳುತಾ ಇತ್ತು. ಅಂದರೆ ಇದರಲ್ಲಿ ಆ ಧೂರ್ತ ಕೈ ಬಾಂಬ್ ಇಟ್ಟಿರಬಹುದೆ? ತಕ್ಷಣ ಹಾವು ಮೆಟ್ಟಿದವನಂತೆ ಮೈ ಜಲಿಸಿ ಕ್ಯಾಮರಾವನ್ನು ಪಕ್ಕದಲ್ಲಿದ್ದ ಇನ್ನೊಂದು ಕಲ್ಲು ಬೆಂಚಿಗೆ ವರ್ಗಾಯಿಸಿದೆ.

ಹೋಗಿ ಬರೋರೆಲ್ಲಾ ಕಲ್ಲುಬೆಂಚಿನಮೇಲೆ ಅನಾಥವಾಗಿ ಬಿದ್ದಿದ್ದ ಕ್ಯಾಮರಾದ ಮೇಲೆ ಕಣ್ಣು ಆಡಿಸತೊಡಗಿದಾಗ , ಯಾರಾದರೂ ಅದನ್ನು ಎತ್ತಿಕೊಂಡು ಹೋದರೆ ಎಂದು ಇನ್ನೊಂದು ಆತಂಕ ಪ್ರಾರಂಭವಾಯಿತು. ಟ್ರಾವಲ್ಲರ್ನವನು ಹೇಳಿದ ಸಮಯ ಮುಗಿದು ಹೋಗ್ತಾ ಇದೆ.

ಇನ್ನು ಅರ್ಧ ಗಂಟೆ ಸಮಯ ಇದೆ ಅಷ್ಟೆ…ನಾವು ತಾಜಮಹಲ್ ನೋಡೋದು ಯಾವಾಗ? ಎಂದಳು ಪತ್ನಿ. ಈ ಕ್ಯಾಮರಾದ ಯಾಸ್ಕಲ್ ಬರದೆ ನಾವು ಹೋಗೋದು ಹೇಗೆ? ಎಂದೆ. ಹೋಗಿ…ನೀವು ತಾಜಮಹಲ್ ಹತ್ತಿರ ಹೋಗಿ ನೋಡಿಕೊಂಡು ಬನ್ನಿ-ಎಂದರೆ, ಇಲ್ಲಪ್ಪಾ, ನನಗೆ ಒಬ್ಬಳಿಗೇ ಭಯವಾಗತ್ತೆ..! ಅಂದಳು.

ಅವಳಿಗೆ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರದೇ ಇದ್ದುದರಿಂದ ಎಲ್ಲಾದರೂ ಜನಜಂಗುಲಿಯಲ್ಲಿ ತಪ್ಪಿಸಿಕೊಂಡರೆ ಏನು ಗತಿ ಅಂತ ಅವಳ ಭಯ. ಮಹಾ ಆತಂಕದಲ್ಲಿ ನನ್ನ ಮೈ ಬೆವರಲಿಕ್ಕೆ ಶುರುವಾಯಿತು. ಈ ಪ್ರಶಸ್ತಿ, ದೆಹಲಿಗೆ ಬಂದದ್ದು. ಆಗ್ರಾಕ್ಕೆ ಬಂದದ್ದು.

ಈ ನಿಗೂಢ ಕ್ಯಾಮರಾಮನ್ ಭೆಟ್ಟಿ, ಅವನ ಅಷ್ಟೇ ನಿಗೂಢವಾದ ಈ ಕ್ಯಾಮರಾ…ಎಲ್ಲಾ ದೊಡ್ಡ ವ್ಯೂಹ ಎನ್ನಿಸ ತೊಡಗಿತು ಒಂದು ಕ್ಷಣ…! ನಮ್ಮನ್ನು ಕ್ಯಾಮರಾ ನಿಮ್ಮದಾ ಸಾರ್ ಎಂದು ಕೇಳಿದ ಸೆಕ್ಯೂರಿಟಿಯ ಬೃಹದ್ದೇಹಿ ದೂರದಿಂದ ನಮ್ಮ ಸಮೀಪ ಬರುವುದು ಕಾಣಿಸಿತು.

ಅವನಿಗೆ ಕ್ಯಾಮರಾ ವಿಷಯ ತಿಳಿಸಿಬಿಡಲೇ? ಅವನು ಅದನ್ನು ಸೀಜ್ ಮಾಡಿ ಎತ್ತಿಕೊಂಡು ಹೋದ ಮೇಲೆ, ಬಡಪಾಯಿ ಕ್ಯಾಮರಾಮನ್ ಬಂದು ನನ್ನ ಕ್ಯಮಾರಾ ಸರ್ ಎಂದರೆ ಎನು ಹೇಳೋದು? ಅವನು ಕೇವಲ ಅಮಾಯಕನೇ ಆಗಿದ್ದರೂ ಆಗಿರಬಹುದಲ್ಲ? ಮೊದಲು ಕೇಳಿದಾಗ ಕ್ಯಾಮರಾ ನಮ್ಮದೇ ಎಂದವನು ಈಗ ನಮ್ಮದಲ್ಲ ಎಂದರೆ , ಸೆಕ್ಯೂರಿಟಿಯವ ನಮಗೇ ತಗುಲಿಕೊಂಡರೆ ಏನು ಮಾಡುವುದು?

ಕ್ಯಮರಾದವ ತೊಲಗಿ ಅರ್ಧಗಂಟೆಯೇ ಆಗಿಹೋಗಿತ್ತು. ಈ ಅರ್ಧ ಗಂಟೆ ನನ್ನ ಜೀವನದ ಬಹು ದೊಡ್ಡ ನರಕ. ಅಂತ ಭಯ ಆತಂಕಗಳನ್ನು ನಾನು ಯಾವತ್ತೂ ಅನುಭವಿಸಿದ್ದಿಲ್ಲ. ನಾವು ಬಸ್ ಬಳಿ ಹೋಗುವುದಕ್ಕೆ ಇನ್ನು ಹದಿನೈದು ನಿಮಿಷ ಮಾತ್ರ ಸಮಯವಿತ್ತು.

ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸುತ್ತಾ ಮಳೆ ಸುರಿಯುವ ಆತಂಕ ಬೇರೆ ಉಂಟಾಯಿತು. ಜನ ಗಡಿಬಿಡಿಯಿಂದ ಗೇಟ್ ಕಡೆ ಧಾವಿಸುತ್ತಿದ್ದರು. ತಾಜಮಹಲ್ ಇನ್ನೂ ದೂರದಲ್ಲೇ ಇತ್ತು. ಅದನ್ನು ನೋಡುವ ಉತ್ಸಾಹ ಈಗ ಸಂಪೂರ್ಣವಾಗಿ ನಾಶವಾಗಿತ್ತು.

ಹೆಂಡತಿ ಸಪ್ಪೆಮುಖಮಾಡಿಕೊಂಡು ಪೆಚ್ಚಾಗಿ ಕೂತಿದ್ದಳು. ಆಗ ಕಂಡ ನೋಡಿ ದೂರದಲ್ಲಿ ಓಡುವಂತೆಯೇ ಬರುತ್ತಿದ್ದ ನಮ್ಮ ಕ್ಯಾಮರಾಮನ್ . ಸಾರ್..ತುಂಬಾ ಸಾರಿ ಸಾರ್….ನೀವೇನೂ ಯೋಚನೆ ಮಾಡಬೇಡಿ..ಇಲ್ಲಿ ಇಲ್ಲಿ ನಿಂತ್ಕೊಳ್ಳಿ…ತಾಜಮಹಲ್ ನಿಮ್ಮ ಬೆನ್ನಿಗೆ ಹತ್ತಿದೆಯೇನೋ ಅನ್ನುವಂತೆ ಫೋಟೋ ತೆಗೆದು ಕೊಡೋದು ನನ್ನ ಜವಾಬ್ದಾರಿ…ಗಾಡ್ ಪ್ರಾಮಿಸ್ ಸಾರ್…ಎನ್ನುತ್ತಾ ಚಕ ಚಕ ಒಂದೇ ಸಮನೆ ಹಲವಾರು ಫೋಟೋ ತೆಗೆದು,ನೀವು ಈಗ ಹಣ ಕೊಡೋದು ಬೇಡ ಸಾರ್…ವಿಳಾಸ ಕೊಡಿ ಸಾಕು….ಫೋಟೋಸ್ ಕಳಿಸಿಕೊಡ್ತೀನಿ…ಫೋಟೋಗಳು ನಿಮಗೆ ಖುಷಿಕೊಟ್ಟರೆ ಆಮೇಲೆ ಹಣ ಕಳಿಸಿ ಸಾರ್…ಎಂದುಹೇಳುತ್ತಾ, ತಡವಾದುದಕ್ಕೆ ಅವನ ತಮ್ಮನಿಗೆ ಸೀರಿಯಸ್ ಆದದ್ದು ಕಾರಣ ಎಂದು ಸಬೂಬು ಹೇಳುತ್ತಾ ನಮ್ಮನ್ನು ಬಸ್ ವರೆಗೂ ಬಂದು ಬೀಳ್ಕೊಟ್ಟ…

ಹೀಗೆ ನಾವು ಆಗ್ರಾಕ್ಕೆ ಹೋಗಿ, ತಾಜಮಹಲ್ ಸಮೀಪದಿಂದ ನೋಡದೆ ವಾಪಸ್ಸಾದ ನತದೃಷ್ಟರು! ಈ ಪ್ರಸಂಗ ನಿಮಗೆ ನಗೆ ತರಿಸಬಹುದು. ಆದರೆ ಒಂದು ಸಣ್ಣ ಆತಂಕ ಹೇಗೆ ಎಲ್ಲ ಬಗೆಯ ಆನಂದವನ್ನೂ ನಮ್ಮಿಂದ ದೂರ ಮಾಡಬಲ್ಲದು ಎಂಬ ಸಂಗತಿಯಾಗಿ ಹೃದಯವನ್ನು ತಲ್ಲಣಗೊಳಿಸುತ್ತಾ ಇದೆ.

No comments: