Wednesday, July 7, 2010

ಪೃಥ್ವಿ: ಸಿನಿಮಾ ವಿಮರ್ಶೆ

ಪೃಥ್ವಿ: ಎಲ್ಲವೂ ಅನಿವಾರ್ಯ - ಸಿನಿಮಾ ವಿಮರ್ಶೆ



ಪುನಿತ್ ಚಿತ್ರಗಳಲ್ಲಿ ಆತನ ‘ಪವರ್’ದೇ ಕಾರುಬಾರು. ಇಲ್ಲಿಯೂ ಹಾಗೆ. ಮೊದಲಿಂದ ತುದಿಯವರೆಗೂ ಚಿತ್ರ ಪುನಿತ್ ಮಯ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದು ಪುನಿತ್ ಹೆಗ್ಗಳಿಕೆ, ನಿರ್ದೇಶಕರ ಕೈಚಳಕ. ಪುನಿತ್ ತನ್ನ ಮಾಮೂಲಿ ಇಮೇಜ್ ಬಿಟ್ಟು ತುಸು ವಿಭಿನ್ನ ಗೆಟ್-ಅಪ್ ನಲ್ಲಿ ಕಾಣಿಸಿದ್ದಾನೆ. ಇಲ್ಲಿ ಆತ ಬಳ್ಳಾರಿಯ ಡಿ.ಸಿ. ಪುನಿತ್ ಮೈಕಟ್ಟು , ಡ್ರೆಸ್ಸಿಂಗ್ ಆ ಪಾತ್ರಕ್ಕೆ ಪಕ್ಕಾ ಫಿಟ್. ಪುನಿತ್ ಕೆಲವೊಂದು ಸನ್ನಿವೇಶದಲ್ಲಿ ಡಾ||ರಾಜ್ ರನ್ನು ನೆನಪಿಸಿದರೆ ಅದು ಪುನಿತ್ ತಪ್ಪಲ್ಲ. ಇಡೀ ಚಿತ್ರ ಬಳ್ಳಾರಿ ಗಣಿ ಮಾಫಿಯಾದ ಸುತ್ತ ಸುತ್ತುತ್ತದೆ. ನಮಗೆಲ್ಲ ಗೊತ್ತಿರುವ ಕಥೆಯನ್ನೇ ಪರದೆಯ ಮೇಲೆ ನೋಡುವುದು ರೋಮಾಂಚಕ. ನಾವೆಲ್ಲಾ -ಯಾರಾದರೂ ಒಬ್ಬ ಡಿ.ಸಿ, ಒಬ್ಬ ಪೋಲಿಸ್ ಅಧಿಕಾರಿ, ಒಬ್ಬ ಮಂತ್ರಿ ಬಳ್ಳಾರಿ ರೆಡ್ಡಿಗಳಿಗೆ ಮಣ್ಣು( ಕಬ್ಬಿಣ?) ತಿನ್ನಿಸಲಿ ಎಂದು ಕನಸು ಕಾಣುವುದನ್ನು ಜೇಕಬ್ ವರ್ಗೀಸ್ ತೆರೆಯಮೇಲೆ ಪುನಿತ್ ಮುಖಾಂತರ ಮಾಡಿಸಿರುವುದು ಪ್ರಶಂಸಾರ್ಹ.



ಇನ್ನು, ನಾಯಕಿಯದು ಟಿಪಿಕಲ್ ಮಲಯಾಳಿ ಚೆಲುವು. ಸಾದಾ ದಿರಿಸಿನಲ್ಲಿ ಆಕೆಯ ಮುಖ, ಭಾವ, ನಟನೆ ಎಲ್ಲ ಮನಮೋಹಕ. 'ಸರಳ ವಿರಳ ಸುಂದರಿ' ಎಂದು ಹಂಸಲೇಖ ಹಲವೆಡೆ ತಮ್ಮ ಪದ್ಯದಲ್ಲಿ ಬಳಸಿರುವ ಸಾಲು ಪಾರ್ವತಿ ಮೆನನ್ ಗೆ ಹೇಳಿ ಮಾಡಿಸಿದಂತಿದೆ. ಇಷ್ಟು ಬಿಟ್ಟರೆ ಆಕೆಯಬಗ್ಗೆ ಮತ್ತೇನೂ ಹೇಳುವಂತಿಲ್ಲ; ಏಕೆಂದರೆ ಆಕೆ ಚಿತ್ರದಲ್ಲಿ ನೆಪ ಮಾತ್ರ.



ಇನ್ನೂ ಅನೇಕಾನೇಕ ಪಾತ್ರಗಳಲ್ಲಿ ( ಅವಿನಾಶ್, ರಮೇಶ್ ಭಟ್, ಸಿ.ಆರ್.ಸಿಂಹ, ಶ್ರೀನಿವಾಸ್ ಮೂರ್ತಿ) ನೆನಪುಳಿಯುವುದು ಖಳನಾಯಕ ಮಾತ್ರ. ಆತನ ಪಾತ್ರ ಪೋಷಣೆ, ನಟನೆ ಎಲ್ಲ ಸೂಪರ್. ಆತ ಕನ್ನಡದವನೋ, ಆಮದು ಸರಕೋ ಗೊತ್ತಿಲ್ಲ. ಹಳೆ ಯಾವ ಕನ್ನಡ ಚಿತ್ರದಲ್ಲೂ ನೋಡಿದ ನೆನಪಿಲ್ಲ.



ಇನ್ನು ಹಾಡುಗಳು: ಪುನಿತ್ ಚಿತ್ರದಲ್ಲಿ ಹಾಡುಗಳು ಚೆನ್ನಾಗಿರುತ್ತವೆ ಎಂಬ ಮಾತು ಇಲ್ಲಿ ಸುಳ್ಳಾಗಿದೆ. ಸವಾರಿಯಲ್ಲಿ ಕಾಡುವಂತ ಹಾಡು ಕೊಟ್ಟಿದ್ದ ಮಣಿಕಾಂತ್ ಕದ್ರಿ ಇಲ್ಲಿ ಸೋತಿದ್ದು ಸ್ಪಷ್ಟ. ಒಂದೆರಡು ಮನ ತಟ್ಟುವ ಹಾಡುಗಳಿದ್ದಿದ್ದರೆ ಆ ಗಮ್ಮತ್ತೇ ಬೇರೆಯಾಗುತ್ತಿತ್ತು. ಒಂದು ಹಾಡು ಶ್ರುತಿ ಹಾಸನ್ ಹಾಡಿದ್ದಾಳೆ. ಪಾಪ ನಮ್ಮ ಪಲ್ಲವಿ, ನಂದಿತಾ, ಲಕ್ಷ್ಮಿ, ಇವರೆಲ್ಲ ಅಬ್ಬೇಪಾರಿಗಳು ಅಂತಾ ಮತ್ತೊಮ್ಮೆ ಸಾಬೀತಾಯ್ತು. 'ನಿನಗಾಗೆ ವಿಶೇಷವಾದ ಮಾಹಿತಿ' ಅಂತ ಜಯಂತ್ ಬರೆದ ಪದ್ಯದ ಸಂಗೀತ ಇನ್ನೂ ಚೆನ್ನಾಗಿದ್ದಿದ್ದರೆ ಅದು ಸೂಪರ್ ಹಿಟ್ ಹಾಡುಗಳ ಸಾಲಿಗೆ ಸೇರುತ್ತಿತ್ತೋ ಏನೋ!



ಉಳಿದೆಲ್ಲ ವಿಭಾಗಗಳಲ್ಲಿ ಚಿತ್ರ ಪರಿಪೂರ್ಣ- ಚಿತ್ರಕಥೆ, ಸಂಕಲನ, ಕ್ಯಾಮರಾ ಎಲ್ಲವೂ ಚೆನ್ನ. ಅತಿ ಬಿಗಿ ಹಿಡಿತವುಳ್ಳ ಕಥೆ ಎಲ್ಲೂ ಬೋರ್ ಹೊಡೆಸುವುದಿಲ್ಲ. ಕ್ಲೈಮಾಕ್ಸ್ ತುಸು ..ಅಲ್ಲ ತುಂಬಾನೇ ಸಪ್ಪೆ. ಆದರೆ ಚಿತ್ರಕ್ಕೆ ಅದು ಅನಿವಾರ್ಯ.



"ನೀನು ಇಷ್ಟ, ಮದುವೆಯಾಗಬೇಕು ಅಂತಿದಿನಿ. ಒಪ್ಪಿದರೆ ಆಯ್ತು; ಇಲ್ಲ ಅಂದರೆ ನಾನು ಕೊರಗುತ್ತ ಕೂಡೊಲ್ಲ, ಬೇರೆಯವರನ್ನು ಮದುವೆ ಆಗ್ತೀನಿ..ಸಂತೋಷವಾಗಿವುವ ಪ್ರಯತ್ನಾನೂ ಮಾಡ್ತೀನಿ..." ಅಂತ ನಾಯಕಿ ನಾಯಕನಿಗೆ ಪ್ರಪೋಸ್ ಮಾಡುವ ರೀತಿ ಇಷ್ಟವಾಗುತ್ತೆ. ಉಳಿದ ಅನೇಕ ಚಿತ್ರಗಳ ಪ್ರೇಮನಿವೇದನಾ ಪ್ರಸಂಗಗಳಿಗಿಂತ ಭಿನ್ನ ಅನ್ನಿಸುತ್ತೆ.



"ನಲವತ್ತು ವರ್ಷ ಚಡ್ಡಿ ಹಾಕಿಕೊಂಡು ರಾಜಕೀಯ ಮಾಡಿದ್ದೇ ಸುಳ್ಳಾ....?" ಎನ್ನೋ ಡೈಲಾಗ್ ಬಿಜೆಪಿ ಹಾಗೂ ರೆಡ್ಡಿಗಳ ನಂಟು ನೆನಪಿಸಿ, ಸಿಳ್ಳೆ ಹೊಡೆಸುತ್ತೆ.



ಒಟ್ಟಿನಲ್ಲಿ;



ಪ್ರಸ್ತುತ ಸಾಮಾಜಿಕ ಸಮಸ್ಯೆಯನ್ನು ಬಿಂಬಿಸುವ ಚಿತ್ರಗಳು ಇಂದು ಅನಿವಾರ್ಯ, ಸ್ವಮೇಕ್ ಚಿತ್ರಗಳಂತೂ ಇನ್ನೂ ಅನಿವಾರ್ಯ. ಇಡೀ ಚಿತ್ರವನ್ನು ಪುನೀತ್ ಅವರಿಸುವುದೂ ಅನಿವಾರ್ಯ, ಚಿತ್ರಕ್ಕೆ ಅಂತಹ ಅಂತ್ಯ ಕೂಡ ಅನಿವಾರ್ಯ.ಸೋತು ಸುಣ್ಣಾಗಿರುವ ಕನ್ನಡ ಚಿತ್ರರಂಗ ಧೂಳು ಕೊಡವಿ ಎದ್ದೆಳಬೇಕಾಗಿರುವುದು ಅನಿವಾರ್ಯ.(ಅನಿವಾರ್ಯವಲ್ಲದ್ದು ಕನ್ನಡ ಚಿತ್ರಗಳನ್ನು ತಮಿಳರೆಲ್ಲಾ ಸೇರಿ ಗೆಲ್ಲಿಸಬೇಕು ಎಂಬುದು ಮಾತ್ರ!)

No comments: