Wednesday, July 7, 2010

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಕ್ಕಾಗಿ ದೆಹಲಿಯಲ್ಲಿ ಹಕ್ಕೊತ್ತಾಯ

--------------------------------------------------------------------------------

ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಪಂಚಕೋಟಿ ಕನ್ನಡಿಗರ ಪರವಾಗಿ ಈ ಹಕ್ಕೊತ್ತಾಯವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ.

ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಒಕ್ಕೂಟವಾದ ಯು.ಪಿ.ಎ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ತಮಿಳು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಯಿತು. ಹೀಗೆ ನೀಡುವಾಗ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಗೊತ್ತುವಳಿಯೊಂದನ್ನು ಮಂಡಿಸಿತೇ ಹೊರತು, ಯಾವ ತಜ್ಞರ ಸಮಿತಿಯ ಪರಾಮರ್ಶೆಗೂ ಈ ವಿಷಯವನ್ನು ಒಪ್ಪಿಸಲಿಲ್ಲ. ತಮಿಳಿನಷ್ಟೇ ಪ್ರಾಚೀನವೂ, ಸಮೃದ್ಧವೂ ಆದ ಕನ್ನಡ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕೆಂದು ಒತ್ತಾಯ ಬಂದಾಗ, ಇಂತಹುದೇ ಒತ್ತಾಯ ಇತರೆ ಭಾರತೀಯ ಭಾಷೆಗಳಿಂದಲೂ ಬಂದಾಗ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿ, ಕೆಲವು ಮಾನದಂಡಗಳನ್ನು ರೂಪಿಸಿತು.

ಭಾರತ ದೇಶ ಒಂದು ಒಕ್ಕೂಟವಾಗಿದ್ದು, ಇದು ಹಲವಾರು ಭಿನ್ನ ಸಂಸ್ಕೃತಿ, ಭಾಷೆಗಳ ತವರಾಗಿದೆ. ಸ್ವಾತಂತ್ರದ ಸಮಯದಲ್ಲಿ ನಮ್ಮ ಭಾರತದೇಶ ಒಗ್ಗೂಡಲು ಪ್ರಮುಖವಾದ ಕಾರಣವೆಂದರೆ, "ಅನೇಕತೆಯಲ್ಲಿ ಏಕತೆ" ಎಂಬ ಸೈದ್ಧಾಂತಿಕ ನಿಲುವು, ಪ್ರತಿಯೊಂದು ಪ್ರದೇಶಕ್ಕೂ ಇರುವ ಅನನ್ಯತೆ, ಪ್ರತಿಯೊಂದು ಭಾಷೆಗೂ ಇರುವ ಇತಿಹಾಸ, ವೈಭವ ಮತ್ತು ಸಂಸ್ಕೃತಿಗಳಿಗೆ ಮಾನ್ಯತೆ, ಇವುಗಳ ಅಸ್ತಿತ್ವಕ್ಕೆ ಧಕ್ಕೆ ಬರದ ಹಾಗೆ ಆಡಳಿತ ನಡೆಸುವ ಭರವಸೆ, ಸಂವಿಧಾನದ ಚೌಕಟ್ಟಿನಲ್ಲಿಯೇ ಸ್ವಲ್ಪಮಟ್ಟಿನ ಸ್ವಾಯತ್ತತೆ, ಇವೆಲ್ಲಕ್ಕಿಂತ ಪ್ರಮುಖವಾಗಿ ಪ್ರತಿಯೊಂದು ವೈವಿಧ್ಯತೆಗೂ ಮಾನ್ಯತೆ ನೀಡುವಲ್ಲಿನ ಸಮಾನತೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳಿವೆ. ಇಲ್ಲಿನ ಪ್ರತಿಯೊಂದು ರಾಜ್ಯಕ್ಕೂ ಸಮಾನ ಸ್ಥಾನಮಾನವಿದೆ. ಪ್ರತಿಯೊಂದು ಭಾಷೆಗೂ ಸಮಾನ ಗೌರವ ಮತ್ತು ಪ್ರಾಮುಖ್ಯತೆ. ಅಂತೆಯೇ ಇಲ್ಲಿನ ರಾಷ್ಟ್ರಭಾಷೆಗಳು ಹದಿನೆಂಟಕ್ಕಿಂತಲೂ ಹೆಚ್ಚು. ಈ ದೇಶದಲ್ಲಿ ಪ್ರಾಂತ್ಯ, ಜನಾಂಗ ಅಥವಾ ಭಾಷೆಯ ಆಧಾರದ ಮೇಲೆ ತಾರತಮ್ಯ ತೋರಿಸುವುದು ಅಕ್ಷಮ್ಯ. ಹಾಗೆ ಪಕ್ಷಪಾತತನ ತೋರಿಸುವುದು ಒಕ್ಕೂಟ ವ್ಯವಸ್ಥೆಗೆ ಎಸಗುವ ದ್ರೋಹ.

ಎರಡು ಸಾವಿರ ವರ್ಷಗಳಿಗೂ ಮಿಗಿಲಾದ ಇತಿಹಾಸ ಇರುವ ಕನ್ನಡ ಭಾಷೆಗೆ " ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ, ಘನ ಭಾರತ ಸರ್ಕಾರದ ಧೋರಣೆಯ ಬಗ್ಗೆ ಅನುಮಾನ ಹುಟ್ಟು ಹಾಕುತ್ತದೆ. ಶಾಸ್ತ್ರೀಯ ಭಾಷೆ ಎಂಬುದಕ್ಕೆ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಇದುವರೆವಿಗೂ ಇದ್ದ ಅರ್ಥವೇ ಬೇರೆ. ಒಂದು ಭಾಷೆ ಪುರಾತನವಾಗಿದ್ದು, ಹಿಂದೊಮ್ಮೆ ಜನ ಸಾಮಾನ್ಯರ ಆಡುಭಾಷೆಯಾಗಿದ್ದು ನಂತರ ಹಲವಾರು ಭಾಷೆಗಳಿಗೆ ಜನ್ಮ ನೀಡಿ, ತಾನು ಜನಸಾಮಾನ್ಯರ ಬಳಕೆಯಿಂದ ಕ್ರಮೇಣ ಮರೆಯಾಗಿ, ಆಡುಭಾಷೆಯಾಗದೆ ಕೇವಲ ಗ್ರಂಥಸ್ಥ ಭಾಷೆಯಾಗಿ ಉಳಿದಿರುವುದಾದಲ್ಲಿ, ಅಂತಹ ಭಾಷೆಯನ್ನು ಶಾಸ್ತ್ರೀಯಭಾಷೆಯೆಂಬುದಾಗಿ ಗುರುತಿಸಿ, ಮಾನ್ಯತೆ ನೀಡುವ ಪರಿಪಾಠವಿತ್ತು. ಹಾಗಾಗಿ, ನಿಜವಾದ ಅರ್ಥದಲ್ಲಿ ಸಂಸ್ಕೃತಕ್ಕೆ ಮಾತ್ರವೇ ಶಾಸ್ತ್ರೀಯ ಭಾಷೆಯಾಗುವ ಅರ್ಹತೆಯಿತ್ತು. ಈ ಮಾನದಂಡ ಅನುಸರಿಸಿಯೇ ವಿಶ್ವದಾದ್ಯಂತ ಶಾಸ್ತ್ರೀಯ ಭಾಷೆಯೆಂದು ಮಾನ್ಯತೆ ಪಡೆದಿರುವ ಭಾಷೆಗಳ ಪಟ್ಟಿ ಹೀಗಿದೆ.
೧. ಹಿಬ್ರೂ
೨. ಶಾಸ್ತ್ರೀಯ ಗ್ರೀಕ್
೩. ಶಾಸ್ತ್ರೀಯ ಪರ್ಷಿಯನ್
೪. ಪಾಲಿ
೫. ಶಾಸ್ತ್ರೀಯ ಅರೇಬಿಕ್ ಮತ್ತು
೬. ಶಾಸ್ತ್ರೀಯ ಚೀನಿ ಭಾಷೆ.

ಈ ಪಟ್ಟಿಗೆ ಹೊಸ ಸೇರ್ಪಡೆ ದ್ರಾವಿಡ ಭಾಷೆಯಾದ ತಮಿಳು. ತಮಿಳುಭಾಷೆಗೆ ಈ ಪಟ್ಟ ದೊರೆತ ಒಂದು ವರ್ಷದ ನಂತರ ಸಂಸ್ಕೃತಕ್ಕೆ ಆ ಸ್ಥಾನ ನೀಡಿರುವುದು ಆಶ್ಚರ್ಯಕರವಾದ ಸತ್ಯ. ಶಾಸ್ತ್ರೀಯ ಭಾಷ ಪಟ್ಟಿಗೆ ತಮಿಳನ್ನು ಸೇರಿಸುವ ಮೂಲಕ, ನಮ್ಮ ಕೇಂದ್ರ ಸರ್ಕಾರವು " ಶಾಸ್ತ್ರೀಯ ಭಾಷೆ" ಎಂಬುದಕ್ಕೆ ಹೊಸ ಅರ್ಥ, ಹೊಸ ವ್ಯಾಖ್ಯಾನ ನೀಡಿದೆ. ಈ ಮೂಲಕ ಕನ್ನಡ ಭಾಷೆಗೂ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದೆ. ತತ್ಸಂಬಂಧವಾದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದ ರೀತಿಯೇ ಪಕ್ಷಪಾತತನದ್ದಾಗಿದೆ. ತಮಿಳಿಗೆ ಶಾಸ್ತ್ರೀಯ ಭಾಷಾ ಸ್ಠಾನಮಾನ ನೀಡುವಾಗ ಪರಿಶೀಲನೆಗೆ ಒಳ ಪಡಿಸಬೇಕಾದ ಅಗತ್ಯ ಕಾಣದೆ ಈಗ ಕನ್ನಡಕ್ಕೆ ನೀಡಬೇಕಾದಾಗ ತಜ್ಞರ ಸಮಿತಿಯ ಮತ್ತು ಹೊಸ ಮಾನದಂಡಗಳನ್ನು ರಚಿಸುವ ಅಗತ್ಯಗಳನ್ನು ಮನಗಂಡಿದೆ. ಇದು ಘನ ಸರ್ಕಾರದ ಮಲತಾಯಿ ಧೋರಣೆಗೆ ಜ್ವಲಂತ ಸಾಕ್ಷಿ. ಮೊದಲಿಗೆ ಸಾವಿರ ವರ್ಷಗಳ ಪುರಾತನತೆಯ ಮಾನದಂಡ ವಿಧಿಸಿದ್ದ ಸಮಿತಿ, ಮತ್ತೆ ಅದನ್ನು ಸಾವಿರದ ಐದುನೂರು ವರ್ಷಗಳಿಗೆ ಯಾವ ಆಧಾರದ ಮೇಲೆ ಬದಲಾಯಿಸಿತು ಎಂಬುದು ಅರ್ಥವಾಗದೇ ಇದ್ದರೂ, ಕೇಂದ್ರ ಸರ್ಕಾರ ಸೂಚಿಸಿರುವ ಹೊಸ ಮಾನದಂಡಗಳನ್ನೂ ಕೂಡ ನಮ್ಮ ಹೆಮ್ಮೆಯ ಕನ್ನಡ ಭಾಷೆಯು ಅತ್ಯಂತ ಸಮರ್ಥನೀಯವಾಗಿ ಹೊಂದಿಕೊಳ್ಳುತ್ತದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.
೧. ಭಾಷೆಯ ದಾಖಲಿತ ಅಥವಾ ಪ್ರಾಚೀನ ದಾಖಲೆಗಳು ಕನಿಷ್ಠ ಸಾವಿರದ ಐದುನೂರು ವರ್ಷಗಳಿಗೂ ಹಿಂದಿನದಾಗಿರಬೇಕು.
೨. ಆ ಭಾಷಿಕ ಜನರು ಮೌಲಿಕವೆಂದು ಭಾವಿಸುವ ಪ್ರಾಚೀನ ಸಾಹಿತ್ಯ ಅಥವಾ ವಾಙ್ಮಯ ಆ ಭಾಷೆಯಲ್ಲಿರಬೇಕು.
೩. ಸಾಹಿತ್ಯ ಪರಂಪರೆಯು ಮೌಲಿಕವಾದದ್ದಾಗಿದ್ದು ಯಾವುದೇ ಇನ್ನೊಂದು ಭಾಷೆಯಿಂದ ಸ್ವೀಕೃತವಾದದ್ದಾಗಿರಬಾರದು.
೪.ಶಾಸ್ತ್ರೀಯ ಭಾಷೆಯು ಅದರ ಮುಂದಿನ ರೂಪದಿಂದ ಭಿನ್ನವಾಗಿರಬಹುದು ಅಥವಾ ಅದರ ಬೆಳವಣಿಗೆಯೇ ಸ್ಥಗಿತಗೊಂಡಿರಬಹುದು.
ಕನ್ನಡ ಭಾಷೆಯ ಸಾಹಿತ್ಯದ ಹಳಮೆಯನ್ನು ಅಳೆಯಲು ಇರುವ ಕೆಲ ಆಧಾರಗಳು.
ಅ. ಅನ್ಯ ದೇಶ ಅಥವಾ ಭಾಷೆಯಲ್ಲಿ ದೊರೆಯುವ ಪ್ರಾಚೀನ ಅವಶೇಷಗಳು.
ಆ. ಕರ್ನಾಟಕದಲ್ಲಿಯ, ಅದರಲ್ಲೂ ಕನ್ನಡದಲ್ಲಿ ಬರೆದ ಪ್ರಾಚೀನ ಶಾಸನಗಳು.
ಇ. ಕವಿರಾಜ ಮಾರ್ಗದಲ್ಲಿ ದೊರೆಯುವ ಆಧಾರಗಳು.
ಈ. ಇತರ ಗ್ರಂಥಗಳಲ್ಲಿ ದೊರೆಯುವ ಆಧಾರಗಳು.



ಅ. ಅನ್ಯ ದೇಶ ಅಥವಾ ಭಾಷೆಯಲ್ಲಿ ದೊರೆಯುವ ಪ್ರಾಚೀನ ಅವಶೇಷಗಳು.
ವೇದಪೂರ್ವ ಕಾಲದಿಂದಲೂ ಇಲ್ಲವೇ ವೇದಕಾಲದಿಂದಲೂ ಕನ್ನಡ ನಾಡು ನುಡಿಗಳು ಅಸ್ತಿತ್ವದಲ್ಲಿ ಇದ್ದವೆಂಬ ಊಹೆಗಳಿದ್ದರೂ ಕ್ರಿ.ಪೂ ಮೂರನೇ ಶತಮಾನದಿಂದಲಂತೂ ಇದ್ದವೆಂಬುದಕ್ಕೆ ತಕ್ಕ ಸಾಕ್ಷ್ಯಗಳಿವೆ. ಕ್ರಿ.ಶ ನೂರೈವತ್ತರ ಸುಮಾರಿನ ಗ್ರೀಕ್ ನ ಅಲೆಗ್ಸಾಂಡ್ರಿಯಾದ ಟಾಲೆಮಿಯೆಂಬ ಪ್ರವಾಸಿಗ ತನ್ನ ಬರಹಗಳಲ್ಲಿ ಮುದುಗಲ್ ಮೊದಲಾದ ಕನ್ನಡದ ಊರುಗಳ ಹೆಸರುಗಳನ್ನು ಉದ್ಗರಿಸಿದ್ದಾನೆ. ಗ್ರೀಕ್ ರ ಕ್ರಿಸ್ತಪೂರ್ವದ ಕೆಲವು ನಾಟಕಗಳಲ್ಲಿ ಕೆಲವು ಕನ್ನಡದ ಪದಗಳನ್ನು ಗುರುತಿಸಿದ್ದಾರೆ. ಕ್ರಿಸ್ತಶಕ ಮುನ್ನೂರೈವತ್ತರಲ್ಲಿ ಮೊದಲಾದ ಕದಂಬರ ಆಳ್ವಿಕೆ ಕನ್ನಡಿಗರ ಮೊಟ್ಟಮೊದಲ ಆಳ್ವಿಕೆಯಾಗಿದೆ. ಕ್ರಿಸ್ತಪೂರ್ವ ಮುನ್ನೂರೈವತ್ತರ ಆಶೋಕ ಚಕ್ರವರ್ತಿಯ ಬ್ರಹ್ಮಗಿರಿ ಶಾಸನದಲ್ಲಿ "ಇಸಿಲ" ಎಂಬ ಕನ್ನಡ ಪದದ ಬಳಕೆಯಾಗಿದೆ. ಗಾಥ ಸಪ್ತಶತಿ ಎಂಬ ಪ್ರಾಕೃತ ಭಾಷಾ ಗ್ರಂಥದಲ್ಲಿ, ಇದನ್ನು ಸಂಕಲನ ಮಾಡಿದ ಹಾಲ ರಾಜನು ತನ್ನನ್ನು ತಾನು ಕುಂತಲು ಜನಪದೇಶ್ವರ ಎಂದು ಕರೆದುಕೊಂಡ ಶಾತವಾಹನ ವಂಶದ ರಾಜನಾಗಿದ್ದಾನೆ. ಇವನು ಕ್ರಿಸ್ತಶಕ ೧-೨ ನೆಯ ಶತಮಾನದವನಾಗಿದ್ದು ಇವನ ಕಾವ್ಯಗಳಲ್ಲಿ ಪೊಟ್ಟ (ಹೊಟ್ಟೆ), ತುಪ್ಪ ಎಂಬ ನಾಮಪದಗಳಿವೆ ಅಲ್ಲದೆ ಪೆಟ್ಟು (ಹೊಡೆ), ತೀರ್ (ಶಕ್ಯವಾಗು) ಎಂಬ ಧಾತುಗಳನ್ನು ಬಳಸಿದ್ದಾನೆ.



ಆ. ಪ್ರಾಚೀನ ಶಾಸನಗಳು.

ಹಾಸನ ಜಿಲ್ಲೆಯ ಹಲ್ಮಿಡಿ (ಹನುಮಿಡಿ) ಗ್ರಾಮದಲ್ಲಿ ದೊರೆತಿರುವ ಕ್ರಿಸ್ತಶಕ ೪೫೦ರ ಸುಮಾರಿನ ಕದಂಬ ದೊರೆಗಳ ಶಾಸನವೇ ಪ್ರಸ್ತುತ ಲಭ್ಯವಿರುವ ಕನ್ನಡದ ಪ್ರಾಚೀನ ಬರಹ. ಈ ಶಾಸನವು ಕದಂಬ ದೊರೆಗಳು, ಪಲ್ಲವರೇ ಮೊದಲಾದವರನ್ನು ಸೋಲಿಸಿದ ವಿಜಾ ಅರಸ ಎಂಬ ವೀರ ಸೈನಿಕನಿಗೆ ಬಿಟ್ಟುಕೊಟ್ಟ ದಾನದ ವಿಷಯವನ್ನು ಹೇಳಿದೆ. ಈ ಶಾಸನ ಬಲು ಸುಂದರವಾದ ಗದ್ಯ ಶೈಲಿಯಲ್ಲಿದ್ದು ಇದು ರಚಿತವಾದ ಕನಿಷ್ಠ ೨-೩ ಶತಮಾನಗಳಿಗೂ ಮುಂಚಿನಿಂದಲೂ ಕನ್ನಡವು ಗ್ರಂಥಸ್ತ ಕಾವ್ಯ ಭಾಷೆಯಾಗಿತ್ತು ಎಂಬುದು ವೇದ್ಯವಾಗುತ್ತದೆ. ಹಾಗೆಯೇ ತಮಟ ಕಲ್ಲಿನ ಶಾಸನವು ಕ್ರಿಸ್ತಶಕ ೫೦೦ರದ್ದು ಎಂಬುದಾಗಿ ನಿರ್ಣಯವಾಗಿದೆ. ಬಾದಾಮಿಯ ಚಾಲುಕ್ಯರಾಜ ಮಂಗಲೀಶನ ಕ್ರಿಸ್ತಶಕ ೫೭೮ರ ಚಿಕ್ಕ ಶಿಲಾಶಾಸನದಲ್ಲೂ ಕನ್ನಡದ ಕವಿತೆಯಿದೆ. ಕ್ರಿಸ್ತಶಕ ೭ನೇ ಶತಮಾನದಲ್ಲಿ ಕಪ್ಪೆ‌ಅರಭಟ್ಟನ ಸ್ವಭಾವಚಿತ್ರವಿದ್ದು, ಕನ್ನಡ ತಾಯಿ ಬೇರಾದ ತ್ರಿಪದಿಯ ಮೂಲರೂಪವು ಅದರಲ್ಲಿದೆ. ಇತ್ತೀಚೆಗೆ ಬನವಾಸಿಯಲ್ಲಿ ದೊರೆತ ಕದಂಬರ ಕಾಲದ್ದೆಂದು ಹೇಳಲಾದ ಕ್ರಿಸ್ತಶಕ ೪೫೦ರ ನಾಣ್ಯವೊಂದು ದೊರೆತಿದ್ದು ಅದರಲ್ಲಿ ಕನ್ನಡದ ಅಕ್ಷರಗಳನ್ನು ಟಂಕಿಸಲಾಗಿದೆ. ಇದು ಕನ್ನಡ ಭಾಷಾ ಪುರಾತನತೆಗೆ ಸಾಕ್ಷಿಯಾಗಿದೆ.

ಇ. ಕವಿರಾಜ ಮಾರ್ಗದಲ್ಲಿ ದೊರೆಯುವ ಆಧಾರಗಳು.

ಕ್ರಿಸ್ತಶಕ ೮೫೦ರ ಸುಮಾರಿನಲ್ಲಿ ರಾಷ್ಟ್ರಕೂಟ ದೊರೆ ಅಮೋಘವರ್ಷ ನೃಪತುಂಗನ ಆಸ್ತಾನದಲ್ಲಿ ಕವಿಯಾಗಿದ್ದ ಶ್ರೀವಿಜಯನಿಂದ ರಚಿತನಾದ ಅಲಂಕಾರ ಗ್ರಂಥ ಕವಿರಾಜ ಮಾರ್ಗ. ಇದೇ ಪ್ರಸ್ತುತ ಲಭ್ಯವಿರುವ ಪ್ರಾಚೀನ ಕನ್ನಡ ಸಾಹಿತ್ಯಿಕ ಗ್ರಂಥವೂ ಆಗಿದೆ. ಈ ಗ್ರಂಥವು ಮಹತ್ವ ಪೂರ್ಣವಾಗಿದ್ದು ಇದು ಕನ್ನಡ ನಾಡು, ನುಡಿಗಳ ವಿಸ್ತಾರ, ಸ್ವರೂಪ, ಸಾಹಿತ್ಯ ಸ್ಥಿತಿ, ಕವಿಗಳಿಗೆ ಮಾರ್ಗವನ್ನು ತೋರುವ ವಿಮರ್ಶಾತ್ಮಕ ವಿಚಾರ ಪ್ರಣಾಲಿ ಎಂಬವುಗಳಿಂದ ಸ್ವತಂತ್ರವಾದ ಮತ್ತು ಮೌಲಿಕವಾದ ಗ್ರಂಥವಾಗಿದೆ. ಕನ್ನಡ ಸಾಹಿತ್ಯವು ಅಂದೂ, ಅದಕ್ಕಿಂತ ಬಹಳ ಹಿಂದಿನಿಂದಲೂ ಸಮೃದ್ಧವಾಗಿದ್ದವೆಂಬುದನ್ನು ಪ್ರಮಾಣೀಕರಿಸುತ್ತವೆ. ಕವಿರಾಜಮಾರ್ಗದಲ್ಲಿ ಸಂಸ್ಕೃತ ಗದ್ಯ ಪದ್ಯಗಳಲ್ಲಿಯ ಕವಿಕಾವ್ಯಗಳ ಸ್ತುತಿ ಮಾಡಿದ ನಂತರ ಕನ್ನಡ ಗದ್ಯ-ಪದ್ಯ ಕವಿಗಳ ಹಲವು ಹೆಸರುಗಳನ್ನು ಕೊಡಲಾಗಿದೆ. ಕನ್ನಡ ಸಾಹಿತ್ಯದ ಸಮೃದ್ಧತೆಯನ್ನೂ, ಪ್ರಾಚೀನತೆಯನ್ನೂ ತೋರಿಸಲು ಈ ಆಧಾರಗಳು ಬಹಳ ಸಹಾಯಕವಾಗಿವೆ. ವಿಮಲ, ಉದಯ, ನಾಗಾರ್ಜುನ, ಜಯಬಂಧು, ದುರ್ವಿನೀತರೆಂಬ ಗದ್ಯ ಕವಿಗಳು ಇದ್ದರೆಂಬ ಉಲ್ಲೇಖ ಇದರಲ್ಲಿದೆ. ಕನ್ನಡಾ ಗಬ್ಬದಗಳಲ್ಲಿ ಚಿರಂತನಾಚಾರ್ಯರು ಹೇಳಿದ ಅಗಣಿತ ಗುಣದ ಗದ್ಯಕಥೆಯ ಉಲ್ಲೇಖ, ಎಲ್ಲ ಕಲೆ, ಭಾಷೆ, ಲೋಕ, ಶಾಸ್ತ್ರ ಮುಂತಾದ್ದರ ವರ್ಣನೆಯುಳ್ಳ ವಸ್ತುವಿಚಾರವನ್ನು ಅರಿಯದವನಿಂದ ಗ್ರಂಥರಚನೆ ಆಗುವುದಿಲ್ಲವೆಂದು ಕವಿ ಶ್ರೀವಿಜಯ, ಕವಿರಾಜ ಮಾರ್ಗದಲ್ಲಿ ಹೇಳಿರುವುದು, ಈ ಎಲ್ಲ ಕವಿಗಳು ಅಂದಿಗಿಂತ ಬಹಳ ಹಿಂದೆ ಇದ್ದು ಸಾಧನೆ ಮಾಡಿದ ಮಹಾಕವಿಗಳೆಂಬುದನ್ನು ಸಾರುತ್ತವೆ. ಬೆದೆಂಡೆ- ಚತ್ತಾಣವೆಂಬ ಸಾಹಿತ್ಯ ಪ್ರಕಾರಗಳು ಪುರಾತನ ಕಾಲದಿಂದಲೂ ಇದ್ದವೆಂಬುದನ್ನು ಸಾರುವ ಕವಿರಾಜ ಮಾರ್ಗ, ಕನ್ನಡ ಸಾಹಿತ್ಯದ ಪುರಾತನತೆಗೆ ಅಗತ್ಯ ಸಾಕ್ಷ್ಯ ಒದಗಿಸುತ್ತದೆ.


ಈ. ಇತರೆ ಗ್ರಂಥಗಳಲ್ಲಿ ದೊರೆಯುವ ಆಧಾರಗಳು.

ಕವಿರಾಜ ಮಾರ್ಗದ ನಂತರದ ಕಾಲದ ಅನೇಕ ಸಾಹಿತ್ಯ ಕೃತಿಗಳಾಲ್ಲಿನ ಕೆಲ ಉಲ್ಲೇಖಗಳು ಈ ದಿಕ್ಕಿನಲ್ಲಿ ಬೆಳಕು ಚೆಲ್ಲುತ್ತವೆ. ಆದಿಕವಿ ಪಂಪ "ಪಂಪಭಾರತ"ದ ಕೊನೆಗೆ ಈ ಹಿಂದಿನ ಎಲ್ಲ ಕಾವ್ಯಗಳನ್ನೂ, ಭಾರತಗಳನ್ನೂ ಮೀರಿದ ಕೃತಿ ತನ್ನೆದೆಂದು ಹೇಳಿದ್ದಾನೆ. ಪಂಪ ಮತ್ತು ಶ್ರೀವಿಜಯನ ನಡುವಿನ ಕಾಲದಲ್ಲಿ ಅಷ್ಟೊಂದು ಖ್ಯಾತಿ ಪಡೆದ ಕವಿಗಳಾಗಲೀ, ಭಾರತ ಕೃತಿಗಳಾಗಲೀ ಇಲ್ಲದೇ ಇರುವುದರಿಂದ, ಈ ಒಕ್ಕಣೆಯು ನಿಶ್ಚಿತವಾಗಿ ಕವಿರಾಜಮಾರ್ಗಕ್ಕಿಂತಲೂ ಪೂರ್ವದಲ್ಲಿ ಅನೇಕ ಕನ್ನಡ ಭಾರತ ಕೃತಿಗಳು ರಚಿತವಾಗಿದ್ದವೆಂಬ ಸುಳಿವನ್ನು ನೀಡುತ್ತವೆ. ಹಾಗೆಯೇ, ಕ್ರಿ.ಶ.೪೮೨-೫೨೨ರ ಕಾಲದ ತಲಕಾಡಿನ ಗಂಗರಸ ದುರ್ವಿನೀತನು ಸ್ವತಃ ಸಾಹಿತಿಯಾಗಿದ್ದು ಕನ್ನಡದಲ್ಲಿ ವಡ್ಡ ಕಥೆ (ವಡ್ಡಾರಾಧನೆ)ಯನ್ನು ರಚಿಸಿಹನೆಂದು ರಾಷ್ಟ್ರಕವಿ ಗೋವಿಂದ ಪೈಗಳು ಪ್ರಮಾಣೀಕರಿಸಿದ್ದಾರೆ. ಜೊತೆಗೆ ಈತ "ಶಬ್ದಾವತಾರ"ವೆಂಬ ಕನ್ನಡ ಕೃತಿಯನ್ನೂ ರಚಿಸಿದ್ದಾನೆ.


ಈ ಎಲ್ಲವೂ ಕನ್ನಡ ಸಾಹಿತ್ಯಕ್ಕೆ ಒಂದು ಸಾವಿರದ ಐದುನೂರು ವರ್ಷಗಳಿಗೆ ಮಿಗಿಲಾದ ಪುರಾತನತೆಯಿರುವುದನ್ನು ಸಾಬೀತುಪಡಿಸುತ್ತವೆ.

೨. ಆ ಭಾಷಿಕ ಜನರು ಮೌಲಿಕವೆಂದು ಭಾವಿಸುವ ಪ್ರಾಚೀನ ಸಾಹಿತ್ಯ ಅಥವಾ ವಾಙ್ಮಯ ಆ ಭಾಷೆಯಲ್ಲಿರಬೇಕು.

ಕನ್ನಡ ಭಾಷೆಯ ಜನತೆ ಅತ್ಯಂತ ಮೌಲಿಕವೇಂದು ಭಾವಿಸುವ ಸಾಹಿತ್ಯ ಪರಂಪರೆಯೇ ನಮ್ಮಲ್ಲಿದೆ.
ಕ್ರಿ.ಶ ೮೫೦ ರ ಶ್ರೀವಿಜಯನ - ಕವಿರಾಜಮಾರ್ಗ,
ಕ್ರಿ.ಶ ೭ನೇ ಶತಮಾನದ ಶ್ಯಾಮಕುಂದಾಚಾರ್ಯರ - ಕನ್ನಡಾ ಪ್ರಭೃತ (ಪರಾ ಪದ್ಧತಿ) ಎಂಬ ಶಾಸ್ತ್ರಗ್ರಂಥ,
ಗುಣವರ್ಮನ ಚಂಪೂಕಾವ್ಯದಲ್ಲಿನ ಹರಿವಂಶ,
ಕ್ರಿ.ಶ. ೧೦ನೇ ಶತಮಾನದ ಶಿವಕೋಟ್ಯಾಚಾರ್ಯರ - ವಡ್ಡಾರಾಧನೆ,
ಕ್ರಿ.ಶ.೧೦ನೇ ಶತಮಾನದ ರನ್ನನ - ಗಧಾಯುದ್ಧ,
ಕ್ರಿ.ಶ. ೧೦ನೇ ಶತಮಾನದ ಆದಿಕವಿಪಂಪನ - ಪಂಪ ಭಾರತ,
ಕ್ರಿ.ಶ. ೧೦ನೇ ಶತಮಾನದ ಪಂಪನ - ಶಾಂತಿಪುರಾಣ,
ಕ್ರಿ.ಶ. ೧೧ನೇ ಶತಮಾನದ ದಾಸಿಮಯ್ಯರ - ವಚನಸಾಹಿತ್ಯ.
ಕ್ರಿ.ಶ. ೧೨ನೇ ಶತಮಾನದ ನಾಗಚಂದ್ರನ - ಮಲ್ಲಿನಾಥಪುರಾಣ,
ಕ್ರಿ.ಶ. ೧೨ನೇ ಶತಮಾನದ (೧೨೩೦)ಕೇಶಿ ರಾಜನ - ಶಬ್ದಮಣಿದರ್ಪಣ,
ಕ್ರಿ.ಶ. ೧೨ನೇ ಶತಮಾನದ ಪ್ರಭುದೇವ, ಬಸವಣ್ಣ, ಅಕ್ಕಮಹಾದೇವಿಯರ - ವಚನಸಾಹಿತ್ಯಗಳು,
ಕ್ರಿ.ಶ. ೧೩ನೇ ಶತಮಾನದ ಜನ್ನ, ಹರಿಹರ, ರಾಘವಾಂಕ, ಕಂದ, ಚಂಪು - ವೃತ್ತ, ರಗಳೆ, ಷಟ್ಪದಿಗಳು,
ಕ್ರಿ.ಶ. ೧೫ನೇ ಶತಮಾನದ ಕುಮಾರವ್ಯಾಸನ - ಕನ್ನಡ ಭಾರತ,
ಕ್ರಿ.ಶ. ೧೬ನೇ ಶತಮಾನದಲ್ಲಿ ಶ್ರೀಪಾದರಾಯರಾಗಿ ಪುರಂದರದಾಸರು, ಕನಕದಾಸರಿಂದ - ದಾಸ ಸಾಹಿತ್ಯ,
ಕ್ರಿ.ಶ. ೧೬ನೇ ಶತಮಾನದ ತತ್ವಸಾರಿದ ಸರ್ವಜ್ಞನ - ತ್ರಿಪದಿಗಳು,
ಕ್ರಿ.ಶ. ೧೮ನೇ ಶತಮಾನದ ಗಿರಿಯಮ್ಮ, ಜಗನ್ನಾಥ ದಾಸರ ದಾಸ ಸಾಹಿತ್ಯಗಳು,
ಕ್ರಿ.ಶ. ೨೦ನೇ ಶತಮಾನದ ಮುದ್ದಣ್ಣನ-ಷಪ್ಟದಿಗಳು, ಗದ್ಯಗಳು
ಕನ್ನಡಿಗರು ಮೌಲಿಕವೆಂದು ಭಾವಿಸುವ ಸಾಹಿತ್ಯ್ ಪರಂಪರೆಯಾಸ್ತಿತ್ವಕ್ಕೆ ಸಾಕ್ಷಿಯಾಗಿದೆ.

೨. ಶಾಸ್ತ್ರೀಯ ಭಾಷೆಯು ಮೌಲಿಕವಾಗಿದ್ದು ಪರಭಾಷೆಯಿಂದ ಸ್ವೀಕರಿಸಿರಬಾರದು.

ಭಾಷಾ ಶಾಸ್ತ್ರ ಅರಿತ ಯಾರೇ ಆಗಲಿ ಈ ಒಂದು ಮಾನದಂಡ ಎಷ್ಟು ಅಪ್ರಬುದ್ಧವೆಂಬುದು ತಿಳಿಯುತ್ತದೆ. ಯಾವ ಭಾಷೆಯೇ ಆಗಲಿ ತನ್ನ ಅಂದಂದಿನ ಸುತ್ತಲಿನ ಸಮಾಜದ ಇತರೆ ಭಾಷೆಗಳಿಂದ ಸ್ವೀಕರಿಸುತ್ತಾ ಬೆಳೆಯುತ್ತದೆ. ಹಾಗೆ ಸ್ವೀಕರಿಸಿ ಅರಗಿಸಿಕೊಳ್ಳುವ ಶಕ್ತಿ ಹೆಚ್ಚಿದಷ್ಟೂ ಭಾಷೆಯ ಬೆಳವಣಿಗೆ ಉತ್ಕೃಷ್ಟವಾಗುತ್ತದೆ. ಕನ್ನಡ ಭಾಷಾ ಸಾಹಿತ್ಯವು ಬೇರೆ ಭಾಷೆಯ ಮೇಲೆ ಅವಲಂಬಿತವಾಗದೆ ತನ್ನತನ ಹೊಂದಿರಲು ಬೇಕಾದ ಪುರಾವೆಗಳಿವೆ. ನಮ್ಮ ಕವಿರಾಜ ಮಾರ್ಗದಲ್ಲಿಯೇ, ಕವಿ ಶ್ರೀ ವಿಜಯ ಅಂದಿನ ನಾಡು ನುಡಿಯ ಪರಂಪರೆ ಸಾಹಿತ್ಯ ಸ್ವರೂಪ, ಕವಿಗಳಿಗೆ ಮಾರ್ಗದರ್ಶನ ನೀಡುವ ವಿಚಾರ ಶೈಲಿಗಳಿಂದ ಸ್ವತಂತ್ರ ಶೈಲಿ ಹೊಂದಿದೆ. ಇಲ್ಲಿನ ಜನರ ಆಡು ಭಾಷೆಯಲ್ಲಿಯೇ ಸಾಹಿತ್ಯಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ನಾಡೀನ ವಚನಕಾರರಿಗೆ ದಾಸ ಸಾಹಿತ್ಯ ನಿರ್ಮಾತೃಗಳಿಗೆ, ಜೈನ ಸಾಹಿತಿಗಳಿಗೆ ಸಲ್ಲುತ್ತದೆ. ಕರ್ನಾಟಕ ಸಂಗೀತಕ್ಕೆ ಅಮೂಲ್ಯ ಕೊಡುಗೆ ನೀಡಿದ, ತ್ಯಾಗರಾಜಾಧಿ ಇತರೆ ಭಾಷಾ ಕವಿಗಳಿಗೆ ಸ್ಪೂರ್ತಿ ನೀಡಿದ ದಾಸ ಸಾಹಿತ್ಯ ಪರಂಪರೆಯಿಂದ ಕನ್ನಡವು ಸಮೃದ್ಧಿ ಹೊಂದಿದೆ. ತ್ರಿಪದಿ, ಚೌಪದಿ, ಷಪ್ಟದಿ, ಕಿಗಳೆ, ಚಂದಸ್ಸು, ಕಂದ ಪದ್ಯ, ಚಂಪು ಶೈಲಿಯ ಸಾಹಿತ್ಯ ರತ್ನಗಳು ಆಯಾ ಕಾಲದ ಸಾಮಾಜಿಕ ಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದವು. ಇವೆಲ್ಲಕ್ಕೂ ಕಳಶವಿಟ್ಟಂತೆ ಕನ್ನಡ ನಾಡಿನಲ್ಲಿರುವ ಅಘಾದವಾದ ಜಾನಪದ ಸಾಹಿತ್ಯ, ಕನ್ನಡ ಸಾಹಿತ್ಯ ಪರಂಪರೆಯ ಸ್ವಾವಲಂಬತೆಯನ್ನು ಸಾಬೀತುಪಡಿಸುತ್ತದೆ.


೪. ಶಾಸ್ತ್ರೀಯ ಭಾಷೆಯು ಅದರ ಮುಂದಿನ ರೂಪದಿಂದ ಭಿನ್ನವಾಗಿರಬಹುದು ಅಥವಾ ಅದರ ಬೆಳವಣಿಗೆಯೇ ಸ್ಥಗಿತಗೊಂಡಿರಬಹುದು.

ಇದು ನಿಜಕ್ಕೂ ಒಂದು ಮಾನದಂಡವಲ್ಲ. ಇದು ಆ ಭಾಷೆಗೆ ನೀಡಲಾದ ರಿಯಾಯಿತಿ. ಕನ್ನಡ ಭಾಷಾ ಬೆಳವಣಿಗೆಯೂ ಕೂಡ ಕಾಲಕಾಲಕ್ಕೆ ಆಗುತ್ತಾ ಇಂದಿನ ರೂಪ ಪಡೆದಿದೆ. ಈ ಬೆಳವಣಿಗೆ ಕೂಡ ಸಕಾರಾತ್ಮವಾಗಿದ್ದು ಇಂದು ಕನ್ನಡ ವಿಶ್ವದ ಅತ್ಯಂತ ವೈಜ್ಞಾನಿಕ ಭಾಷೆಯಾಗಿ ನಿಂತಿದೆ. ವಿಶ್ವದಲ್ಲಿಯೇ ಭಾರತೀಯ ಭಾಷೆಗಳಿಗೆ ಒಂದು ಮಹತ್ವವಿದೆ. ಏಕೆಂದರೆ ಇವುಗಳು ಶಬ್ದಾಧಾರಿತ ಅಕ್ಷರಗಳನ್ನು ಹೊಂದಿದೆ. ಭಾಷಾ ವಿಜ್ಞಾನಿಗಳು ಮನುಷ್ಯ ಪ್ರಾಣಿ ಹೊರಡಿಸಬಲ್ಲ ಸುಮಾರು ೨೫೦ ಸ್ವರಗಳನ್ನು ಗುರುತಿಸಿದ್ದಾರೆ. ಭಾರತೀಯ ಭಾಷೆಗಳ ಮೂಲಕ್ಷರಗಳು ಇವನ್ನೇ ಹೋಲುವುದರಿಂದ ಇಲ್ಲಿ ಉಚ್ಚಾರಣೆಗೂ, ಲಿಪಿಗೂ ಅಂತಹ ವ್ಯತ್ಯಾಸವಿಲ್ಲ. ಉಳಿದದೆಲ್ಲ ಭಾಷೆಗಳಿಗಿಲ್ಲದ ವಿಸ್ತಾರ ಹೊಂದಿರುವ ಕನ್ನಡದಲ್ಲಿ ನಾವು ಉಚ್ಚರಿಸುವುದನ್ನೇ ಬರೆಯಬಹುದು. ಬರೆದುದನ್ನೇ ಉಚ್ಚರಿಸಬಹುದು. ಉದಾಹರಣೆಗೆ ಕಾವೇರಿಯೆಂಬುದನ್ನು ಅಕ್ಷರ ಬಲ್ಲ ಎಲ್ಲಾ ಕನ್ನಡಿಗರು ಒಂದೇ ತೆರನಾಗಿ ಉಚ್ಚರಿಸುತ್ತಾರೆ ಮತ್ತು ಬರೆಯುತ್ತಾರೆ. ದೇವನಾಗರಿ ಲಿಪಿಯಲ್ಲೂ ಇರದಂತಹ ಸ್ವರಗಳು ಕನ್ನಡದಲ್ಲಿವೆ. ಒ ಮತ್ತು ಓ, ಎ ಮತ್ತು ಏ ಎಂಬ ಭಿನ್ನ ಉಚ್ಚಾರಣೆಗಳಿವೆ. ಕನ್ನಡ ಭಾಷೆಗೆ ವಿಶ್ವದ ಅತ್ಯಂತ ಸುಂದರ ಲಿಪಿಯೆಂಬ ಹೆಗ್ಗಳಿಕೆ ಕೂಡ ಇದೆ. * ರಾಷ್ಟ್ರದ ಹಿರಿಯ ನಾಯಕರಾದ ಶ್ರೀ ವಿನೋಬಾ ಭಾವೆಯವರು ಕನ್ನಡವನ್ನು " ವಿಶ್ವಲಿಪಿಗಳ ರಾಣಿ " ಎಂದು ಕರೆದಿದ್ದಾರೆ. * ಅಲ್ಲದೆ ದೇಶದಲ್ಲೇ ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತಿಗಳ ಪಾಲಾಗಿದ್ದು ಕನ್ನಡ ಸಾಹಿತ್ಯದ ಹಿರಿಮೆಯನ್ನು ತೋರಿಸುತ್ತದೆ.

೧ ಕುವೆಂಪು.
೨. ದ.ರಾ.ಬೇಂದ್ರೆ.
೩. ಶಿವರಾಮಕಾರಂತ.
೪. ಮಾಸ್ತಿವೆಂಕಟೇಶ್ ಅಯ್ಯಂಗಾರ್.
೫. ವಿ.ಕೃ.ಗೋಕಾಕ್.
೬. ಅನಂತಮೂರ್ತಿ.
೭. ಗಿರೀಶ್ ಕಾರ್ನಾಡ್.
ಹೀಗಾಗಿ ಕನ್ನಡ ಶಾಸ್ತ್ರೀಯವು, ವೈಜ್ಞಾನಿಕವಾಗಿ ಉತ್ಕೃಷ್ಟವಾದ ಭಾಷೆಯಾಗಿದೆ.




ಚಿತ್ರ : ದೆಹಲಿಯ ಪ್ರತಿಭಟನೆ ವೇಳೆ ಕೇಂದ್ರ ಸಚಿವ ಶಿವರಾಜ್ ಪಾಟೇಲ್ ರವರ ಭೇಟಿ.


ಕೇಂದ್ರ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಸಲ್ಲಿಕೆ.

ಗೌರವಾನ್ವಿತರೇ,


ಈ ಎಲ್ಲಾ ಸಮರ್ಥನೆಗಳನ್ನು ನಿಮಗೆ ಸಲ್ಲಿಸುವ ಸಲುವಾಗಿ ನಾವು, ಇಡೀ ಪಂಚಕೋಟಿ ಕನ್ನಡಿಗರ ಧ್ವನಿಯಾಗಿ, ಪ್ರತಿನಿಧಿಗಳಾಗಿ ಇಲ್ಲಿಗೆ ಬಂದಿದ್ದೇವೆ. ನೀವು ಈಗಲಾದರೂ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಮುಂದಾಗುವಿರೆಂದು ಭಾವಿಸುತ್ತೇವೆ.

ಅನೇಕ ಪ್ರದೇಶ,ಭಾಷೆ, ಸಂಸ್ಕೃತಿ, ಜನಾಂಗಗಳನ್ನು ಹೊಂದಿರುವ ಭಾರತ ದೇಶದ ಬುನಾದಿಯೇ ಪರಸ್ಪರ ಗೌರವ ತೋರಿಸುವುದರಲ್ಲಿದೆ. ಹೀಗಿದ್ದಾಗ ಒಂದು ಭಾಷೆ ಮತ್ತೊಂದಕ್ಕಿಂತ ಮೇಲು ಕೀಳು ಎಂಬ ವರ್ಗೀಕರಣ ಎಷ್ಟರಮಟ್ಟಿಗೆ ಸಮಂಜಸವೆಂದು ಈಗ ಚಿಂತಿಸಬೇಕಾಗಿದೆ. ಪ್ರಾಚೀನತೆ, ಮೌಲ್ಯ, ಅನನ್ಯತೆಗಳೆದರಲ್ಲು ಒಂದಕ್ಕೊಂದು ಕಡಿಮೆ ಇರದ ಎರಡು ಭಾಷೆಗಳಲ್ಲಿ ಒಂದಕ್ಕೆ ಮಾನ್ಯತೆ ನೀಡಿ ಮತ್ತೊಂದನ್ನು ಕಡೆಗಣಿಸುವುದು ಇಡಿ ವ್ಯವಸ್ಥೆಗೆ ಮಾರಕವಾಗುವಂತಹ ನಿಲುವಲ್ಲವೇ?.



ಗೌರವಾನ್ವಿತ ಕೇಂದ್ರ ಸರ್ಕಾರ, ಶಾಸ್ತ್ರೀಯ ಭಾಷಾ ಸ್ಥಾನಮಾನ ತೀರ್ಮಾನಿಸಲು ನೇಮಿಸಿರುವ ಸಮಿತಿಗೆ ಶೀಘ್ರವಾಗಿ ಪರಿಗಣಿಸುವಂತೆ ಆದೇಶ ನೀಡಬೇಕೆಂದು ಒತ್ತಾಯ ಮಾಡುತ್ತೇವೆ. ಘನಕೇಂದ್ರ ಸರ್ಕಾರವು ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವುದಾಗಿ ಘೋಷಿಸಿ ಕರ್ನಾಟಕ ಏಕೀಕರಣದ ಐವತ್ತನೇ ವರ್ಷದ "ಸುವರ್ಣ ಕರ್ನಾಟಕ" ಆಚರಣೆಗೆ ಅರ್ಥಪೂರ್ಣ ಕೊಡುಗೆ ನೀಡಬೇಕೆಂದು ಆಗ್ರಹಿಸುತ್ತೇವೆ.

No comments: