Saturday, August 28, 2010

ಹೊಸ ತಲೆಮಾರಿನ ಲೇಖಕರು: ದೇವು ಪತ್ತಾರ

ರಹಮತ್ ತರೀಕೆರೆ

ಗುರುವಾರ, 26 ಆಗಸ್ಟ್ 2010 (04:18 IST)



ದೇವುಪತ್ತಾರ್ ಬೀದರಿನಲ್ಲಿ ‘ಪ್ರಜಾವಾಣಿ' ಪತ್ರಿಕೆಯ ಮುಖ್ಯ ವರದಿಗಾರರಾಗಿರುವ ದೇವುಪತ್ತಾರ್ ಅವರು, ಹೊಸತಲೆಮಾರಿನ ಲೇಖಕರಲ್ಲಿ ಕೊಂಚ ಅಲಾಯದವಾಗಿ ನಿಲ್ಲುವವರು. ಅವರ ಬರೆಹಗಳು ಕರ್ನಾಟಕ ಸಂಸ್ಕೃತಿ ಮತ್ತು ಚರಿತ್ರೆಯ ಅಧ್ಯಯನ ಮಾಡುವ ಎಲ್ಲರಲ್ಲೂ ಕುತೂಹಲ ಹುಟ್ಟಿಸಬಲ್ಲವು. ಇದಕ್ಕೆ ಕಾರಣ, ಅವರ ಬರೆಹದೊಳಗೆ ಇರುವ ಸಂಶೋಧಕ ಗುಣ. ವರದಿಗಾರಿಕೆಯ ಸಾಮಾನ್ಯ ಲಕ್ಷಣವೆಂದರೆ, ಹೊಸಹೊಸ ಸುದ್ದಿ ಮತ್ತು ಮಾಹಿತಿಗಳಿಗಾಗಿ ಹಸಿವನ್ನು ತೋರುವುದು; ಅವನ್ನು ವರದಿಯಾಗಿ ಕಳಿಸಿದ ಬಳಿಕ ಆ ಹಸಿವು ಇಂಗಿ ಮನಸ್ಸು ನಿರಾಳವಾಗುವುದು. ಆಯಾ ದಿನಹುಟ್ಟಿ ಮರುದಿನ ಪ್ರಸ್ತುತತೆ ಕಳೆದುಕೊಳ್ಳುವ ಈ ವರದಿತನದ ಆಚೆಗೂ ಹೋಗಬಲ್ಲ ತ್ರಾಣ, ಎಷ್ಟೊ ವರದಿಗಾರರಿಗೆ ಇರುವುದಿಲ್ಲ; ಒಂದೊಮ್ಮೆ ಇದ್ದರೂ, ಹಾಗೆ ಹೋಗಲು ಅವರ ದೈನಿಕ ವರದಿತನದ ಒತ್ತಡಗಳು ಬಿಡುವುದಿಲ್ಲ.

ಇಂತಹ ಇಕ್ಕಟ್ಟಿನಲ್ಲಿ ಕೆಲಸ ಮಾಡುತ್ತ ದೇವು ಕರ್ನಾಟಕ ಚರಿತ್ರೆಯನ್ನು ಭಿನ್ನವಾಗಿ ಕಟ್ಟುವ ಸಂಶೋಧನಾತ್ಮಕ ಬರೆಹಗಳನ್ನು ಬರೆಯುತ್ತ ಬಂದಿದ್ದಾರೆ. ಭಿನ್ನವೇಕೆಂದರೆ, ವಿಶಿಷ್ಟ ಪ್ರತಿಭೆಯನ್ನು ಮೆರೆದ ಅಜ್ಞಾತ ವ್ಯಕ್ತಿಗಳ ವ್ಯಕ್ತಿಚಿತ್ರ ಮತ್ತು ಜೀವನಚಿತ್ರಗಳನ್ನು ರಚಿಸುವುದು. ಉದಾಹರಣೆಗೆ, ಬೀದರಿನ ಅಪರೂಪದ ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ (೨೦೦೮) ಅವರ ಜೀವನಚರಿತ್ರೆ; ಸುರಪುರದಲ್ಲಿ ಬ್ರಿಟಿಷರ ರಾಜಕೀಯ ಏಜೆಂಟನಾಗಿದ್ದ ಮೆಡೋಸ್ ಟೇಲರನ ಮೇಲೆ ಅವರು ಸಂಪಾದಿಸಿದ ಪುಸ್ತಕ ‘ಮಹಾದೇವ ಬಾಬಾ ಮೆಡೋಸ್ ಟೇಲರ್'. ಈಗ ದೇವು, ಮಹಮೂದ್ ಗವಾನನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಬಹಮನಿ ರಾಜ್ಯದ ಪ್ರಧಾನಮಂತ್ರಿಯಾಗಿದ್ದ, ಗವಾನನು ದೊಡ್ಡ ವಿದ್ವಾಂಸನೂ ದಾರ್ಶನಿಕನೂ ಶಿಕ್ಷಣತಜ್ಞನೂ ಆಗಿದ್ದವನು. ಮಹಾ ಪ್ರಾಮಾಣಿಕ ಮತ್ತು ಜನಪ್ರಿಯ. ದೊರೆಯ ತಪ್ಪು ತಿಳಿವಳಿಕೆ ಕಾರಣದಿಂದ ಕೊಲ್ಲಲ್ಪಟ್ಟವನು.

ದೇವು ಅವರ ಈಚೆಗೆ ಪ್ರಕಟವಾದ ‘ಈಗ ಹೀಗಿರುವ ಲೋಕದಲ್ಲಿ' ಕೃತಿಯಂತೂ, ಹೈದರಾಬಾದ್ ಸೀಮೆಯ ವಿಶಿಷ್ಟ ವ್ಯಕ್ತಿಚಿತ್ರಗಳ ಸಂಪುಟವೇ ಆಗಿದೆ. ಕನ್ನಡದಲ್ಲಿ ಮೊದಲು ವ್ಯಕ್ತಿಚಿತ್ರಗಳ ಪರಂಪರೆಯನ್ನು ಆರಂಭಿಸಿದವರು ಡಿವಿಜಿ ಎನ್ನಬಹುದು. ಅವರ ‘ಜ್ಞಾಪಕ ಚಿತ್ರಶಾಲೆ'ಯ ಸಂಪುಟಗಳು, ಕರ್ನಾಟಕದ ರಾಜಕೀಯ ಸಾಮಾಜಿಕ ಚರಿತ್ರೆಯನ್ನು ವ್ಯಕ್ತಿಚಿತ್ರಗಳ ಮೂಲಕ ಕಟ್ಟುವ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತವೆ. ನಂತರ ಎ.ಎನ್.ಮೂರ್ತಿರಾವ್, ವಿಸೀ ಮುಂತಾದವರು ಈ ಪರಂಪರೆಯನ್ನು ಮುಂದುವರೆಸಿದರು. ಲಂಕೇಶ್ ಕೂಡ ಬಹಳಷ್ಟು ವ್ಯಕ್ತಿಚಿತ್ರಗಳನ್ನು ಪತ್ರಿಕಾಬರೆಹದ ಭಾಗವಾಗಿ ಬರೆದರು. ಈಚೆಗೆ ಈ ಸಾಲಿನಲ್ಲಿ ಬಂದ ಕೃತಿ ಎಸ್.ಆರ್. ವಿಜಯಶಂಕರ್ ಅವರ ‘ಒಡನಾಟ'.

ದೇವು ವ್ಯಕ್ತಿಚಿತ್ರಗಳ ವಿಶೇಷವೆಂದರೆ, ಅವರ ಲೇಖನಕ್ಕೆ ವಸ್ತುವಾಗಿರುವ ಹೆಚ್ಚಿನವರು ಅಜ್ಞಾತವಾಗಿದ್ದುಕೊಂಡು ಬದುಕಿದವರು; ಪ್ರಧಾನಧಾರೆಯ ಚರಿತ್ರೆಯ ಚೌಕಟ್ಟಿನಾಚೆ ಇರುವ ಯಾರೂ ಅರಿಯದ ವೀರರು; ಹಸ್ಸುಖಾನ್, ತಾರಾನಾಥ್, ಮಿರಾಜುದ್ದೀನ್, ನರಸಿಂಗರಾವ್, ಮಹಮೂದ್ ಗವಾನ, ಎಂ.ಎಸ್. ಪುಟ್ಟಣ್ಣ, ಮೆಡೋಸ್ ಟೇಲರ್, ಶೆಟ್ಟರ ನಾಗಪ್ಪ, ಶೇಷರಾವ ಕಾಮತೀಕರ್, ನಿಕಿಟಿನ್, ಸಂಗೀತಗಾರ ರಾಮ, ಗುಲಾಂ ಮುಂತಾಕ, ಷಣ್ಮುಖಪ್ಪ, ಆಲಗೂರು ರಾಚಪ್ಪ -ಮುಂತಾದವರು; ಈ ಕೃತಿಯನ್ನು ಸಾಮಾನ್ಯರ ಚರಿತ್ರೆಯ ಸಂಪುಟವೆಂದೂ ಕರೆಯಬಹುದು. ಇಲ್ಲಿನ ಟೇಲರ್ ಹಾಗೂ ಗವಾನರು ಸಾಮಾನ್ಯರಲ್ಲ; ಆದರೆ ಕರ್ನಾಟಕದ ಚರಿತ್ರಕಾರರಿಂದ ಕಡೆಗಣಿಸಲ್ಪಟ್ಟವರು. ಪ್ರಸಿದ್ಧರ ಬೆನ್ನುಹತ್ತಿ ಹೋಗುವ ಸಾಂಪ್ರದಾಯಕ ಚರಿತ್ರೆಯ ಹಾದಿಯನ್ನು ಕೈಬಿಟ್ಟು, ಸ್ಥಳೀಯರಾಗಿದ್ದು ನಾಡಿನ ಬದುಕನ್ನು ವರ್ಣರಂಜಿತವಾಗಿ ಕಟ್ಟಿದ ವ್ಯಕ್ತಿಗಳ ಜೀವನ ಚರಿತ್ರೆಯತ್ತಲೇ ದೇವು ಅವರ ಒಲವಿದೆ.

ಮೇಲಿನ ಪ್ರಕಟಿತ ಹಾಗೂ ಪ್ರಕಟವಾಗುತ್ತಿರುವ ಎಲ್ಲ ಕೃತಿಗಳು, ದೇವು ಅವರ ಮುಖ್ಯ ಆಸಕ್ತಿಯ ಕ್ಷೇತ್ರವೊಂದನ್ನು ಸೂಚಿಸುತ್ತಿವೆ. ಅದೆಂದರೆ ಚರಿತ್ರೆ. ಚರಿತ್ರೆಯನ್ನು ಅಗೆದೆ ತೆಗೆದು ಬರೆಯುವ ಅವರ ಈ ಸೆಳೆತವು, ಮೊದಲಿಂದಲೂ ಅವರ ಒಳಗೇ ಇತ್ತೊ ಅಥವಾ ಹಾದಿಬೀದಿಯಲ್ಲಿ ಚರಿತ್ರೆ ಸೂರೆಯಾಡಿರುವ ಬೀದರಿನಂತಹ ಊರಲ್ಲಿ ಇರುವುದರಿಂದ ಚಿಗುರೊಡೆಯಿತೊ ತಿಳಿಯದು. ನಮ್ಮ ದಿನಪತ್ರಿಕೆಗಳು ಕರ್ನಾಟಕದ ಸ್ಥಳೀಯ ವ್ಯಕ್ತಿ ಮತ್ತು ವಿದ್ಯಮಾನಗಳ ಮೇಲೆ ಲೇಖನಗಳನ್ನುಳ್ಳ, ವಿಶೇಷ ಪುರವಣಿಗಳನ್ನು ಪ್ರಕಟಮಾಡಲು ಆರಂಭಿಸಿದವಷ್ಟೆ. ಆ ಬಳಿಕ, ನಮ್ಮ ಪ್ರಧಾನ ಚರಿತ್ರೆಗೆ ಗೊತ್ತಿಲ್ಲದ ನೂರಾರು ವಿಷಯಗಳು ತಿಳಿದು ಬರತೊಡಗಿದವು. ಮಾತ್ರವಲ್ಲ, ಅವನ್ನು ಬರೆಯುವ ಒಂದು ಲೇಖಕರ ಬಳಗವೂ ಕನ್ನಡದಲ್ಲಿ ಸೃಷ್ಟಿಯಾಯಿತು. ಅಂತಹ ಪುರವಣಿಗಳಿಂದ ದೇವು ಅವರ ಮೊದಲ ಘಟ್ಟದ ಬರೆಹಗಳು ರೂಪುಗೊಂಡಂತಿವೆ. ಆದರೆ ಅವು ವಿಶೇಷ ಮಾಹಿತಿ ಸಂಗ್ರಹ ಮತ್ತು ಆಕರ್ಷಕ ಮಂಡನೆಯ ಸೀಮಿತತೆಯನ್ನು ದಾಟಿ, ಗಂಭೀರ ಸಂಶೋಧನ ಲೇಖನಗಳಾಗುವತ್ತ ಚಲಿಸಿದವು. ಅದರಲ್ಲೂ ಸಂಗೀತಗಾರರನ್ನು ಕುರಿತ ದೇವು ಬರೆಹಗಳು ಸಾಂಸ್ಕೃತಿಕವಾಗಿ ಅನನ್ಯವಾಗಿವೆ.

ದೇವು ಬರೆಹಗಳ ಇನ್ನೊಂದು ವಿಶೇಷತೆಯೆಂದರೆ, ಚರಿತ್ರೆಯನ್ನು ಒಣವಿವರಗಳ ಕಂತೆಯಾಗಿಸದೆ ಸ್ವಾರಸ್ಯಕರ ಕತೆಯಾಗಿಸುವುದು; ಅಥವಾ ಕತೆಯ ಕುತೂಹಲಕ್ಕಾಗಿ ಚಾರಿತ್ರಿಕ ಪ್ರಜ್ಞೆಯನ್ನು ಬಲಿಗೊಡದೆ ಇರುವುದು. ಇದೊಂದು ಎಚ್ಚರದ ಸಮತೋಲನ. ಸಣ್ಣಕತೆಗಾರನಂತೆ ಒಂದು ಸಣ್ಣ ಘಟನೆಯನ್ನು ಆಯ್ದುಕೊಂಡು, ಅದರ ಸುತ್ತಮುತ್ತಲಿನ ಸಣ್ಣಪುಟ್ಟ ವಿವರಗಳನ್ನು ಕಲೆಹಾಕಿ, ಒಂದು ಅಚ್ಚುಕಟ್ಟಾದ ಚಿತ್ರವನ್ನು ಬರೆಯುವ ಕುಶಲತೆಯನ್ನು ಅವರು ಹೊಂದಿದ್ದಾರೆ. ಈ ಕಾರಣದಿಂದ, ಅವರ ಬರೆಹಗಳನ್ನು ಚರಿತ್ರೆ ಮತ್ತು ಕತೆಗಾರಿಕೆಗಳ ಸಂಕರದ ಫಲಗಳೆನ್ನಬಹುದು.

ತಮ್ಮ ಚಾರಿತ್ರಿಕ ಬರೆಹಗಳಿಗೆ ಬೇಕಾದ ಮಾಹಿತಿ ಪಡೆಯಲು ದೇವು ಪಡುವ ಶ್ರಮ ಮತ್ತು ತೋರುವ ಶ್ರದ್ಧೆಗಳು, ಅವನ್ನು ಓದುವ ಯಾರಿಗೂ ಮನವರಿಕೆಯಾಗುತ್ತವೆ. ಟೇಲರ್ ಪುಸ್ತಕಕ್ಕೆ ಅವರು ಬರೆದಿರುವ ಪ್ರಸ್ತಾವನೆ ಇದಕ್ಕೆ ಸಾಕ್ಷಿ. ಅವರೊಮ್ಮೆ ನನಗೆ ಫೋನ್ ಮಾಡಿ, `ಎಂ.ಎಸ್. ಪುಟ್ಟಣ್ಣನವರು ಮಹಮದ್ ಗವಾನನ ಮೇಲೆ ಬರೆದಿರುವ ಪುಸ್ತಕ ಹುಡುಕುತ್ತಿದ್ದೇನೆ, ನಿಮ್ಮಲ್ಲಿದೆಯೇ?' ಎಂದು ಕೇಳಿದರು. ದುರ್ಲಭವಾದ ಆ ಕೃತಿಯ ಹೆಸರನ್ನು ನಾನು ಕೇಳಿದ್ದೆ. ನನಗದು ಸಿಕ್ಕಿರಲಿಲ್ಲ. ಚರಿತ್ರೆಯ ಕೆಲವು ಅಧ್ಯಾಪಕರಿಗಾದರೂ ಇಂತಹದೊಂದು ಕೃತಿಯಿರುವ ಬಗ್ಗೆ ತಿಳಿದಿದೆಯೊ ಇಲ್ಲವೊ? ಕಡೆಗೊಮ್ಮೆ ದೇವು ಅದನ್ನು ಎಲ್ಲಿಂದಲೊ ಹುಡುಕಿ ಪಡೆದರು. ಹಾಗೆಯೇ ಬಿಜಾಪುರದ ನೆಲದಿಂದ ಮೂಡಿದ ಪ್ರಸಿದ್ಧ ಚರಿತ್ರೆಯ ಗ್ರಂಥ ‘ತಾರೀಖೆ ಫೆರಿಸ್ತಾ'ದ ಅನುವಾದವನ್ನು ಅಂತರ್ಜಾಲದಲ್ಲಿ ಹುಡುಕಿ ನನಗದನ್ನು ಕಳಿಸಿಕೊಟ್ಟರು. ಅವರು ಬೀದರಿಗೆ ಭೇಟಿಕೊಟ್ಟಿದ್ದ ರಷ್ಯನ್ ಪ್ರವಾಸಿ ನಿಕಿಟಿನ್ ಕುರಿತು ಅವರು ಮಾಡಿರುವ ಶೋಧವಂತೂ ಅಪರೂಪದ್ದಾಗಿದೆ. ಇವೆಲ್ಲ ದೇವು ಅವರಲ್ಲಿರುವ ಗಂಭೀರ ಸಂಶೋಧಕನ ಕುರುಹುಗಳು.

ದಿನಪತ್ರಿಕೆಯಲ್ಲಿದ್ದೂ ಸಂಶೋಧನ ಪ್ರವೃತ್ತಿಯನ್ನೂ ಚಿಂತನಶೀಲತೆಯನ್ನೂ ಪಡೆದುಕೊಳ್ಳುವ ಸವಾಲನ್ನು ದೇವು, ತಮ್ಮ ಒಳಗಿನ ವಿದ್ವತ್ ಸಹಜ ಸೆಳೆತದಿಂದ ನಿಭಾಯಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಎಷ್ಟೊ ಸಂಶೋಧಕರು ಮಾಡಲಾಗದ್ದನ್ನು ಅವರು ಮಾಡುತ್ತಿದ್ದಾರೆ ಎಂದೂ ಹೇಳಬಹುದು. ಅವರ ಸಂಶೋಧನ ಬರೆಹಗಳಲ್ಲಿ ಸಂಶೋಧಕನ ಖಚಿತತೆಯಿದೆ. ನಿರ್ಲಿಪ್ತವಾಗಿ ಬರೆಯುವ ವಸ್ತುನಿಷ್ಠತೆಯಿದೆ. ಅವರ ಲೇಖನಗಳು ಕುತೂಹಲ ಹುಟ್ಟುವಂತೆ ಸ್ವಾರಸ್ಯಕರವಾಗಿರುತ್ತವೆ ಮತ್ತು ಒಂದೇ ಬೈಠಕ್ಕಿನಲ್ಲಿ ಓದಿಸಿಕೊಳ್ಳುತ್ತವೆ. ಕವಿಯೂ ಆಗಿರುವ ದೇವು ಕೆಲವು ಕಡೆ ತನ್ಮಯವಾಗಿ ಕಾವ್ಯದ ಭಾಷೆಯನ್ನು ಬಳಸುವುದುಂಟು. "ರಾಚಪ್ಪ ಸಾಥ್ ನೀಡುವಾಗೆಲ್ಲ ಗಾಯಕನ ಕಣ್ಮಸಕು ಮಾಡಿ ಲಯದ ದಟ್ಟಕಾಡಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿದ್ದ'' ಎಂಬಂತಹ ವಾಕ್ಯಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ ದೇವು ಬರೆಹದಲ್ಲಿ ಕೆಲವು ಮಿತಿಗಳಿವೆ. ಮೊದಲನೆಯದಾಗಿ, ಅವರಿಗೆ ಪತ್ರಿಕಾ ಬರೆಹದಲ್ಲಿ ಸಾಮಾನ್ಯವಾಗಿರುವ ವರದಿಗಾರಿಕೆಯ ಗುಣದಿಂದ ಕೆಲವೊಮ್ಮೆ ತಪ್ಪಿಸಿಕೊಳ್ಳಲು ಆಗಿಲ್ಲ; ಸ್ವಾರಸ್ಯವನ್ನು ಹುಟ್ಟಿಸಲು ಭಾಷೆಗೆ ಬಣ್ಣವನ್ನು ಅವರು ಬೆರೆಸುವುದೂ ಉಂಟು. "ಬೀದರಿನಲ್ಲಿ ಬರಬಂದರೆ ಮೈಸೂರಲ್ಲಿ ವಡೆ ದುಬಾರಿ'' ಎಂಬ ಲೇಖನದ ತಲೆಬರೆಹವು, ಓದುಗರನ್ನು ಸೆಳೆದುಕೊಳ್ಳಲೆಂದೇ ರೋಚಕಗೊಂಡಂತಿದೆ. ಎರಡನೆಯದಾಗಿ, ದೇವು ಅವರ ವ್ಯಕ್ತಿಚಿತ್ರಗಳಲ್ಲಿ ಹಳಹಳಿಕೆಯ ದನಿಯೊಂದು ಸುಳಿಯುತ್ತದೆ. ಕಳೆದುಹೋದ ದಿನಗಳು ಸುಂದರವಾಗಿದ್ದವು ಎಂದು ನಂಬಿ ವರ್ತಮಾನದ ಬಗ್ಗೆ ಅವರು ಕೆಲವು ಕಡೆ ಅನಗತ್ಯವಾಗಿ ಕಠೋರವಾಗಿ ಮಾತಾಡುವುದುಂಟು. ಮೂರನೆಯದಾಗಿ, ಸಾರ್ಥಕ ಬದುಕನ್ನು ಬದುಕಿದ ಸಾಮಾನ್ಯ ವ್ಯಕ್ತಿಗಳನ್ನು ದೇವು ವ್ಯಕ್ತಿಚಿತ್ರಕ್ಕೆ ವಸ್ತುವಾಗಿ ಆರಿಸಿಕೊಳ್ಳುತ್ತಾರೇನೊ, ನಿಜ. ಆದರೆ ವ್ಯಕ್ತಿಯ ಸದ್ಗುಣಗಳನ್ನೇ ಮುಂದುಮಾಡಿ ಬರೆಯುವ ಸಹೃದಯತೆ ಮತ್ತು ಉದಾರತೆಗಳಿಂದ, ಆ ವ್ಯಕ್ತಿಚಿತ್ರಗಳಿಗೆ ನಿಷ್ಠುರತೆಯ ಅಂಚು ತಪ್ಪಿಹೋಗಿದೆ. ಒಂದು ಬಗೆಯ ಡಿಫೆನ್ಸಿವ್ ಗುಣ ಅವರ ಈ ಚಿತ್ರಗಳಲ್ಲಿದ್ದು, ವಿಮರ್ಶಾತ್ಮಕತೆಯು ಕಡಿಮೆಗೊಂಡಿದೆ. ಟೇಲರ್ ಕುರಿತ ಲೇಖನಗಳಲ್ಲಿ, ಅಮೂಲ್ಯವಾದ ಮಾಹಿತಿಗಳಿವೆ. ಆದರೆ ಟೇಲರನ ಬಗ್ಗೆ ಭಾವಪಕ್ಷಪಾತದಿಂದ ಬರೆದಿರುವ ಕಾರಣ, ವಸಾಹತುಶಾಹಿ ಆಡಳಿತೆಯ ಆರ್ಥಿಕ ಹಿತಾಸಕ್ತಿಗಳನ್ನಾಗಲಿ, ರಾಜಕೀಯ ತಂತ್ರಗಾರಿಕೆಗಳನ್ನಾಗಲಿ ರಾಜಕೀಯ ಪ್ರಜ್ಞೆಯಿಂದ ವಿಶ್ಲೇಷಿಸಲು ಅವರಿಗೆ ಸಾಧ್ಯವಾಗಿಲ್ಲ. ಸಮಕಾಲೀನ ರಾಜಕಾರಣಿಗಳನ್ನು ಕುರಿತ ವ್ಯಕ್ತಿಚಿತ್ರಗಳಲ್ಲೂ ರಾಜಕೀಯ ವಿಶ್ಲೇಷಣೆಗಳಲ್ಲೂ ವಿಮರ್ಶಾತ್ಮಕ ಎಳೆಗಳಿರುವುದುಂಟು. ಆದರವು ಕ್ಷೀಣವಾಗಿವೆ. ಲಂಕೇಶ್ ಬರೆಯುವ ವ್ಯಕ್ತಿಚಿತ್ರಗಳು, ತಮ್ಮ ನಿಷ್ಠುರತೆಯ ಅಲಗಿನ ಕಾರಣದಿಂದಲೇ ಹೆಚ್ಚು ಮಾನುಷವಾಗಿವೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು.

ಕನ್ನಡದ ದೈನಿಕ ಪ್ರತಿಕೆಗಳಲ್ಲಿ ವರದಿಗಾರಿಕೆ ಸಾಕಷ್ಟಿದೆ. ಆದರೆ ಅಲ್ಲಿ ಸೂಕ್ಷ್ಮವೂ ನಿಷ್ಠುರವೂ ಆದ ರಾಜಕೀಯ ವಿಶ್ಲೇಷಣೆ ಮಾಡುವ ಪ್ರಬುದ್ಧತೆ ತುಸು ಕಡಿಮೆ. ಅದೂ ಇದೆ ಎಂದು ರವೀಂದ್ರರೇಷ್ಮೆ ಬರೆಯುವಾಗ ಗೊತ್ತಾಗುತ್ತಿತ್ತು. ಈಗ ಅಮೀನ್‌ಮಟ್ಟು ಅವರು ಬರೆಯತೊಡಗಿದ ಬಳಿಕವೂ ಗೊತ್ತಾಗುತ್ತಿದೆ; ಕನ್ನಡ ಪತ್ರಿಕೋದ್ಯಮದಲ್ಲಿ ರಾಜಕೀಯ ಸಾಮಾಜಿಕ ವರದಿಗಾರಿಕೆಯಿದೆ. ಆದರೆ ಕಲ್ಚುರಲ್ ರಿಪೋರ್ಟಿಂಗ್ ಎನ್ನುವುದು ಕಡಿಮೆ. ಅದು ಸಹ ಇದೆ ಎಂದು ದೇವು ಮುಂತಾದ ಸಂವೇದನಶೀಲರ ಬರೆಹಗಳಿಂದ ಗೊತ್ತಾಗುತ್ತಿದೆ. ಒಂದು ಜಿಲ್ಲೆಗೆ ಕೆಲವು ವರ್ಷಗಳ ಮಟ್ಟಿಗೆ ಹೋಗುವ ವರದಿಗಾರ ಒಬ್ಬರಿಗೆ, ನಿಜವಾಗಿಯೂ ಜನರ ಬಗ್ಗೆ ಪ್ರೀತಿ, ಕಾಳಜಿ ಮತ್ತು ಬದ್ಧತೆಯಿದ್ದರೆ, ಸಂಶೋಧನೆಯ ಕುತೂಹಲವಿದ್ದರೆ, ಆ ಸೀಮೆಯ ಸಾಂಸ್ಕೃತಿಕ ಚರಿತ್ರೆಯನ್ನು ಹೇಗೆ ಕಟ್ಟಿಕೊಡಬಹುದು ಎಂಬುದಕ್ಕೆ ದೇವು ಬರೆಹಗಳು ನಿದರ್ಶನವಾಗಿವೆ. ಅವರು ಬೀದರಿಗೆ ಹೋದಮೇಲೆ, ಬೀದರಿನ ಚರಿತ್ರೆಯ ಅಜ್ಞಾತ ಅಧ್ಯಾಯವೊಂದು ಓದುಗರ ಮುಂದೆ ತೆರೆದುಕೊಂಡಂತಾಗಿದೆ.

ಮೂಲತಃ ಗುಲಬರ್ಗ ಜಿಲ್ಲೆಯ ಶಹಾಪುರದವರಾದ ದೇವು, ಧಾರವಾಡದಲ್ಲಿ ಇಂಗ್ಲಿಷ್ ಸಾಹಿತ್ಯ ಓದಿದವರು. ಆದರೆ ಅವರು ಬರೆಯುತ್ತಿರುವ ಬರೆಹಗಳು, ಅವರನ್ನು ಒಬ್ಬ ಗಂಭೀರ ಚರಿತ್ರೆಯ ವಿದ್ವಾಂಸನಾಗುವತ್ತ ಕರೆದೊಯ್ಯುತ್ತಿವೆ. ದೇವು ಬರೆಹಗಳು ಚರಿತ್ರೆಯ ಅಪರಿಚಿತ ಲೋಕವನ್ನು ನಮ್ಮ ಅರಿವಿಗೆ ತರುವ ಕಾರಣಕ್ಕಾಗಿ ಮಾತ್ರ ಮುಖ್ಯವಾಗಿಲ್ಲ; ತಮ್ಮ ಒಳಗಿನ ಲೋಕದೃಷ್ಟಿಗಾಗಿಯೂ ಮುಖ್ಯವಾಗಿವೆ. ಕನ್ನಡದಲ್ಲಿ ಹೊಸತಲೆಮಾರಿನ ಚರಿತ್ರಕಾರರು ದೊಡ್ಡಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಆದರೂ ಕರ್ನಾಟಕ ಚರಿತ್ರ ಬರೆಹವು ಮತೀಕರಣದ ನೆರಳಿನಿಂದ ಪೂರಾ ಬಿಡುಗಡೆಗೊಂಡಿಲ್ಲ. ಇಂತಹ ಹೊತ್ತಲ್ಲಿ ಕರ್ನಾಟಕದ ರಾಜಕೀಯ ಚರಿತ್ರೆಯ ಗದ್ದಲದೊಳಗೆ ಸಂಭವಿಸಿರುವ ಮಾನವೀಯ ದುರಂತ ಮತ್ತು ಚೈತನ್ಯಶೀಲತೆಯನ್ನು ದೇವು ಹುಡುಹುಡುಕಿ ಬರೆಯುತ್ತಿದ್ದಾರೆ. ಬದುಕಿನ ಸಣ್ಣಪುಟ್ಟ ಸಂಗತಿಗಳಿಗೂ ಚರಿತ್ರೆಯಲ್ಲಿ ಮಹತ್ವವಿದೆ ಎಂದು ಅವರ ಬರೆಹಗಳನ್ನು ಓದುವಾಗ ತಿಳಿಯುತ್ತದೆ; ಜೀವನ ಪ್ರೀತಿಯುಳ್ಳ ಯಾವುದೇ ವ್ಯಕ್ತಿ ಮಾಡುವ ಕೆಲಸಗಳು ಜಾತಿ ಮತಗಳಾಚೆ ಹೋಗಿ ಮಾನವೀಯ ನೆಲೆಯಲ್ಲಿ ನಿಲ್ಲುತ್ತವೆ ಎಂದು ಅವು ಸೂಚಿಸುತ್ತವೆ. ಪತ್ರಕರ್ತನೊಬ್ಬ ತಣ್ಣಗೆ ಬರೆಯುತ್ತ ಜನಾಭಿಪ್ರಾಯವನ್ನು ರೂಪಿಸುವ ಮತ್ತು ಬದಲಿಸುವ ಕೆಲಸವನ್ನು ಮಾಡುತ್ತಿರುವ ಈ ಪರಿ, ಗಮನಾರ್ಹವಾಗಿದೆ.

No comments: