ಆಪ್ತರಕ್ಷಕ: ಭಯಾನಕ, ಹಾಸ್ಯಭರಿತ, ರೋಚಕ - ಸಿನಿಮಾ ವಿಮರ್ಶೆ
ತುಂಬಾ ದಿನ ಆಗಿತ್ತು. ಒಂದು ಉತ್ತಮ ಕನ್ನಡ ಚಿತ್ರ ನೋಡದೇ. ಒಂದು ಕಡೆ ಬೇರೆ ಬೇರೆ ಎಂಗಲ್ ನಲ್ಲಿ ಲಾಂಗ್ ಬೀಸೋದೆ ಹೊಸತನ ಎಂದುಕೊಂಡಿರೋ ರೌಡಿ ಕಥೆಗಳ ಚಿತ್ರವಾದ್ರೆ ಇನ್ನೊಂದು ಕಡೆ ಒಬ್ಬರನ್ನು ಪ್ರೇಮಿಸುವ ಇಬ್ಬರು ಅದರಲ್ಲಿ ಒಬ್ಬರ ತ್ಯಾಗ. ವಾಕರಿಕೆ ಬರುವಷ್ಟು ನೋಡಿ ಅಂತಹ ಚಿತ್ರಗಳನ್ನು ಥಿಯೇಟರ್ ಗೆ ಹೋಗಿ ನೋಡುವದನ್ನು ನಿಲ್ಲಿಸಿ ಹಲವು ತಿಂಗಳೇ ಆಯ್ತು.
ಆಗ ಬಂತು ಈ ಆಪ್ತರಕ್ಷಕ. ಆಪ್ತಮಿತ್ರ ನೋಡಿದ್ದ ನನಗೆ ಅದರ ಕಥೆಯನ್ನು ಹೇಗೆ ಮುಂದುವರಿಸಿರಬಹುದು ಎಂಬ ಕುತೂಹಲ ಇತ್ತು. ಏನಪ್ಪಾ ಇದೆ ನಾಗವಲ್ಲಿ ಸಂತೋಷದಿಂದ ಹೊರಟು ಹೋಗಿದ್ದಾಳೆ ವಿಜಯ ರಾಜೇಂದ್ರ ಬಹದ್ದೂರ ಸತ್ತಿದ್ದಾನೆಂದು ಭಾವಿಸಿ. ಇನ್ನೇನು ಕಥೆ ಹೇಳುವದಿದೆ?
ಆಪ್ತಮಿತ್ರ ನೋಡಿದ್ದ ನಾನು ಆಪ್ತರಕ್ಷಕ ಅದಕ್ಕಿಂತ ಚೆನ್ನಾಗಿರಬೇಕೆಂದು ಬಯಸಿದ್ದೆ. ಪಿ.ವಾಸು ನನಗೆ ಒಂಚೂರೂ ನಿರಾಶೆ ಮಾಡಲಿಲ್ಲ. ಅದರಷ್ಟೇ ಎನೂ ಅದಕ್ಕಿಂತ ಚೆನ್ನಾಗಿಯೇ ನಿರೂಪಿಸಿದ್ದಾರೆ ಎಂದರೆ ಅದು ಉತ್ಪ್ರೇಕ್ಷೆಯ ಮಾತು ಖಂಡಿತ ಅಲ್ಲ.
ಆಪ್ತಮಿತ್ರ ಚಿತ್ರದ ಕಥೆಯನ್ನು ಮುಂದುವರಿಸಿರುವ ರೀತಿ ಉತ್ತಮ ಹೇಳಬಹುದು.
ಭಯ ಹುಟ್ಟಿಸುವ ಸನ್ನಿವೇಶಗಳು ಅದಕ್ಕೆ ತಕ್ಕಂತೆ ಎದೆ ನಡುಗಿಸುವ ಹಿನ್ನೆಲೆ ಸಂಗೀತ. ಹೆದರಿ ಮುದುಡಿ ಕೂತ ಪ್ರೇಕ್ಷಕರಲ್ಲೂ ನಗೆ ಉಕ್ಕಿಸುವ ಕೋಮಲ್ ಕುಮಾರ್ ಅಭಿನಯ, ಮಾತಿನ ಶೈಲಿ. ಚಿತ್ರಕ್ಕೆ ಪೂರಕ ಗುರುಕಿರಣ್ ಸಂಗೀತ. ಹಳೆಯ ಕಾಲಕ್ಕೆ ಒಯ್ಯುವ ಗುರುಕಿರಣ್ ಅವರ "ಗರ ಗರನೆ" ಹಾಡು ಹಾಗೂ ಮತ್ತೊಮ್ಮೆ ಇರುವ ಸುಮಧುರ "ರಾ ರಾ" ಹಾಡೂ ಕೂಡ ರಂಜಿಸುತ್ತದೆ.
ವಿಮಲಾ ರಾಮನ್ ಅವರೂ ಕೂಡ ನಾಗವಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಹಾಗೆಯೇ ಸಂಧ್ಯಾ ಹಾಗೂ ಭಾವನಾ ಕೂಡಾ ಮಿಂಚಿದ್ದಾರೆ.
ಈ ಚಿತ್ರದ ನಾಯಕ ಡಾ॥ ವಿಷ್ಣುವರ್ಧನ್ ಮೂರು ಪಾತ್ರಗಳಲ್ಲಿ ಮಿಂಚಿದ್ದಾರೆ. ಈ ಮೂರು ಪಾತ್ರಗಳಲ್ಲಿ ನನಗೆ ಅತ್ಯಂತ ಹಿಡಿಸಿದ ಪಾತ್ರ ವಿಜಯ ರಾಜೇಂದ್ರ ಬಹಾದ್ದೂರ್ ದ್ದು. ಈ ರಾಜನ ಪಾತ್ರದಲ್ಲಿ ವಿಷ್ಣುವರ್ಧನ್ ಇನ್ನೂ ಯಂಗ್ ಆಗಿ ಕಾಣಿಸುತ್ತಾರೆ. ಕುದುರೆ ಮೇಲೆ ಬರುವ, "ಹೌರಾ..." ಎಂದು ಕಿರುಚುವ ಹಾಗೂ ಅವರ ಮಾತಿನ ಶೈಲಿಯನ್ನು ನೋಡಿಯೇ ಆನಂದಿಸಬೇಕು. ಡಾ॥ ವಿಜಯ್ ಪಾತ್ರ ಕೂಡಾ ಪರವಾಗಿಲ್ಲ. ಆದರೆ ಭಯ ಹುಟ್ಟಿಸುವದು ೧೨೩ ವರ್ಷ ವಯಸ್ಸಿನ ಮುದುಕನ ಪಾತ್ರ. ಉದ್ದನೆ ಉಗುರು, ಉದ್ದನೆಯ ಜಡೆ ಸಹಿತ ಮುಖಕ್ಕೆ ಬಣ್ಣ ಬಳಿದುಕೊಂಡಿರುವ ಈ ಪಾತ್ರಕ್ಕೆ ಮುಖಕ್ಕೆ ನೆರಿಗೆ ಹಾಗೂ ಜಡೆ ಬಿಳಿದಾಗಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಇದು ವಿಷ್ಣುವರ್ಧನ್ ಅವರ 200ನೇ ಚಿತ್ರ ಕೂಡಾ. ಇದು ವಿಷ್ಣುವರ್ಧನ್ ಅವರ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಕೂಡಾ!!
ಕಥೆಯ ಪ್ರಕಾರ ನಾಗವಲ್ಲಿ ತೆಲುಗು ನರ್ತಕಿ ಆಗಿರುವದರಿಂದ ತೆಲುಗು ಭಾಷೆಯಲ್ಲೇ ಮಾತನಾಡಿಸಿದ್ದಾರೆ. ಇದು ನೈಜತೆ ಹೆಚ್ಚಿಸಿದೆ. ಆದರೆ ಕನ್ನಡ ಸಬ್ ಟೈಟಲ್ ಇದ್ದರೆ ಚೆನ್ನಾಗಿರುತಿತ್ತು ಅನಿಸಿತು.
ಈ ಚಿತ್ರ ನೀವು ಎಂಜಾಯ್ ಮಾಡಲು ತರ್ಕ ಗಳನ್ನು ಮನೆಯಲ್ಲಿ ಮೂಟೆ ಕಟ್ಟಿ ಥಿಯೇಟರ್ ಗೆ ಹೋಗಬೇಕು. ಆಗ ಈ ಚಿತ್ರ 24 ಕ್ಯಾರೆಟ್ ಅಪ್ಪಟ ಮನರಂಜನೆ ನೀಡುವದರಲ್ಲಿ ಸ್ವಲ್ಪವೂ ಸಂಶಯವೇ ಇಲ್ಲ.
ಪ್ಲಸ್ ಪಾಯಿಂಟ್
ಕೋಮಲ್ ಕುಮಾರ್ ಅವರ ಉತ್ತಮ ಹಾಸ್ಯ ಅಭಿನಯ
ವಿಮಲಾ ರಾಮನ್ ಅವರ ನಾಗವಲ್ಲೀ ಅಭಿನಯ
ವಿಷ್ಣುವರ್ಧನ್ ಅಭಿನಯ
ಉತ್ತಮ ಚಿತ್ರ ಕಥೆ
ಚಿತ್ರಕ್ಕೆ ಪೂರಕ ಗುರುಕಿರಣ್ ಸಂಗೀತ
ಅತ್ಯುತ್ತಮ ಹಿನ್ನೆಲೆ ಸಂಗೀತ
ಉತ್ತಮ ಗ್ರಾಫಿಕ್ಸ್
ಭಯ ಹುಟ್ಟಿಸುವ ಸನ್ನಿವೇಶಗಳು
ಮೈನಸ್ ಪಾಯಿಂಟ್
ತರ್ಕಕ್ಕೆ ನಿಲುಕದ ಕೆಲವು ಸನ್ನೀವೇಶಗಳು
ಮಾಯ-ಮಂತ್ರದ ಮೇಲೆ ಆಧರಿಸಿದ ಕಥೆ
ಮಕ್ಕಳನ್ನು ಕರೆದೊಯ್ಯದಿದ್ದರೆ ಉತ್ತಮ. ಕೆಲವು ಸನ್ನಿವೇಶಗಳು, ಹಿನ್ನೆಲೆ ಸಂಗೀತ ಅವರಿಗೆ ಭಯ ಹುಟ್ಟಿಸಬಹುದು.
ಲಾಜಿಕ್ ಬದಿಗಿಟ್ಟು ದೊಡ್ಡ ಮನಸ್ಸು ಮಾಡಿ ನೋಡುವವರಾದರೆ ಕುಟುಂಬ ಸಮೇತ ಎಂಜಾಯ್ ಮಾಡಬಹುದಾದ ಚಿತ್ರ.
No comments:
Post a Comment