Wednesday, July 7, 2010

ಯು.ಆರ್.ಅನಂತಮೂರ್ತಿ

ಶ್ರೀ ಯು ಆರ್ ಅನಂತಮೂರ್ತಿಕನ್ನಡಕ್ಕೆ ಆರನೆಯ ಜ್ಞಾನಪೀಠ ಪ್ರಶಸ್ತಿ ೧೯೯೪ರಲ್ಲಿ ಬಂದಾಗ ಕನ್ನಡ ಸಾಹಿತ್ಯ ಲೋಕ ಮತ್ತೊಮ್ಮೆ ಇಡೀ ದೇಶದ ಗಮನ ಸೆಳೆಯಿತು. ಈ ಗೌರವ ಪಡೆದವರು ಡಾ| ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ.

ಎಲ್ಲರಿಗೂ ಅವರವರ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಅತ್ಯಗತ್ಯ ಎಂದು ಬಲವಾಗಿ ಪ್ರತಿಪಾದಿಸುವ ಅನಂತಮೂರ್ತಿ; ವಿದೇಶಗಳ ಹಲವಾರು ಭಾಷೆ ತಿಳಿದಿರುವ ನಮಗೆ ನಮ್ಮ ಅಕ್ಕಪಕ್ಕದ ನಾಡಿನ ಭಾಷೆಗಳು ಗೊತ್ತೇ ಇಲ್ಲದ್ದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಜಗತ್ತಿನ ಬೇರೆ ಬೇರೆ ಭಾಷೆಗಳ ಹಲವು ಮಹತ್ವದ ಕೃತಿಗಳು ಇಂಗ್ಲೀಷಿಗೆ ಸಮರ್ಥವಾಗಿ ಅನುವಾದಗೊಳ್ಳಲು ಸಾಧ್ಯವಿಲ್ಲ ಎನ್ನುವುದ ಅವರ ಅಭಿಪ್ರಾಯವಾಗಿದೆ. ಕನ್ನಡ ಸಾಹಿತಿಯೂ ಮತ್ತು ಭಾರತೀಯ ಸಾಹಿತ್ಯದ ವಿಮರ್ಶಕರೂ ಆದ ಅನಂತಮೂರ್ತಿ ತಮ್ಮನ್ನು ಕನ್ನಡ ಸಂಸ್ಕೃತಿಯ Critical Insider ಎಂದು ಕರೆದುಕೊಳ್ಳುತ್ತಾರೆ.

ತಮ್ಮ ಬಹುಚರ್ಚಿತ ಸಂಸ್ಕಾರ ಕಾದಂಬರಿಯಿಂದ ಭಾರತೀಯ ಸಾಹಿತ್ಯ ಮತ್ತು ಚಲನಚಿತ್ರ ರಂಗಗಳಲ್ಲಿ ಒಂದು ದೊಡ್ಡ ವಿವಾದವನ್ನೇ ಮಾಡಿದ ಅನಂತಮೂರ್ತಿ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಹಳ್ಳಿಯಲ್ಲಿ. ಇಬ್ಬರು ಜ್ಞಾನಪೀಠ ಪ್ರಶಸ್ತಿ ವಿಜೇತ (ಕುವೆಂಪು ಮತ್ತು ಅನಂತಮೂರ್ತಿ) ರನ್ನು ನೀಡಿದ ಹೆಗ್ಗಳಿಕೆ ತೀರ್ಥಹಳ್ಳಿ ತಾಲ್ಲೂಕಿನದು. ಇವರು ಹುಟ್ಟಿದ್ದು ೧೯೩೨ರ ಡಿಸೆಂಬರ್ ೨೧ರಂದು. ತಂದೆ ಉಡುಪಿ ರಾಜಗೋಪಾಲಾಚಾರ್ಯ. ತಾಯಿ ಸತ್ಯಮ್ಮ (ಸತ್ಯಭಾಮ).

ಪರಿವಿಡಿ [ಅಡಗಿಸು]
೧ ವಿದ್ಯಾಭ್ಯಾಸ
೨ ವೃತ್ತಿ ಜೀವನ
೩ ಸಾಹಿತ್ಯ
೪ ಪ್ರಶಸ್ತಿಗಳು
೫ ಬಾಹ್ಯ ಸಂಪರ್ಕಗಳು


[ಬದಲಾಯಿಸಿ] ವಿದ್ಯಾಭ್ಯಾಸ
ದೂರ್ವಾಸಪುರದ ಸಾಂಪ್ರದಾಯಿಕ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಆರಂಭಿಸಿದ ಅನಂತಮೂರ್ತಿಯವರ ಓದು ಅನಂತರ ತೀರ್ಥಹಳ್ಳಿ, ಮೈಸೂರುಗಳಲ್ಲಿ ಮುಂದುವರೆಯಿತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದ ಇವರು ಹೆಚ್ಚಿನ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‍ವೆಲ್ತ್ ವಿದ್ಯಾರ್ಥಿ ವೇತನ ಪಡೆದ ಇವರು ಬರ್ಮಿಂಗ್‍ಹ್ಯಾಮ್ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ಮತ್ತು ತೌಲನಿಕ ಸಾಹಿತ್ಯ ಎಂಬ ವಿಷಯದಲ್ಲಿ ೧೯೬೬ರಲ್ಲಿ ಪಿಎಚ್.ಡಿ. ಪಡೆದರು.

ಶ್ರೀ ಅನಂತಮೂರ್ತಿ ಅವರ ಸಾಧನೆಯ ಬಗ್ಗೆ ಕನ್ನಡರತ್ನ.ಕಾಂ ನಲ್ಲಿ ಪ್ರಕಟವಾಗಿರುವ ಲೇಖನ http://kannadaratna.com/achievers/ura.html

[ಬದಲಾಯಿಸಿ] ವೃತ್ತಿ ಜೀವನ
೧೯೭೦ರಿಂದ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನಂತಮೂರ್ತಿಯವರು, ೧೯೮೭ರಲ್ಲಿ ಕೇರಳದ ಕೋಟ್ಟಯಂನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದ ಉಪಕುಲಗತಿಗಳಾಗಿದ್ದರು. ೧೯೯೨-೯೩ರ ಅವಧಿಯಲ್ಲಿ ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯದ ಅಧ್ಯಕ್ಷರಾಗಿದ್ದರು. ೧೯೯೩ರಲ್ಲಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಗೋಕಾಕರ ಅನಂತರ ಈ ಸಂಸ್ಥೆಯ ಅಧ್ಯಕ್ಷರಾದ ಎರಡನೆಯ ಕನ್ನಡಿಗರು ಇವರು.

ಅನಂತಮೂರ್ತಿಯವರು ದೇಶವಿದೇಶಗಳ ಹಲವು ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜವಾಹರಲಾಲ್ ನೆಹರೂ ವಿ.ವಿ., ಜರ್ಮನಿಯ ತೂಬಿಂಗೆನ್ ವಿ.ವಿ., ಅಮೇರಿಕ ದೇಶದ ಐಯೊವಾ ವಿ.ವಿ., ಟಫಟ್ಸ್ ವಿ.ವಿ., ಕೊಲ್ಲಾಪುರದ ಶಿವಾಜಿ ವಿ.ವಿ.ಗಳಲ್ಲಿ ಪ್ರಾಧ್ಯಾಪಕರಾಗಿದ್ದರು.

ಬರಹಗಾರರಾಗಿ, ಭಾಷಣಕಾರರಾಗಿ ಅನಂತಮೂರ್ತಿಯವರು ದೇಶದ ಒಳಗೆ ಮತ್ತು ಹೊರಗೆ ಹಲವಾರು ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ; ಉಪನ್ಯಾಸ ನೀಡಿದ್ದಾರೆ. ೧೯೮೦ರಲ್ಲಿ ಸೋವಿಯತ್ ರಷ್ಯಾ, ಹಂಗೇರಿ, ಪಶ್ಚಿಮ ಜರ್ಮನಿ ಮತ್ತು ಫ್ರಾನ್ಸ್ ದೇಶಗಳಿಗೆ ಭೇಟಿ ನೀಡಿದ ಭಾರತೀಯ ಲೇಖಕರ ಬಳಗದ ಸದಸ್ಯರಾಗಿದ್ದರು. ಮಾರ್ಕ್ಸ್‌ವಾದದಿಂದ ತುಂಬ ಪ್ರಭಾವಿತರಾಗಿದ್ದ ಇವರು ತಮ್ಮ ಹಲವಾರು ಅಭಿಪ್ರಾಯಗಳನ್ನು ಪರೀಕ್ಷಿಸಿ ನೋಡಲು ಈ ಭೇಟಿ ನೆರವಾಯಿತು. ಸೋವಿಯತ್ ಪತ್ರಿಕೆಯೊಂದರ ಸಲಹಾ ಸಮಿತಿಯ ಸದಸ್ಯರಾಗಿ ೧೯೮೯ರಲ್ಲಿ ಮಾಸ್ಕೋಗೆ ಭೇಟಿ ನೀಡಿದರು. ೧೯೯೩ರಲ್ಲಿ ಚೀನಾ ದೇಶಕ್ಕೆ ಭೇಟಿ ನೀಡಿದ ಭಾರತೀಯ ಬರಹಗಾರರ ಬಳಗಕ್ಕೆ ಇವರು ನಾಯಕರಾಗಿದ್ದರು. ಇವಲ್ಲದೆ ದೇಶವಿದೇಶಗಳ ಹಲವಾರು ವೇದಿಕೆಗಳಿಂದ ನೂರಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

ಇಷ್ಟೇ ಅಲ್ಲದೆ, ಅನಂತಮೂರ್ತಿಯವರು ಕನ್ನಡದ ಹಲವಾರು ಸಾಹಿತ್ಯ ದಿಗ್ಗಜರನ್ನು ರೇಡಿಯೋ ಮತ್ತು ದೂರದರ್ಶನಗಳಲ್ಲಿ ಸಂದರ್ಶಿಸಿದ್ದಾರೆ. ಮೈಸೂರು ಆಕಾಶವಾಣಿಗಾಗಿ ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಆರ್.ಕೆ. ನಾರಾಯಣ್, ಆರ್.ಕೆ.ಲಕ್ಷ್ಮಣ್ ಮತ್ತು ಜನರಲ್ ಕಾರಿಯಪ್ಪ ಅವರನ್ನು ಸಂದರ್ಶಿಸಿದ್ದಾರೆ. ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರುಗಳನ್ನು ಕುರಿತು ದೂರದರ್ಶನವು ನಿರ್ಮಿಸಿದ ಸಾಕ್ಷ್ಯ ಚಿತ್ರಗಳಲ್ಲಿ ಸಂದರ್ಶಕರಾಗಿ ಭಾಗವಹಿಸಿದ್ದಾರೆ.

[ಬದಲಾಯಿಸಿ] ಸಾಹಿತ್ಯ
ಅನಂತಮೂರ್ತಿಯವರು ಪ್ರಸಿದ್ಧರಾಗಿರುವುದು ಕನ್ನಡದ ಬರಹಗಾರರಾಗಿ ಮತ್ತು ಕನ್ನಡ ಸಂಸ್ಕೃತಿಯ critical insider ಆಗಿ. ೧೯೫೫ರಲ್ಲಿ "ಎಂದೆಂದೂ ಮುಗಿಯದ ಕತೆ" ಕಥಾ ಸಂಕಲನದಿಂದ ಅವರ ಸಾಹಿತ್ಯ ಕೃಷಿ ಆರಂಭವಾಯಿತು. ಮೌನಿ, ಪ್ರಶ್ನೆ, ಆಕಾಶ ಮತ್ತು ಬೆಕ್ಕು -ಇವರ ಕಥಾಸಂಕಲನಗಳು. ಈ ಎಲ್ಲ ಕತೆಗಳನ್ನೂ ಒಳಗೊಂಡ "ಮೂರು ದಶಕದ ಕಥೆಗಳು" ೧೯೮೯ರಲ್ಲಿ ಹೊರಬಂದಿದೆ. ಹಿರಿಯ ಸಮಾಜವಾದಿ ರಾಜಕಾರಣಿ ಜೆ. ಎಚ್. ಪಟೇಲರ ಸಮೀಪವರ್ತಿಯಾಗಿದ್ದ ಅನಂತಮೂರ್ತಿ ಅವರು ಶಾಂತವೇರಿ ಗೋಪಾಲ ಗೌಡ ಮತ್ತು ಲೋಹಿಯಾ ಅವರ ಪ್ರಭಾವಕ್ಕೆ ಒಳಗಾದವರು. ಇವರ ಬರಹದಲ್ಲಿ ಈ ಇಬ್ಬರ ಪ್ರಭಾವಗಳು ಎದ್ದು ಕಾಣುತ್ತವೆ.

೧೯೬೫ರಲ್ಲಿ ಇವರ ಮೊದಲ ಕಾದಂಬರಿ "ಸಂಸ್ಕಾರ" ಪ್ರಕಟವಾಯಿತು. ಪ್ರಕಟವಾದಾಗ ಮತ್ತು ಚಲನಚಿತ್ರವಾದಾಗ ತುಂಬ ವಿವಾದವನ್ನುಂಟು ಮಾಡಿದ ಈ ಕಾದಂಬರಿ ಹಲವಾರು ದೇಶೀಯ ಮತ್ತು ವಿದೇಶೀಯ ಭಾಷೆಗಳಿಗೆ ಅನುವಾದಗೊಂಡಿದೆ. ಭಾರತೀಪುರ, ಅವಸ್ಥೆ ಮತ್ತು ಭವ -ಇವರ ಇತರ ಕಾದಂಬರಿಗಳು. "ಆವಾಹನೆ" ಎಂಬ ಒಂದು ನಾಟಕವನ್ನು ಬರೆದಿರುವ ಅನಂತಮೂರ್ತಿ "೧೫ ಪದ್ಯಗಳು", "ಮಿಥುನ" ಮತ್ತು "ಅಜ್ಜನ ಹೆಗಲ ಸುಕ್ಕುಗಳು" ಎಂಬ ಮೂರು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ -ಇವು ಅವರ ಪ್ರಬಂಧ ಸಂಕಲನಗಳು. ಇಷ್ಟಲ್ಲದೆ ಇಂಗ್ಲೀಷಿನಲ್ಲಿ ಇವರು ಬರೆದಿರುವ ಹಲವಾರು ಪ್ರಬಂಧಗಳು ದೇಶ-ವಿದೇಶಗಳ ಸಾಹಿತ್ಯಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ೧೯೮೧ರಲ್ಲಿ ರಾಜಕೀಯ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ವಿಷಯಗಳಿಗೆಂದು "ರುಜುವಾತು" ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದರು.

ಅನಂತಮೂರ್ತಿಯವರ ಹಲವು ಕತೆಗಳು ಕನ್ನಡ ಸಾಹಿತ್ಯ ವಿಮರ್ಶಕರ ಗಮನ ಸೆಳೆದಿವೆ ಮತ್ತು ಚರ್ಚೆಗೂ ವಿವಾದಕ್ಕೂ ಒಳಗಾಗಿವೆ. ಸೂರ್ಯ ಕುದುರೆ, ನವಿಲುಗಳು, ಬರ, ಘಟಶ್ರಾದ್ಧ, ತಾಯಿ, ಹುಲಿಯ ಹೆಂಗರಳು ಈ ಸಾಲಿಗೆ ಸೇರುತ್ತವೆ.

ಅನಂತಮೂರ್ತಿಯವರ ಸಂಸ್ಕಾರ, ಅವಸ್ಥೆ ಕಾದಂಬರಿಗಳನ್ನು ಮತ್ತು ಬರ, ಘಟಶ್ರಾದ್ಧ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಘಟಶ್ರಾದ್ಧ ಕತೆಯನ್ನು ಆಧರಿಸಿ "ದೀಕ್ಷಾ" ಎಂಬ ಹಿಂದಿ ಚಲನಚಿತ್ರವೂ ತಯಾರಾಗಿದೆ. ಸಂಸ್ಕಾರ ಮತ್ತು ಘಟಶ್ರಾದ್ಧ ಚಲನಚಿತ್ರಗಳು ಭಾರತ ಸರಕಾರದಿಂದ ಸ್ವರ್ಣಕಮಲ ಪ್ರಶಸ್ತಿಯನ್ನು ಪಡೆದಿವೆ.

[ಬದಲಾಯಿಸಿ] ಪ್ರಶಸ್ತಿಗಳು
ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. ೧೯೮೩ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೮೪ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,೧೯೯೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೯೪ರಲ್ಲಿ ಮಾಸ್ತಿ ಪ್ರಶಸ್ತಿ -ಇವು ಅನಂತಮೂರ್ತಿಯವರಿಗೆ ಬಂದ ಮನ್ನಣೆಗಳಲ್ಲಿ ಕೆಲವು. ೧೯೯೪ರಲ್ಲಿ ಬಂದಿರುವ ಜ್ಞಾನಪೀಠ ಪ್ರಶಸ್ತಿ ಇವೆಲ್ಲವುಗಳಿಗೆ ಕಳಶಪ್ರಾಯವಾದುದು.

ವಿನಾಯಕ ಕೃಷ್ಣ ಗೋಕಾಕ

ಶ್ರೀ ವಿನಾಯಕ ಕೃಷ್ಣ ಗೋಕಾಕ್ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ಹಲವು ರೀತಿಯಲ್ಲಿ ಅದೃಷ್ಠವಂತರು. ಅವರು ಕನ್ನಡದ ಪ್ರತಿಭಾವಂತ ಕವಿ, ಪಂಡಿತರಾಗಿದ್ದರು. ಕನ್ನಡ-ಇಂಗ್ಲೀಷ್ ಭಾಷೆಗಳಲ್ಲಿ ಸಮಾನ ಪ್ರಭುತ್ವ ಪಡೆದಿದ್ದ ಅವರು ತಮ್ಮ ಜೀವಿತ ಕಾಲದಲ್ಲೇ ಒಬ್ಬ ಪ್ರತಿಭಾವಂತ ಸಾಹಿತಿಗೆ ದೊರಕಬೇಕಾದ ಎಲ್ಲ ಸಿದ್ಧಿ, ಪ್ರಸಿದ್ಧಿಗಳನ್ನು ಪಡೆದರು. ಗೋಕಾಕರು ಇದಕ್ಕೂ ಮೊದಲು ಭಾರತೀಯ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಮಿತಿಯ ಅಧ್ಯಕ್ಷರಾಗುವುದೇ ಒಂದು ದೊಡ್ಡ ಗೌರವ. ಅಂಥವರಿಗೇ ಜ್ಞಾನಪೀಠ ಪ್ರಶಸ್ತಿ ಸಹ ಬರುವುದೆಂದರೆ, ಸಾಮಾನ್ಯ ಸಾಧನೆಯಲ್ಲ!

ಪರಿವಿಡಿ [ಅಡಗಿಸು]
೧ ಜೀವನ
೨ ಕೃತಿಗಳು
೩ ಗೌರವಗಳು ಮತ್ತು ಪ್ರಶಸ್ತಿಗಳು
೪ ಗೋಕಾಕ್ ವರದಿ


[ಬದಲಾಯಿಸಿ] ಜೀವನ
ತಮ್ಮ ಹಲವು ಸಾಧನೆ, ಸಿದ್ಧಿಗಳಿಂದ ಕನ್ನಡಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯನ್ನೂ, ಗೌರವವನ್ನೂ ತಂದು ಕೊಟ್ಟ ವಿನಾಯಕ ಕೃಷ್ಣರಾವ್ ಗೋಕಾಕರು ೧೯೦೯ರ ಅಗಸ್ಟ್.೧೦ರಂದು ಧಾರವಾಡ ಜಿಲ್ಲೆಯ ಸವಣೂರು ಎಂಬಲ್ಲಿ ಜನಿಸಿದರು. ಅವರ ತಂದೆ ಕೃಷ್ಣರಾಯರು ವಕೀಲರಾಗಿದ್ದರು. ವಿನಾಯಕರು ಹುಟ್ಟಿದ ಕಾಲಕ್ಕೆ ಸವಣೂರು ಒಂದು ಪುಟ್ಟ ಸಂಸ್ಥಾನವಾಗಿತ್ತು. ಒಬ್ಬ ನವಾಬನ ಆಡಳಿತಕ್ಕೆ ಒಳಪಟ್ಟಿತ್ತು. ವಿನಾಯಕರ ವಿದ್ಯಾಭ್ಯಾಸ ಸವಣೂರು ಧಾರವಾಡಗಳಲ್ಲಿ ನಡೆಯಿತು. ಹೀಗೆ ವಿದ್ಯಾಭ್ಯಾಸದ ಸಲುವಾಗಿ ಧಾರವಾಡದಲ್ಲಿದ್ದಾಗಲೇ ಅವರಿಗೆ ಕನ್ನಡದ ವರಕವಿ ಬೇಂದ್ರೆಯವರ ಸಂಪರ್ಕ ಒದಗಿ ಬಂತು. ಗೋಕಾಕರ ಸಾಹಿತ್ಯ ಕೃಷಿ ಬೇಂದ್ರೆಯವರ ಮಾರ್ಗದರ್ಶನ, ಪ್ರೋತ್ಸಾಹಗಳಿಂದ ಮುಂದುವರೆಯಿತು. ಬೇಂದ್ರೆ ತಮ್ಮ ಕಾವ್ಯ ಗುರುವೂ, ಮಾರ್ಗದರ್ಶಕರೂ ಆಗಿದ್ದರೆಂದು ಗೋಕಾಕರೇ ಹೇಳಿಕೊಂಡಿದ್ದಾರೆ.

ಇಂಗ್ಲೀಷ್ ವಿಷಯದ ಎಂ.ಎ. ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಫರ್ಗ್ಯೂಸನ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಅವರು ತಮ್ಮ ವೃತ್ತಿಯಲ್ಲಿ ತಮ್ಮನ್ನು ಪೂರ್ತಿಯಾಗಿ ತೊಡಗಿಸಿಕೊಂಡರು.ಇದರ ಫಲವಾಗಿ ಕನ್ನಡದ ಗಂಡುಮೆಟ್ಟಿನ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆದುಕೊಂಡ. ಇವರ ತರಗತಿಗಳಿಗೆ ಬೇರೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕೂಡ ಪಾಠ ಕೇಳಲು ಬರುತ್ತಿದ್ದರಂತೆ.

ಇವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದ ಫರ್ಗ್ಯೂಸನ್ ಕಾಲೇಜಿನ ಆಡಳಿತ ವರ್ಗವೇ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಇವರನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿತು. ಗೋಕಾಕರು ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಓದಿದರು. ಪರೀಕ್ಷೆಯನ್ನು ಮೊದಲ ದರ್ಜೆಯಲ್ಲಿ ಪಾಸು ಮಾಡಿದರು. ಹೀಗೆ ಆಕ್ಸ್‌ಫರ್ಡ್‌ನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು. ಇಂಗ್ಲೆಂಡಿನಿಂದ ಹಿಂತಿರುಗಿ ಬಂದವರಿಗೆ ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನ ಪ್ರಿನ್ಸಿಪಾಲ ಹುದ್ದೆ ಕಾದಿತ್ತು. ಅನಂತರ ಕ್ರಮೇಣ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಧ್ಯಾಪಕನಾದವನೊಬ್ಬನು ಏರಬಹುದಾದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಹುದ್ದೆಗೂ ಏರಿದರು. ಅವರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜು, ಪುಣೆಯ ಫರ್ಗೂಸನ್ ಕಾಲೇಜು, ವೀಸನಗರದ ಕಾಲೇಜು, ಕೊಲ್ಲಾಪುರದ ರಾಜಾರಾಮ ಕಾಲೇಜು, ಧಾರವಾಡದ ಕರ್ನಾಟಕ ಕಾಲೇಜು, ಉಸ್ಮಾನಿಯಾ ವಿಶ್ವವಿದ್ಯಾಲಯ, ಹೈದರಾಬಾದಿನಲ್ಲಿರುವ ಇಂಗ್ಲೀಷ್ ಮತ್ತು ವಿದೇಶೀ ಭಾಷೆಗಳ ಕೇಂದ್ರ ಸಂಸ್ಥೆ, ಸಿಮ್ಲಾದಲ್ಲಿರುವ ಉನ್ನತ ಅಧ್ಯಯನ ಸಂಸ್ಥೆ -ಮೊದಲಾದ ಶಿಕ್ಷಣ ಸಂಸ್ಥೆಗಳಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಶ್ರೀಸತ್ಯಸಾಯಿ ಉನ್ನತ ಅಧ್ಯಯನ ಸಂಸ್ಥೆಯ ಉಪಕುಲಪತಿಗಳಾಗಿದ್ದರು. ಜಪಾನ್, ಅಮೆರಿಕ, ಇಂಗ್ಲೆಂಡ್, ಬೆಲ್ಜಿಯಂ, ಗ್ರೀಸ್, ಪೂರ್ವ ಆಫ್ರಿಕ ಮೊದಲಾದ ದೇಶಗಳಿಗೆ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಹೋಗಿ ಬಂದರು. ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ೧೯೯೨ರ ಎಪ್ರಿಲ್.೨೮ರಂದು ಬೆಳಗಿನ ಜಾವ ಮುಂಬಯಿಯಲ್ಲಿ ನಿಧನರಾದರು. ವಿನಾಯಕ ಕೃಷ್ಣ ಗೋಕಾಕ್ ಕುರಿತ ಮತ್ತೊಂದು ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ http://kannadaratna.com/achievers/gokak.html

[ಬದಲಾಯಿಸಿ] ಕೃತಿಗಳು
ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ, ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲೀಷಿನಲ್ಲಿ ಅವರು ಬರೆದಿರುವ ಕೃತಿಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚು. ಅವರ ಮೊದಲ ಪ್ರಕಟಿತ ಕೃತಿ "ಕಲೋಪಾಸಕರು". ಅವರು ಇಂಗ್ಲೆಂಡಿಗೆ ಸಮುದ್ರದ ಮೂಲಕ ಹೋಗಿ ಬಂದ ಅನುಭವಗಳನ್ನು ಆಧರಿಸಿ ರಚಿಸಿದ "ಸಮುದ್ರ ಗೀತೆಗಳು", "ಸಮುದ್ರದಾಚೆಯಿಂದ"- ಇವು ಮಹತ್ವದ ಕೃತಿಗಳಾಗಿವೆ. ಸಮುದ್ರ ಗೀತೆಗಳು ಕವನ ಸಂಕಲನದಲ್ಲಿರುವ "ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು" ಎಂಬ ಸಾಲಂತೂ ತುಂಬ ಪ್ರಸಿದ್ಧವಾಗಿದೆ. ಕನ್ನಡ ಸಾಹಿತ್ಯದಲ್ಲಿ "ನವ್ಯ" ಎಂಬ ಹೊಸಮಾರ್ಗ ಗೋಕಾಕರಿಂದಲೇ ಪ್ರಾರಂಭಗೊಂಡಿತು ಎಂಬ ಅಭಿಪ್ರಾಯವಿದೆ. ಗೋಕಾಕರು ನಾಟಕ, ಪ್ರಬಂಧ, ಪ್ರವಾಸ ಕಥನ, ವಿಮರ್ಶೆ ಮುಂತಾದ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಬೃಹತ್ ಕಾದಂಬರಿಗಳಲ್ಲಿ ಒಂದಾದ "ಸಮರಸವೇ ಜೀವನ" ಗೋಕಾಕರದ್ದೇ ಕೃತಿ. "ಜನನಾಯಕ" ಅವರ ಸುಪ್ರಸಿದ್ಧ ನಾಟಕ.

"ಭಾರತ ಸಿಂಧು ರಶ್ಮಿ" ವಿನಾಯಕರು ರಚಿಸಿದ ಮಹಾಕಾವ್ಯ. ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು. ವಿಶ್ವಾಮಿತ್ರ ಈ ಕಾವ್ಯದ ನಾಯಕ.

[ಬದಲಾಯಿಸಿ] ಗೌರವಗಳು ಮತ್ತು ಪ್ರಶಸ್ತಿಗಳು
ಗೋಕಾಕರು ಸಾಹಿತ್ಯ-ಸಂಸ್ಕೃತಿಗೆ ಸಲ್ಲಿಸಿದ ಸೇವೆಯನ್ನು ಗಮನಿಸಿ ಜನತೆಯೂ, ಸರ್ಕಾರವೂ ಅವರಿಗೆ ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿವೆ. ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು. ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು ೧೯೭೯ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ. ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಸಂದ ಗೌರವಗಳಾಗಿವೆ. ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ. ಗೋಕಾಕರ "ದ್ಯಾವಾ ಪೃಥಿವೀ" ಕವನ ಸಂಕಲನಕ್ಕೆ ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಬಂದಿತು.

ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡುವಾಗ ಪ್ರಶಸ್ತಿ ಆಯ್ಕೆ ಸಮಿತಿ ಅವರ ಯಾವುದೇ ಕೃತಿಯನ್ನು ಹೆಸರಿಸಲಿಲ್ಲ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ೧೯೬೯ರಿಂದ ೧೯೮೪ರ ಅವಧಿಯಲ್ಲಿ ನೀಡಿದ ಅನುಪಮ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಹೇಳಿದೆ. ಯಾವುದೇ ಕೃತಿಯನ್ನು ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಆದರೆ ಬಹಳ ಜನರು ಗೋಕಾಕರಿಗೆ ಅವರ ಮೇರು ಕೃತಿ "ಭಾರತ ಸಿಂಧು ರಶ್ಮಿ"ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ.

ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನ ಮಂತ್ರಿಗಳೇ ಮುಂಬಯಿಗೆ ಆಗಮಿಸಿದರು. ಇದು ಗೋಕಾಕರು ಎಷ್ಟು ಮಹತ್ವದ ವ್ಯಕ್ತಿ ಎಂಬುದಕ್ಕೆ ಒಂದು ನಿದರ್ಶನ.

[ಬದಲಾಯಿಸಿ] ಗೋಕಾಕ್ ವರದಿ
ತಮ್ಮ ಪಾಂಡಿತ್ಯದಿಂದಾಗಿ ಸಾಹಿತ್ಯ ಲೋಕದಲ್ಲಿ ಜನಪ್ರಿಯರಾಗಿದ್ದ ಗೋಕಾಕರಿಗೆ ಶ್ರೀಸಾಮಾನ್ಯರ, ಅನಕ್ಷರಸ್ಥರ ವಲಯದಲ್ಲೂ ಜನಪ್ರಿಯರಾಗುವ ಒಂದು ಸುಯೋಗ ಒದಗಿ ಬಂತು. ಕರ್ನಾಟಕ ಸರ್ಕಾರ ೧೯೮೦ರಲ್ಲಿ ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನ ಕುರಿತು ವರದಿ ನೀಡಲು ವಿ.ಕೃ. ಗೋಕಾಕರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿ ನೀಡಿದ ವರದಿ ಕನ್ನಡದ ಪರವಾಗಿತ್ತು. ಸರ್ಕಾರ ಈ ವರದಿಯನ್ನು ಅಂಗೀಕರಿಸಲು ಹಿಂದೆ ಮುಂದೆ ನೋಡಿತು. ಕನ್ನಡ ಜನತೆ ಮೊದಲ ಬಾರಿಗೆ ಒಕ್ಕೊರಲಿನಿಂದ ಗೋಕಾಕ್ ವರದಿ ಜಾರಿಗೆ ಬರಲಿ ಎಂದು ಸರ್ಕಾರವನ್ನು ಒತ್ತಾಯಿಸಿತು. ಈ ಸಂದರ್ಭದಲ್ಲಿ ನಡೆದ ಕನ್ನಡ ಚಳವಳಿ ಒಂದು ಐತಿಹಾಸಿಕ ದಾಖಲೆಯಾಗಿದೆ. ಕರ್ನಾಟಕದಲ್ಲಿ ಈ ಪ್ರಮಾಣದ ಚಳವಳಿ ಹಿಂದೆಂದೂ ನಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟವಾಗಲೀ, ಕರ್ನಾಟಕ ಏಕೀಕರಣ ಚಳವಳಿಯಾಗಲೀ ಕರ್ನಾಟಕದಲ್ಲಿ ಈ ಪ್ರಮಾಣದಲ್ಲಿ ನಡೆದಿರಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ. ಇದು ಇತಿಹಾಸದಲ್ಲಿ "ಗೋಕಾಕ್ ಚಳವಳಿ" ಎಂದೇ ದಾಖಲಾಗಿದೆ. ಈಗ ಇದರ ಫಲವಾಗಿ ಕರ್ನಾಟಕದ ಕನ್ನಡೇತರ ಶಾಲೆಗಳಲ್ಲೂ ಮೂರನೆಯ ತರಗತಿಯಿಂದ ಹತ್ತನೆಯ ತರಗತಿಯವರೆಗೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಓದಬೇಕಾಗಿದೆ. ಗೋಕಾಕ್ ಚಳವಳಿ ಕನ್ನಡಿಗರಲ್ಲಿ ಎಚ್ಚರವನ್ನು ಮೂಡಿಸಿದೆ. ಅಂದಿನಿಂದ ಕನ್ನಡಿಗರು ತಮ್ಮ ನಾಡು, ನುಡಿ ಹಾಗೂ ನೀರಿನ ಬಗ್ಗೆ ಸ್ವಲ್ಪ ಮಟ್ಟಿಗೆ ಜಾಗೃತರಾಗಿದ್ದಾರೆ. ಗೋಕಾಕರೇ ಸ್ವತಃ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಭಾಗವಹಿಸಿ ಜನರನ್ನು ಎಚ್ಚರಿಸಿದ್ದಾರೆ. ಅವರು ಅನೇಕ ಕನ್ನಡಪರ ನಿಯೋಗಗಳ ನಾಯಕತ್ವವನ್ನು ವಹಿಸಿ ಸರ್ಕಾರವನ್ನೂ ಎಚ್ಚರಿಸಿದ್ದಾರೆ. ಇದು ಗೋಕಾಕರ ಕನ್ನಡ ಪ್ರೀತಿಗೆ ನಿದರ್ಶನವಾಗಿದೆ.

ಗೋಕಾಕ್ ಅವರು ತಮ್ಮ ಬರಹ, ಬೋಧನೆಗಳಿಂದ ಕನ್ನಡದ ಗೌರವವನ್ನು ಹೆಚ್ಚಿಸಿದರು. ಹಾಗೆಯೇ "ಗೋಕಾಕ್ ವರದಿ"ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯಯುತ ಸ್ಥಾನವನ್ನು ದೊರಕಿಸಿಕೊಟ್ಟರು. ಈ ಎರಡೂ ಕೆಲಸಗಳಿಗಾಗಿ ಕನ್ನಡ ಜನತೆ ಗೋಕಾಕರನ್ನು ಸದಾ ಗೌರವ, ಕೃತಜ್ಞತೆಗಳಿಂದ ನೆನೆಯುತ್ತದೆ.